16 ಸಿಕ್ಸರ್, ಅಜೇಯ 254 ರನ್​: ಕ್ರಿಕೆಟ್ ಅಂಗಳವನ್ನು ಆಳಿದ ಆಟಗಾರನ ದುರಂತ ಅಂತ್ಯ..!

On This Day: 198 ಏಕದಿನ ಪಂದ್ಯಗಳಿಂದ 5088 ರನ್‌ಗಳು ಮತ್ತು 133 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಇನ್ನು 14 ಟಿ20 ಪಂದ್ಯಗಳಿಂದ 337 ರನ್‌ಗಳು ಮತ್ತು 8 ವಿಕೆಟ್‌ಗಳನ್ನು ಪಡೆದಿದ್ದಾರೆ.

16 ಸಿಕ್ಸರ್, ಅಜೇಯ 254 ರನ್​: ಕ್ರಿಕೆಟ್ ಅಂಗಳವನ್ನು ಆಳಿದ ಆಟಗಾರನ ದುರಂತ ಅಂತ್ಯ..!
Andrew Symonds
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 25, 2022 | 1:29 PM

ಅದು 1995, ಆಗಸ್ಟ್ 25…ಕ್ರಿಕೆಟ್​ಗೆ ತನುಮನ ಅರ್ಪಿಸುವ ಇಂಗ್ಲೆಂಡ್ ಕ್ರಿಕೆಟ್ ಪ್ರೇಮಿಗಳಿಗೆ 20 ವರ್ಷದ ಚಿರಯುವಕನೊಬ್ಬ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮನರಂಜನೆಯ ರಸದೌತಣ ಒದಗಿಸಿದ್ದ…ಈ ಒಂದು ಸ್ಪೋಟಕ ಇನಿಂಗ್ಸ್ ಸಾಕಾಯಿತು…ಆ ಯುವಕ ನೇರವಾಗಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾದ…ಆ ಬಳಿಕ ನಡೆದಿದ್ದೆಲ್ಲವೂ ಇತಿಹಾಸ. ಸೋಲುವ ಪಂದ್ಯಗಳನ್ನು ಗೆಲ್ಲಿಸಿಕೊಟ್ರು, ಫೀಲ್ಡಿಂಗ್​ ಮೂಲಕ ಪಂದ್ಯಗಳ ಫಲಿತಾಂಶ ಬದಲಿಸಿದ್ರು…ಆಲ್​ರೌಂಡರ್ ಆಗಿ ಎದುರಾಳಿ ಪಡೆಗಳಿಗೆ ನಡುಕ ಹುಟ್ಟಿಸಿದ್ರು…ಹೌದು, ನಾವು ಹೇಳಿದ 20 ವರ್ಷದ ಆ ಯುವಕ ಮತ್ಯಾರೂ ಅಲ್ಲ ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರಾಗಿರುವ ಆಂಡ್ರ್ಯೂ ಸೈಮಂಡ್ಸ್​.

1995 ರಲ್ಲಿ ರಾತ್ರೋರಾತ್ರಿ ಸ್ಟಾರ್ ಆಗುವ ಮೂಲಕ ತನ್ನ ಕೆರಿಯರ್ ಭವಿಷ್ಯವನ್ನೇ ಸೈಮಂಡ್ಸ್ ಬದಲಿಸಿಕೊಂಡಿದ್ದರು. ಅಂದು ಕೌಂಟಿಯಲ್ಲಿ ಗ್ಲೌಸೆಸ್ಟರ್‌ಶೈರ್‌ ಪರ ಕಣಕ್ಕಿಳಿದಿದ್ದ ಸೈಮಂಡ್ಸ್​ರನ್ನು ಯಾರು ಕೂಡ ಅಪಾಯಕಾರಿ ಎಂದು ಪರಿಗಣಿಸಿರಲಿಲ್ಲ. ಆದರೆ ಕೆಲವೇ ಕೆಲವು ಹೊತ್ತಿನಲ್ಲೇ ಗ್ಲಾಮೊರ್ಗಾನ್ ಬೌಲರ್​ಗಳಿಗೆ ನಡುಕ ಶುರುವಾಗಿತ್ತು.

ಏಕೆಂದರೆ ಆಗಷ್ಟೇ ಇಂಗ್ಲೆಂಡ್ ಕೌಂಟಿಗೆ ಪದಾರ್ಪಣೆ ಮಾಡಿದ್ದ ಆಂಡ್ರ್ಯೂ ಸೈಮಂಡ್ಸ್​ ಸಿಡಿಲಬ್ಬರ ಬ್ಯಾಟಿಂಗ್ ಆರಂಭಿಸಿದ್ದರು. ತಮ್ಮ ಸ್ಪೋಟಕ ಇನಿಂಗ್ಸ್​ನಲ್ಲಿ ಭರ್ಜರಿ 16 ಸಿಕ್ಸ್​ಗಳನ್ನು ಸಿಡಿಸಿದರು. ಅಲ್ಲದೆ 22 ಫೋರ್​ಗಳೊಂದಿಗೆ ಅಜೇಯ 254 ರನ್ ಚಚ್ಚಿದರು. ಸೈಮಂಡ್ಸ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಅಂದು ಗ್ಲೌಸೆಸ್ಟರ್‌ಶೈರ್‌ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 461 ರನ್​ ಕಲೆಹಾಕಿತು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ವಿಶೇಷ ಎಂದರೆ ಅಂದು 16 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಪ್ರಥಮ ದರ್ಜೆ ಇನ್ನಿಂಗ್ಸ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟ್ಸ್​​ಮನ್ ಎಂಬ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸುವ ಪಂದ್ಯವೊಂದರಲ್ಲಿ ಒಟ್ಟು 20 ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಸಹ ಬರೆದಿದ್ದರು.

ಆ ಒಂದು ಇನಿಂಗ್ಸ್ ಬೆನ್ನಲ್ಲೇ ಸೈಮಂಡ್ಸ್ ಹೆಸರು ಪ್ರಮುಖ ಪತ್ರಿಕೆಗಳಲ್ಲಿ ರಾರಾಜಿಸಿತು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಕಿರಿಯರ ತಂಡದಲ್ಲಿ ಅವಕಾಶ ಪಡೆದರು. ಇದಾಗಿ ವರ್ಷಗಳ ಅಂತರದಲ್ಲಿ ಅಂದರೆ, 1998 ರಲ್ಲಿ ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ ಸೈಮಂಡ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಆ ಬಳಿಕ 2004 ರಲ್ಲಿ ಟೆಸ್ಟ್ ಮತ್ತು 2005 ರಲ್ಲಿ ಟಿ20 ತಂಡಗಳಲ್ಲಿ ಸ್ಥಾನ ಪಡೆದರು. ಈ ನಡುವೆ 26 ಟೆಸ್ಟ್‌ಗಳಲ್ಲಿ 1462 ರನ್ ಮತ್ತು 24 ವಿಕೆಟ್‌ಗಳನ್ನು ಪಡೆದರು. 198 ಏಕದಿನ ಪಂದ್ಯಗಳಿಂದ 5088 ರನ್‌ಗಳು ಮತ್ತು 133 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಇನ್ನು 14 ಟಿ20 ಪಂದ್ಯಗಳಿಂದ 337 ರನ್‌ಗಳು ಮತ್ತು 8 ವಿಕೆಟ್‌ಗಳನ್ನು ಪಡೆದಿದ್ದಾರೆ.

ದುರಂತ ಅಂತ್ಯ:

ಒಂದು ಕಾಲದಲ್ಲಿ ಕ್ರಿಕೆಟ್ ಅಂಗಳದಲ್ಲಿ ರಾಜನಾಗಿ ಮೆರೆದಿದ್ದ ಸೈಮಂಡ್ಸ್ ಮೇ 14, 2022 ರಂದು ಕಾರು ಅಪಘಾತದಲ್ಲಿ ನಿಧನರಾದರು. 46 ವರ್ಷದ ಸೈಮಂಡ್ಸ್ ದುರಂತ ಅಂತ್ಯದ ಸುದ್ದಿ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿತು. ಟೌನ್ಸ್‌ವಿಲ್ಲೆ ಪಟ್ಟಣದಿಂದ ಸುಮಾರು 50 ಕಿ.ಮೀ ದೂರದಲ್ಲಿ ಸ್ವತಃ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹಠಾತ್ ಪಲ್ಟಿಯಾಗಿ ಅಪಘಾತಕ್ಕೀಡಾಗಿತ್ತು. ಗಂಭೀರ ಗಾಯಗೊಂಡಿದ್ದ ಸೈಮಂಡ್ಸ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಕ್ರಿಕೆಟ್ ಅಂಗಳದಲ್ಲಿ ಆಂಡ್ರ್ಯೂ ಸೈಮಂಡ್ಸ್ ಬರೆದಿಟ್ಟಿರುವ ದಾಖಲೆಗಳು ಇಂದಿಗೂ ಎಂದಿಗೂ ಅವರನ್ನು ನೆನಪಿಸಿಕೊಳ್ಳಲಿದೆ.

Published On - 1:25 pm, Thu, 25 August 22