2376 ರನ್‌, 19 ಶತಕ, 37 ವಿಕೆಟ್‌..! ರಣಜಿ ಇತಿಹಾಸದಲ್ಲಿ ನಡೆದಿದ್ದ ಈ ಪಂದ್ಯದ ಬಗ್ಗೆ ನಿಮಗೆಷ್ಟು ಗೊತ್ತು?

Ranji Trophy: ಈ ಪಂದ್ಯದಲ್ಲಿ ಒಟ್ಟು 37 ವಿಕೆಟ್‌ಗಳು ಉರುಳಿದ್ದವು. ಅಷ್ಟೇ ಅಲ್ಲ, 19 ಶತಕಗಳು ಕೂಡ ದಾಖಲಾಗಿದ್ದು, ಅದರಲ್ಲಿ 9 ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದ್ದರೆ, ಆಶ್ಚರ್ಯಕಾರಿ ಎಂಬಂತೆ ಬೌಲರ್‌ಗಳು ಕೂಡ 10 ಶತಕಗಳನ್ನು ಬಾರಿಸಿದ್ದರು.

2376 ರನ್‌, 19 ಶತಕ, 37 ವಿಕೆಟ್‌..! ರಣಜಿ ಇತಿಹಾಸದಲ್ಲಿ ನಡೆದಿದ್ದ ಈ ಪಂದ್ಯದ ಬಗ್ಗೆ ನಿಮಗೆಷ್ಟು ಗೊತ್ತು?
1949 ರ ರಣಜಿ ಟ್ರೋಫಿ

Updated on: Mar 11, 2023 | 11:51 AM

ಕಳೆದ ತಿಂಗಳಷ್ಟೇ ನಡೆದ ರಣಜಿ ಟ್ರೋಫಿಯಲ್ಲಿ (Ranji Trophy) ಸತತ ಎರಡನೇ ಬಾರಿಗೆ ಸೌರಾಷ್ಟ್ರ (sourashtra) ತಂಡ ಚಾಂಪಿಯನ್ ಆಗಿದ್ದ ವಿಚಾರ ನಿಮಗೆಲ್ಲ ಗೊತ್ತೆ ಇದೆ. ಆದರೆ ಇದೇ ರಣಜಿ ಟ್ರೋಫಿಯಲ್ಲಿ ನಿವ್ಯಾರು ಊಹಿಸುವುದಕ್ಕೂ ಸಾಧ್ಯವಾಗದ ಪಂದ್ಯವೊಂದು ನಡೆದಿತ್ತು ಎಂದರೆ ನೀವು ನಂಬುತ್ತೀರಾ?. ನಂಬಲೇಬೇಕು. ಈ ರಣಜಿ ಪಂದ್ಯದಲ್ಲಿ ಬರೋಬ್ಬರಿ 2000ಕ್ಕೂ ಹೆಚ್ಚು ರನ್‌, 19 ಶತಕಗಳು ಮತ್ತು 37 ವಿಕೆಟ್‌ಗಳು ಉರುಳಿದ್ದವು. ಇದೇ ದಿನ ಸರಿಯಾಗಿ 74 ವರ್ಷಗಳ ಹಿಂದೆ ಪೂನಾದಲ್ಲಿ ನಡೆದಿದ್ದ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಬಾಂಬೆ ಮತ್ತು ಮಹಾರಾಷ್ಟ್ರ (Bombay and Maharashtra) ತಂಡಗಳು ಮುಖಾಮುಖಿಯಾಗಿದ್ದವು. 1949 ರಲ್ಲಿ ಮಾರ್ಚ್​ 5 ರಿಂದ 11 ವರೆಗೆ ನಡೆದ ಈ ಪಂದ್ಯದಲ್ಲಿ ದಾಖಲೆ ಮಳೆ ಸುರಿದಿತ್ತು. ಎರಡೂ ತಂಡಗಳು ಒಟ್ಟಾಗಿ 2376 ರನ್ ಗಳಿಸಿದ್ದವು.

ಈ ಪಂದ್ಯದಲ್ಲಿ ಒಟ್ಟು 37 ವಿಕೆಟ್‌ಗಳು ಉರುಳಿದ್ದವು. ಅಷ್ಟೇ ಅಲ್ಲ, 19 ಶತಕಗಳು ಕೂಡ ದಾಖಲಾಗಿದ್ದು, ಅದರಲ್ಲಿ 9 ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದ್ದರೆ, ಆಶ್ಚರ್ಯಕಾರಿ ಎಂಬಂತೆ ಬೌಲರ್‌ಗಳು ಕೂಡ 10 ಶತಕಗಳನ್ನು ಬಾರಿಸಿದ್ದರು. ಅಂದರೆ ಉಭಯ ತಂಡದ ಬೌಲರ್​ಗಳು ಎರಡೂ ಇನ್ನಿಂಗ್ಸ್​ಗಳಲ್ಲಿ ತಮ್ಮ ಬೌಲಿಂಗ್ ಕೋಟಾದಲ್ಲಿ 100 ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದ್ದರು.

ಶತಕ ಸಿಡಿಸಿದ 9 ಬ್ಯಾಟ್ಸ್‌ಮನ್‌ಗಳು

74 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ 9 ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದರು. ಬಾಂಬೆ ಪರ ಮೊದಲ ಇನಿಂಗ್ಸ್‌ನಲ್ಲಿ ಮಾಧವ್ ಮಂತ್ರಿ 200, ಉದಯಕಾಂತ್ ಮರ್ಚೆಂಟ್ 143, ದತ್ತಾತ್ರೇಯ ಫಡ್ಕರ್ 131 ರನ್ ಗಳಿಸಿದರು. ಇನ್ನು ಮಹಾರಾಷ್ಟ್ರ ಪರ ಮೊದಲ ಇನಿಂಗ್ಸ್‌ನಲ್ಲಿ ಮನೋಹರ್ ದಾತಾರ್ 143 ರನ್, ಮಧುಸೂದನ್ 133 ರನ್ ಬಾರಿಸಿದರು. ಬಾಂಬೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಇದರಲ್ಲಿ ಉದಯಕಾಂತ್ ಮರ್ಚೆಂಟ್ 156, ದತ್ತಾತ್ರೇಯ ಫಡ್ಕರ್ 160 ರನ್ ಬಾರಿಸಿದರು. ಇದಕ್ಕುತ್ತರವಾಗಿ ಮಹಾರಾಷ್ಟ್ರ ತಂಡದ ಪರ ಮಧುಸೂದನ್ 100 ಮತ್ತು ಶರದ್ 146 ರನ್ ಬಾರಿಸಿದರು. ಇದರ ಹೊರತಾಗಿಯೂ ಮಹಾರಾಷ್ಟ್ರ ತಂಡಕ್ಕೆ ಗೆಲುವು ಸಾಧಿಸಲಾಗಲಿಲ್ಲ. ಅಂತಿಮವಾಗಿ ಈ ಪಂದ್ಯವನ್ನು ಬಾಂಬೆ 354 ರನ್‌ಗಳಿಂದ ಗೆದ್ದುಕೊಂಡಿತು.

IPL 2023: ‘ಇದು ಧೋನಿಯ ಕೊನೆಯ ಐಪಿಎಲ್’; ಖಚಿತ ಪಡಿಸಿದ ಮಾಜಿ ಸಿಎಸ್​ಕೆ ಆಟಗಾರ

ಮೊದಲು ಬ್ಯಾಟ್ ಮಾಡಿದ ಬಾಂಬೆ ಮೊದಲ ಇನ್ನಿಂಗ್ಸ್​ನಲ್ಲಿ 651 ರನ್ ಗಳಿಸಿತ್ತು. ಇದಾದ ಬಳಿಕ ಮಹಾರಾಷ್ಟ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಪ್ರಬಲ ಮುನ್ನಡೆ ಪಡೆದ ಬಾಂಬೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 714 ರನ್ ಗಳಿಸುವ ಮೂಲಕ ಡಿಕ್ಲೇರ್ ಮಾಡಿಕೊಂಡಿತು ಮತ್ತು ಮಹಾರಾಷ್ಟ್ರಕ್ಕೆ 959 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಮಹಾರಾಷ್ಟ್ರ ತಂಡ 604 ರನ್‌ಗಳಿಗೆ ಆಲೌಟ್ ಆಯಿತು.

ಬೌಲರ್​ಗಳು ಕೂಡ ಶತಕ ಬಾರಿಸಿದ್ದರು

ರಣಜಿ ಟ್ರೋಫಿಯ ಈ ಪಂದ್ಯದಲ್ಲಿ, 10 ಬೌಲರ್‌ಗಳು 100 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುವುದರ ಮೂಲಕ ಶತಕ ಪೂರೈಸಿದ್ದರು. ಮಹಾರಾಷ್ಟ್ರ ಪರ ಸಯಾಜಿರಾವ್ ಮೊದಲ ಇನಿಂಗ್ಸ್‌ನಲ್ಲಿ 195 ರನ್‌ಗಳಿಗೆ 3 ವಿಕೆಟ್, ದತ್ತಾತ್ರೇಯ ಚೌಧರಿ 149 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು. ಇತ್ತ ಬಾಂಬೆ ಪರ ಮಹಾರಾಷ್ಟ್ರದ ಮೊದಲ ಇನ್ನಿಂಗ್ಸ್‌ನಲ್ಲಿ ದತ್ತು 142 ರನ್‌ಗಳಿಗೆ 3 ವಿಕೆಟ್, ಕೇಕಿ ತಾರಾಪೋರ್ 119 ರನ್‌ಗಳಿಗೆ 6 ವಿಕೆಟ್ ಪಡೆದರು. ಬಾಂಬೆ ಎರಡನೇ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರದ ಬಾವುಸಾಹೇಬ್ 107 ರನ್‌ಗಳಿಗೆ ಒಂದು ವಿಕೆಟ್, ಸಯಾಜಿರಾವ್ 126 ರನ್‌ಗಳಿಗೆ ಒಂದು ವಿಕೆಟ್, ದತ್ತಾತ್ರೇಯ 210 ರನ್‌ಗಳಿಗೆ 4 ವಿಕೆಟ್ ಪಡೆದರು. ಕೊನೆಯ ಇನ್ನಿಂಗ್ಸ್‌ನಲ್ಲಿ ದತ್ತು 178 ರನ್‌ಗಳಿಗೆ 3 ವಿಕೆಟ್,ಕೇಕಿ ತಾರಾಪೋರ್ 180 ರನ್‌ಗಳಿಗೆ 3 ವಿಕೆಟ್ ಮತ್ತು ಗುಲಾಬ್ರೈ ರಾಮಚಂದ್ 121 ರನ್‌ಗಳಿಗೆ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sat, 11 March 23

Follow Us