AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ವರ್ಷ, 6 ಟ್ರೋಫಿ; ಟ್ರೋಲಿಗರಿಗೆ ಆಹಾರವಾದ ಸಂಜೀವ್ ಗೋಯೆಂಕಾ

15 ವರ್ಷ, 6 ಟ್ರೋಫಿ; ಟ್ರೋಲಿಗರಿಗೆ ಆಹಾರವಾದ ಸಂಜೀವ್ ಗೋಯೆಂಕಾ

ಪೃಥ್ವಿಶಂಕರ
|

Updated on:Jun 24, 2026 | 5:03 PM

Share

Rishabh Pant: ಲಕ್ನೋ ಸೂಪರ್​ಜೈಂಟ್ಸ್ ತಂಡದಲ್ಲಿ ದಾಖಲೆಯ 27 ಕೋಟಿ ರೂ.ಗೆ ಸೇರಿದ್ದ ರಿಷಭ್ ಪಂತ್, ಕೇವಲ ಎರಡೇ ವರ್ಷಕ್ಕೆ ತಂಡದಿಂದ ಹೊರಬಿದ್ದಿದ್ದಾರೆ. ನಾಯಕನಾಗಿ ಮತ್ತು ಆಟಗಾರನಾಗಿ ವೈಫಲ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. 2025ರ ಮೆಗಾ ಹರಾಜಿನ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ, ಪಂತ್‌ರನ್ನು ಧೋನಿ-ರೋಹಿತ್‌ಗೆ ಹೋಲಿಸಿ ಭವಿಷ್ಯದ ನಾಯಕ ಎಂದು ಹೊಗಳಿದ್ದರು. ಈಗ ಅವರ ಈ ಯೂ-ಟರ್ನ್ ನೆಟ್ಟಿಗರ ಟ್ರೋಲಿಂಗ್‌ಗೆ ಕಾರಣವಾಗಿದೆ.

2025 ರ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ವೇತನದೊಂದಿಗೆ ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ರಿಷಭ್​ ಪಂತ್​ ಇದೀಗ ಕೇವಲ ಎರಡೇ ವರ್ಷಕ್ಕೆ ತಂಡದಿಂದ ಹೊರಬಿದ್ದಿದ್ದಾರೆ. ಪಂತ್ ನಾಯಕತ್ವದಲ್ಲಿ ಲಕ್ನೋ ತಂಡದ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. ಎರಡೂ ಆವೃತ್ತಿಗಳಲ್ಲಿ ಪಂತ್ ನಾಯಕನಾಗಿ ಮತ್ತು ಆಟಗಾರನಾಗಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಖಚಿತವಾಗಿತ್ತು. ಆದರೆ ಅವರನ್ನು ತಂಡದಿಂದಲೇ ಹೊರಹಾಕಲಾಗುತ್ತದೆ ಎಂಬುದನ್ನು ಯಾರೂ ಕೂಡ ಊಹಿಸಿರಲಿಲ್ಲ. ಇದಕ್ಕೆ ಕಾರಣ 2025 ರ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ದಾಖಲೆಯ ಬೆಲೆಗೆ ಖರೀದಿಸಿದ ಬಳಿಕ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಆಡಿದ ಮಾತುಗಳು.

2025 ರ ಮೆಗಾ ಹರಾಜಿನ ಬಳಿಕ ನಿರೂಪಕ ಜತಿನ್ ಸಪ್ರು ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದ ಸಂಜೀವ್ ಗೋಯೆಂಕಾ, ಪಂತ್ ಅವರನ್ನು ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಾದ ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಹೋಲಿಸಿದ್ದರು. ಆ ವೇಳೆ ಪಂತ್​ನ ಹಾಡಿ ಹೊಗಳಿದ್ದ ಸಂಜೀವ್, ‘ನನ್ನ ಪ್ರಕಾರ ಪಂತ್ ಕನಿಷ್ಠ 12-14 ವರ್ಷಗಳ ಕಾಲ ಲಕ್ನೋ ಪರ ಆಡುತ್ತಾರೆ. ಆದ್ದರಿಂದ, ಇದು 15 ವರ್ಷಗಳಲ್ಲಿ ನಾಲ್ಕು, ಐದು ಅಥವಾ ಆರು ಐಪಿಎಲ್ ಟ್ರೋಫಿಗಳನ್ನು ಹೇಗೆ ಗೆಲ್ಲುವುದು ಎಂಬುದರ ಪ್ರಯಾಣವಾಗಿದೆ.

ಪ್ರಸ್ತುತ ಜನರು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಅತ್ಯಂತ ಯಶಸ್ವಿ ತಂಡಗಳೆಂದು ಕರೆಯುತ್ತಾರೆ. ಹಾಗೆಯೇ ಮಹಿ ಮತ್ತು ರೋಹಿತ್ ಅತ್ಯುತ್ತಮ ನಾಯಕರು ಎನ್ನುತ್ತಿದ್ದಾರೆ. ಹೌದು ಧೋನಿ ಮತ್ತು ರೋಹಿತ್ ಉತ್ತಮ ನಾಯಕರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನೀವು ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ, ಮುಂದಿನ 10 ವರ್ಷಗಳ ನಂತರ, ಇದೇ ಜನರು ಅತ್ಯಂತ ಯಶಸ್ವಿ ನಾಯಕರ ಬಗ್ಗೆ ಮಾತನಾಡುವಾಗ ಮಹಿ, ರೋಹಿತ್ ಜೊತೆಗೆ ರಿಷಭ್ ಪಂತ್ ಅವರ ಹೆಸರನ್ನು ಸೇರಿಸುತ್ತಾರೆ ಎಂದಿದ್ದರು. ಆದರೆ ಪಂತ್ ಬಗ್ಗೆ ಈ ರೀತಿಯ ಹೊಗಳಿಕೆಯ ಮಾತುಗಳನ್ನಾಡಿದ್ದ ಸಂಜೀವ್ ಗೋಯೆಂಕಾ ಕೇವಲ ಎರಡೇ ವರ್ಷಕ್ಕೆ ಪಂತ್ ಅವರನ್ನು ತಂಡಕ್ಕೆ ಹೊರಹಾಕಿರುವುದು ಈಗ ಟ್ರೋಲಿಗರಿಗೆ ಆಹಾರವಾದ್ದಂತ್ತಾಗಿದೆ. ಹೀಗಾಗಿ ನೆಟ್ಟಿಗರು ವಿವಿದ ರೀತಿಯಲ್ಲಿ ಲಕ್ನೋ ಮಾಲೀಕರ ಕಾಲೆಳೆಯುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 24, 2026 04:59 PM

Follow Us