ED ಇಕ್ಕಳದಲ್ಲಿ ಯುವರಾಜ್, ಧವನ್, ಉತ್ತಪ್ಪ, ರೈನಾ ವಿಲವಿಲ; ಕೋಟ್ಯಾಂತರ ಮೌಲ್ಯದ ಆಸ್ತಿ ಮುಟ್ಟುಗೋಲು
ED Seizes Cricketers' Assets: ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ ಪ್ರಚಾರ ಪ್ರಕರಣದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಶಿಖರ್ ಧವನ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಬೆಟ್ಟಿಂಗ್‌ನಿಂದ ಬಂದ ಆದಾಯವನ್ನು 'ಅಪರಾಧದ ಆದಾಯ' ಎಂದು ಪರಿಗಣಿಸಿ ಇಡಿ ಈ ಕ್ರಮ ಕೈಗೊಂಡಿದೆ. ವಿದೇಶಿ ಆಸ್ತಿಗಳಿಗೂ ಇಡಿ ಬಲೆ ಬೀಸಿದ್ದು, ಕೋಟಿಗಟ್ಟಲೆ ನಷ್ಟವಾಗುವ ಭೀತಿ ಎದುರಾಗಿದೆ.

ಟೀಂ ಇಂಡಿಯಾದ (Team India) ಹಲವು ಮಾಜಿ ಸ್ಟಾರ್ ಕ್ರಿಕೆಟಿಗರು ಇಡಿ (Enforcement Directorate) ಇಕ್ಕಳಕ್ಕೆ ಸಿಲುಕಿ ವಿಲವಿಲ ಒದ್ದಾಡುತ್ತಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ (Online betting) ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ 1xBet ಪ್ರಚಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ (Yuvraj Singh), ಶಿಖರ್ ಧವನ್, ಸುರೇಶ್ ರೈನಾ ಮತ್ತು ರಾಬಿನ್ ಉತ್ತಪ್ಪ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಮುಂದಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್ಫಾರ್ಮ್ಗಳ ಪ್ರಚಾರದಿಂದ ಬಂದ ಆದಾಯದಿಂದ ಯಾವ್ಯಾವ ಆಸ್ತಿಗಳನ್ನು ಖರೀದಿಸಿದ್ದಾರೋ ಆ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ ಎಂದು ವರದಿಯಾಗಿದೆ.
ಅಪರಾಧದ ಆದಾಯ
ಕಳೆದ ಕೆಲವು ತಿಂಗಳುಗಳಿಂದ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆ ಪ್ರಕಾರ ಭಾರತದ ಸ್ಟಾರ್ ಕ್ರಿಕೆಟಿಗರು ಹಾಗೂ ಬಾಲಿವುಡ್ ಸೆಲೆಬ್ರೆಟಿಗಳನ್ನು ಈಗಾಗಲೇ ತನಿಖೆಗೆ ಒಳಪಡಿಸಲಾಗಿದೆ. ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ಬೆಟ್ಟಿಂಗ್ ಅಪ್ಲಿಕೇಶನ್ ಸಂಸ್ಥೆಯಿಂದ ಭಾರಿ ಮೊತ್ತದ ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಲಾಗಿತ್ತು. ಇದೀಗ ಈ ಅನುಮೋದನೆ ಶುಲ್ಕದಿಂದ ಖರೀದಿಸಿದ ಸ್ವತ್ತುಗಳು ‘ಅಪರಾಧದ ಆದಾಯ’ ಎಂಬ ನಿರ್ಧಾರಕ್ಕೆ ಇಡಿ ಬಂದಿದೆ.
ಆಸ್ತಿ ಮುಟ್ಟುಗೋಲು
ಇಡಿ ತನಿಖೆಯ ಪ್ರಕಾರ, ಟೀಂ ಇಂಡಿಯಾದ ಕೆಲವು ಆಟಗಾರರು ಮತ್ತು ಸೆಲೆಬ್ರೆಟಿಗಳು ಈ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ. ಈ ಆದಾಯದಿಂದ ಹಲವು ಆಸ್ತಿಗಳನ್ನು ಖರೀದಿಸಲಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಸ್ತಿಗಳನ್ನು ಖರೀದಿಸಲಾಗಿದೆ ಎಂಬುದು ಇಡಿ ತನಿಖೆಯಿಂದ ಬಹಿರಂಗವಾಗಿದೆ. ಹೀಗಾಗಿ ಈ ಎಲ್ಲಾ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳಲಿದೆ. ಜಾರಿ ನಿರ್ದೇಶನಾಲಯದ ಈ ಕ್ರಮದಿಂದ ಕೋಟಿಗಟ್ಟಲೆ ನಷ್ಟವಾಗುವುದಂತೂ ಖಚಿತ.
ಇದರ ಜೊತೆಗೆ ವಿದೇಶದಲ್ಲಿರುವ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡರೆ ಮತ್ತಷ್ಟು ನಷ್ಟವಾಗಲಿದೆ. ಆದಾಗ್ಯೂ ಈ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡುವುದರಿಂದ ಪಡೆದ ಅನುಮೋದನೆ ಶುಲ್ಕವನ್ನು ಬಳಸಿಕೊಂಡು ಪ್ರತಿಯೊಬ್ಬ ಕ್ರಿಕೆಟಿಗನು ದೇಶದೊಳಗೆ ಖರೀದಿಸಿದ ಆಸ್ತಿಯ ಮೊತ್ತವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಕ್ರಿಕೆಟಿಗರು, ಸೆಲೆಬ್ರೆಟಿಗಳ ವಿಚಾರಣೆ
ಇತ್ತೀಚೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಯಲ್ಲಿ ನಾಲ್ವರು ಕ್ರಿಕೆಟಿಗರನ್ನು ಒಬ್ಬೊಬ್ಬರಾಗಿ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಕ್ರಿಕೆಟಿಗರು ಮಾತ್ರವಲ್ಲದೆ, ಚಲನಚಿತ್ರ ತಾರೆಯರಾದ ಸೋನು ಸೂದ್, ಮಿಮಿ ಚಕ್ರವರ್ತಿ ಮತ್ತು ಅಂಕುಶ್ ಹಜ್ರಾ ಅವರನ್ನು ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸಿದ್ದು, ಅವರ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಿದೆ. ಏತನ್ಮಧ್ಯೆ, ಪ್ರಸ್ತುತ ವಿದೇಶದಲ್ಲಿರುವ ನಟಿ ಊರ್ವಶಿ ರೌಟೇಲಾ ಅವರು ಇಡಿಯ ವಿಚಾರಣೆ ಇನ್ನು ಹಾಜರಾಗಿಲ್ಲ. ಆದಾಗ್ಯೂ ಅವರು ಭಾರತಕ್ಕೆ ಹಿಂದಿರುಗಿದ ಮೇಲೆ ಇಡಿ ಅವರ ತನಿಖೆ ನಡೆಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sun, 28 September 25
