ಮಿಯಾ ಮ್ಯಾಜಿಕ್: ಸಿರಾಜ್ ಬರೆದ ಐತಿಹಾಸಿಕ ದಾಖಲೆಗೆ ಒಂದು ವರ್ಷ
Asia Cup 2023 India vs Sri Lanka: ಈ ಪಂದ್ಯದಲ್ಲಿ 7 ಓವರ್ಗಳನ್ನು ಎಸೆದ ಮೊಹಮ್ಮದ್ ಸಿರಾಜ್ ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದರು. ಸಿರಾಜ್ ಅವರ ಈ ಕರಾರುವಾಕ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಕೇವಲ 50 ರನ್ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು 6.1 ಓವರ್ಗಳಲ್ಲಿ ಚೇಸ್ ಮಾಡಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು.
ಅದು ಸೆಪ್ಟೆಂಬರ್ 17, 2023… ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು 16 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಹೀಗೆ ಕೇವಲ 16 ಎಸೆತಗಳಲ್ಲಿ ಐದು ವಿಕೆಟ್ ಉರುಳಿಸಿ ಸಂಚಲನ ಸೃಷ್ಟಿಸಿದ್ದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡಕ್ಕೆ ಮೊದಲ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಇದಾದ ಬಳಿಕ ಶುರುವಾಗಿದ್ದೇ ಮಿಯಾ ಮ್ಯಾಜಿಕ್. 4ನೇ ಓವರ್ನ ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಂಕಾ ಅವರ ವಿಕೆಟ್ ಪಡೆದ ಸಿರಾಜ್, ಮೂರನೇ ಎಸೆತದಲ್ಲಿ ಸದೀರ ಸಮರವಿಕ್ರಮ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಇನ್ನು ನಾಲ್ಕನೇ ಎಸೆತದಲ್ಲಿ ಚರಿತ್ ಅಸಲಂಕಾ ಅವರನ್ನು ಔಟ್ ಮಾಡಿದರು. ಆರನೇ ಎಸೆತದಲ್ಲಿ ಧನಜಂಯ ಡಿಸಿಲ್ವಾ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಒಂದೇ ಓವರ್ನಲ್ಲಿ 4 ವಿಕೆಟ್ ಕಬಳಿಸಿದ ಸಿರಾಜ್, 6ನೇ ಓವರ್ನ 4ನೇ ಎಸೆತದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಕೇವಲ 4 ರನ್ ನೀಡಿ 5 ವಿಕೆಟ್ ಕಬಳಿಸಿದ ವಿಶೇಷ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ಅತೀ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಚಾಮಿಂಡ ವಾಸ್ ಈ ಸಾಧನೆ ಮಾಡಿದ್ದರು.
2003 ರಲ್ಲಿ ಶ್ರೀಲಂಕಾದ ಮಾಜಿ ವೇಗಿ ಚಾಮಿಂಡ ವಾಸ್ ಬಾಂಗ್ಲಾದೇಶ್ ವಿರುದ್ಧ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದರು. ಈ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಮೊಹಮ್ಮದ್ ಸಿರಾಜ್ ಹೊಸ ಇತಿಹಾಸ ನಿರ್ಮಿಸಿದ್ದರು.
ಈ ಪಂದ್ಯದಲ್ಲಿ 7 ಓವರ್ಗಳನ್ನು ಎಸೆದ ಮೊಹಮ್ಮದ್ ಸಿರಾಜ್ ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದರು. ಸಿರಾಜ್ ಅವರ ಈ ಕರಾರುವಾಕ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಕೇವಲ 50 ರನ್ಗಳಿಗೆ ಆಲೌಟ್ ಆಯಿತು.
ಸಿರಾಜ್ ಭರ್ಜರಿ ಬೌಲಿಂಗ್ ವಿಡಿಯೋ:
W . W W 4 W! 🥵 Is there any stopping @mdsirajofficial?! 🤯
The #TeamIndia bowlers are breathing 🔥 4️⃣ wickets in the over! A comeback on the cards for #SriLanka?
Tune-in to #AsiaCupOnStar, LIVE NOW on Star Sports Network#INDvSL #Cricket pic.twitter.com/Lr7jWYzUnR
— Star Sports (@StarSportsIndia) September 17, 2023
51 ರನ್ಗಳ ಸುಲಭ ಗುರಿಯನ್ನು ಟೀಮ್ ಇಂಡಿಯಾ 6.1 ಓವರ್ಗಳಲ್ಲಿ ಚೇಸ್ ಮಾಡಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 8ನೇ ಬಾರಿಗೆ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಐತಿಹಾಸಿಕ ಗೆಲುವಿಗೆ ಒಂದು ವರ್ಷ ಎಂಬುದೇ ವಿಶೇಷ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್ (ವಿಕೆಟ್ ಕೀಪರ್) , ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ಜಸ್ಪ್ರೀತ್ ಬುಮ್ರಾ , ಕುಲ್ದೀಪ್ ಯಾದವ್ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ , ಕುಸಾಲ್ ಪೆರೇರ , ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್) , ಸದೀರ ಸಮರವಿಕ್ರಮ , ಚರಿತ್ ಅಸಲಂಕ , ಧನಂಜಯ ಡಿ ಸಿಲ್ವ , ದಸುನ್ ಶಾನಕ (ನಾಯಕ) , ದುನಿತ್ ವೆಲ್ಲಲಾಗೆ , ದುಶನ್ ಹೇಮಂತ , ಪ್ರಮೋದ್ ಮದುಶನ್ , ಮಥೀಶ ಪತಿರಾಣ.