ಫೋನ್‌ನಲ್ಲಿ ಮಾತುಕತೆ, ನಾಯಕತ್ವದಿಂದ ಬಾಬರ್ ಕಿಕ್ ಔಟ್! ಪಾಕ್ ತಂಡಕ್ಕೆ ಹೊಸ ನಾಯಕ?
ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಬಾಬರ್ ಅಜಮ್ ಅವರಿಗೆ ವಿಶ್ರಾಂತಿ ನೀಡಲು ಪಿಸಿಬಿ ಯೋಚಿಸಿದ್ದು, ಹಾಲಿ ನಾಯಕ ಬಾಬರ್ ಬದಲು, ಈ ಸರಣಿಯಿಂದ ಅಫ್ರಿದಿ ತಂಡದ ನಾಯಕರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (Pakistan Super League) ನಡೆಯುತ್ತಿದ್ದು, ಈ ಲೀಗ್ನಲ್ಲಿ ಹಿಂದೆಂದೂ ಕಾಣದ ಅಚ್ಚರಿಯ ಪ್ರದರ್ಶನಗಳು ಕಂಡುಬರುತ್ತಿವೆ. ಬೌಲರ್ಗಳ ಲೀಗ್ ಎಂದೇ ಪ್ರಸಿದ್ದಿಯಾಗಿರುವ ಈ ಲೀಗ್ನಲ್ಲಿ ಇಂದು ರನ್ಗಳ ಸುನಾಮಿಯೇ ಎದ್ದಿದೆ. ಆದರೆ ಈ ನಡುವೆ ಪಾಕಿಸ್ತಾನ ಕ್ರಿಕೆಟ್ನಲ್ಲಿ ನಾಯಕತ್ವದ ಬದಲಾವಣೆ ಗಾಳಿ ಬೀಸಲಾರಂಭಿಸಿದ್ದು, ಹಾಲಿ ನಾಯಕ ಬಾಬರ್ ಅಜಮ್ (Babar Azam) ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ. ಅಲ್ಲದೆ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯಿಂದ ಶಾಹೀನ್ ಶಾ ಆಫ್ರಿದಿಗೆ (Shaheen Shah Afridi) ತಂಡದ ನಾಯಕತ್ವ ಹಸ್ತಾಂತರಿಸಲು ಪಿಸಿಬಿ ನಿರ್ಧರಿಸಿದೆ ಎಂಬ ಸುದ್ದಿ ಕೂಡ ಇದೆ. ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಮತ್ತು ಶಾಹೀನ್ ಶಾ ಆಫ್ರಿದಿ ನಡುವೆ ದೂರವಾಣಿ ಸಂಭಾಷಣೆ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪಿಎಸ್ಎಲ್ನಲ್ಲಿ ಟೇಬಲ್ ಟಾಪರ್ ಆಗಿರುವ ಲಾಹೋರ್ ಖಲಂದರ್ಸ್ (Lahore Qalandars) ತಂಡವನ್ನು ಮುನ್ನಡೆಸುತ್ತಿರುವ ಶಾಹೀನ್ಗೆ ಪಾಕ್ ತಂಡದ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.
ಪಾಕ್ ಮೀಡಿಯಾಗಳು ಮಾಡಿರುವ ವರದಿಯ ಪ್ರಕಾರ ಪಿಸಿಬಿ ಅಧ್ಯಕ್ಷರು ಶಾಹೀನ್ ಅಫ್ರಿದಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, ಪಾಕ್ ತಂಡದ ನಾಯಕತ್ವದ ವಹಿಸಿಕೊಳ್ಳುವ ಪ್ರಸ್ತಾವನೆಯನ್ನು ಅಫ್ರಿದಿ ಮುಂದಿಟ್ಟಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸುದ್ದಿಯ ಪ್ರಕಾರ, ನಜಮ್ ಸೇಥಿ ನೀಡಿರುವ ಈ ನಾಯಕತ್ವದ ಆಫರ್ ಅನ್ನು ಶಾಹೀನ್ ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
IND vs AUS: ಪಂದ್ಯದ ನಡುವೆ ಭಾರತಕ್ಕೆ ಬಿಗ್ ಶಾಕ್; ತಂಡದಿಂದ ಹೊರಬಿದ್ದ ಶ್ರೇಯಸ್ ಅಯ್ಯರ್!
ಫೋನ್‌ನಲ್ಲಿ ಮಾತು, ಕೈಯಲ್ಲಿ ಕ್ಯಾಪ್ಟನ್ಸಿ!
ವರದಿಯ ಪ್ರಕಾರ, ಫೋನ್‌ನಲ್ಲಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ನೀಡಿದ ನಾಯಕತ್ವದ ಆಫರ್ ಒಪ್ಪಿಕೊಳ್ಳಲು ಕೊಂಚ ಸಮಯ ತೆಗೆದುಕೊಂಡ ಶಾಹೀನ್ ಶಾ ಆಫ್ರಿದಿ ನಂತರ ನಾಯಕರಾಗಲು ತಮ್ಮ ಒಪ್ಪಿಗೆಯನ್ನು ಸೂಚಿಸಿದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಬಾಬರ್ ಅಜಮ್ ಅವರಿಗೆ ವಿಶ್ರಾಂತಿ ನೀಡಲು ಪಿಸಿಬಿ ಯೋಚಿಸಿದ್ದು, ಹಾಲಿ ನಾಯಕ ಬಾಬರ್ ಬದಲು, ಈ ಸರಣಿಯಿಂದ ಅಫ್ರಿದಿ ತಂಡದ ನಾಯಕರಾಗಲಿದ್ದಾರೆ ಎಂದು ತಿಳಿದುಬಂದಿದೆ.
ತಂಡದಲ್ಲಿ ಹಲವು ಬದಲಾವಣೆ
ಅಫ್ಘಾನಿಸ್ತಾನ ವಿರುದ್ಧದ ಸರಣಿಗಾಗಿ ಪಾಕಿಸ್ತಾನ ತಂಡವನ್ನು ಲಾಹೋರ್‌ನಲ್ಲಿ ಸದ್ಯದಲ್ಲೇ ಆಯ್ಕೆ ಮಾಡಲಾಗುವುದು ಎಂದು ವರದಿಗಳು ಹೇಳಿವೆ. ಅಲ್ಲದೆ ತಂಡದಲ್ಲಿ ಪ್ರಮುಖ ಬದಲಾವಣೆಗಳಲಾಗಿದ್ದು, ಹೊಸ ಮುಖಗಳಿಗೆ ಅವಕಾಶ ಸಿಗಲಿದೆ ಎಂದು ವರದಿಯಾಗಿದೆ. ಅಲ್ಲದೆ ತಂಡಕ್ಕೆ ಸೈಮ್ ಅಯೂಬ್, ಅಜಮ್ ಖಾನ್, ಎಹ್ಸಾನುಲ್ಲಾಬ್ ಮತ್ತು ಇಮಾದ್ ವಾಸಿಮ್ ಕೂಡ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. ಉಭಯ ದೇಶಗಳ ನಡುವಿನ 3 ಪಂದ್ಯಗಳ ಈ ಸರಣಿಯು ಮಾರ್ಚ್ 24 ರಿಂದ ಪ್ರಾರಂಭವಾಗಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಮಾರ್ಚ್ 26 ಮತ್ತು 27 ರಂದು ಯುಎಇಯ ಶಾರ್ಜಾದಲ್ಲಿ ನಡೆಯಲಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Mon, 13 March 23