PAK vs ENG: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅವಮಾನಕರ ಸೋಲಿಗೆ ಕೊರಳ್ಳೊಡಿದ ಪಾಕ್ ತಂಡ

|

Updated on: Oct 11, 2024 | 3:05 PM

PAK vs ENG: ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಉಭಯ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಲ್ತಾನ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 47 ರನ್‌ಗಳ ಜಯ ಸಾಧಿಸಿದೆ.

PAK vs ENG: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅವಮಾನಕರ ಸೋಲಿಗೆ ಕೊರಳ್ಳೊಡಿದ ಪಾಕ್ ತಂಡ
ಪಾಕ್ ತಂಡ
Follow us on

ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಉಭಯ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಲ್ತಾನ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 47 ರನ್‌ಗಳ ಜಯ ಸಾಧಿಸಿದೆ. ಇತ್ತ ತವರಿನಲ್ಲಿ ಈ ಸರಣಿಯನ್ನಾದರೂ ಗೆಲುವಿನೊಂದಿಗೆ ಆರಂಭಿಸುವ ಇರಾದೆಯಲ್ಲಿದ್ದ ಪಾಕಿಸ್ತಾನ ತಂಡ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅವಮಾನಕರ ಸೋಲಿಗೆ ಕೊರಳ್ಳೊಡಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ ಕ್ರಿಕೆಟ್ ಹೆಸರಿಗೆ ನಾಚಿಕೆಗೇಡಿನ ದಾಖಲೆಯೊಂದು ಸೇರ್ಪಡೆಯಾಗಿದೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಅನುಭವಿಸದ ಸೋಲನ್ನು ಪಾಕ್ ತಂಡ ಎದುರಿಸಿದೆ.

ಹೀನಾಯ ಸೋಲಿಗೆ ತುತ್ತಾದ ಪಾಕ್ ಪಡೆ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನಿಂಗ್ಸ್‌ ಆರಂಭಿಸಿದ್ದ ಪಾಕಿಸ್ತಾನ ತಂಡ 556 ರನ್ ಕಲೆಹಾಕಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ಕೂಡ 823 ರನ್​ಗಳ ಬಿಗ್ ಇನ್ನಿಂಗ್ಸ್ ಆಡಿತ್ತು. ಹೀಗಾಗಿ ಪಂದ್ಯದ ಮೊದಲ ಮೂರೂವರೆ ದಿನಗಳ ಕಾಲ ಪಂದ್ಯ ಡ್ರಾದತ್ತ ಸಾಗುವಂತೆ ತೋರುತ್ತಿತ್ತು. ಆದರೆ ನಾಲ್ಕನೇ ದಿನದ ಕೊನೆಯ ಸೆಷನ್‌ನಿಂದ ಪಂದ್ಯ ತಿರುವು ಪಡೆಯಿತು. ಅದರಂತೆ ಆತಿಥೇಯ ಪಾಕಿಸ್ತಾನ, ಇನಿಂಗ್ಸ್ ಮತ್ತು 47 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್‌ ಸೋಲು ಎದುರಿಸಿರುವುದು ಇದೇ ಮೊದಲು.

ಇಂಗ್ಲೆಂಡ್ ತಂಡದಿಂದ ದಿಟ್ಟ ಪ್ರದರ್ಶನ

ಪಾಕ್ ಕಲೆಹಾಕಿದ 556 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 150 ಓವರ್‌ಗಳಲ್ಲಿ 823 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 267 ರನ್‌ಗಳ ಮುನ್ನಡೆ ಸಾಧಿಸಿತು. ಆದರೆ ಈ ಸಮತಟ್ಟಾದ ಪಿಚ್‌ನಲ್ಲಿ ಪಾಕಿಸ್ತಾನದ ಎರಡನೇ ಇನ್ನಿಂಗ್ಸ್ ಕೇವಲ 220 ರನ್‌ಗಳಿಗೆ ಕುಸಿಯಿತು. ಇದರಿಂದಾಗಿ ಪಾಕ್ ತಂಡ ಇನ್ನಿಂಗ್ಸ್‌ ಸೋಲನ್ನು ಎದುರಿಸಬೇಕಾಯಿತು. ಪಂದ್ಯದ ಕೊನೆಯ ದಿನದಂದು 152 ರನ್‌ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಪಾಕ್ ತಂಡ ಮೊದಲ ಸೆಷನ್‌ನಲ್ಲಿಯೇ ಉಳಿದ 4 ವಿಕೆಟ್​ಗಳನ್ನು ಕಳೆದುಕೊಂಡು 220 ರನ್​ಗಳಿಗೆ ಆಲೌಟ್ ಆಯಿತು.

ರೂಟ್- ಬ್ರೂಕ್ ಆಟಕ್ಕೆ ಪಾಕ್ ಪಡೆ ಸುಸ್ತು

ಈ ಪಂದ್ಯದಲ್ಲಿ ಪಾಕ್ ಸೋಲಿಗೆ ಪ್ರಮುಖ ಕಾರಣವೆಂದರೆ ಅದು ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರ ದಾಖಲೆಯ ಜೊತೆಯಾಟ. ಮೊದಲ ಇನ್ನಿಂಗ್ಸ್‌ನಲ್ಲಿ ಜೋ ರೂಟ್ 262 ರನ್ ಗಳಿಸಿದರೆ, ಹ್ಯಾರಿ ಬ್ರೂಕ್ ತ್ರಿಶತಕ ಗಳಿಸಿ 317 ರನ್ ಕಲೆಹಾಕಿದರು. ಈ ಮೂಲಕ ಬ್ರೂಕ್ ಇಂಗ್ಲೆಂಡ್ ಪರ ವೇಗದ ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮತ್ತೊಂದೆಡೆ, ಇಬ್ಬರು ಆಟಗಾರರ ನಡುವೆ 454 ರನ್‌ಗಳ ಜೊತೆಯಾಟವಿತ್ತು, ಇದು ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ಅತಿದೊಡ್ಡ ಜೊತೆಯಾಟವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Fri, 11 October 24