ಪಾಕಿಸ್ತಾನ ಮತ್ತು ಇಂಗ್ಲೆಂಡ್ (Pakistan and England) ನಡುವಿನ 7 ಪಂದ್ಯಗಳ T20 ಸರಣಿ ಸುಖಾಂತ್ಯ ಕಂಡಿದೆ. ಸುಖಾಂತ್ಯ ಎಂದು ಹೇಳುವುದಕ್ಕೆ ಕಾರಣವೂ ಇದ್ದು, ಈ ಹಿಂದೆ ಪಾಕಿಸ್ತಾನಕ್ಕೆ ಬೇಟಿ ನೀಡಿದ್ದ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದರಿಂದ ಉಭಯ ದೇಶಗಳ ನಡುವಿನ ಸರಣಿ ನಿಂತುಹೋಗಿತ್ತು. ಆ ಬಳಿಕ ಪಾಕ್ ಪ್ರವಾಸಕ್ಕೆಂದು ಬಂದಿದ್ದ ನ್ಯೂಜಿಲೆಂಡ್ ಕೂಡ ಪ್ರಾಣ ಭಯದಿಂದ ಸರಣಿ ಆರಂಭಕ್ಕೂ ಮುನ್ನವೇ ಪಾಕ್ ತೊರೆದಿದ್ದು. ಈ ಎರಡು ಘಟನೆಗಳಿಂದ ಆತಂಕಗೊಂಡಿದ್ದ ಇಂಗ್ಲೆಂಡ್ ಪಾಕಿಸ್ತಾನಕ್ಕೆ ಬರಲು ಆರಂಭದಲ್ಲಿ ಹಿಂದೇಟು ಹಾಕಿತ್ತು. ಆದರೆ ಪಾಕ್ ಮಂಡಳಿ ನೀಡಿದ್ದ ಭದ್ರತೆಯ ಗ್ಯಾರಂಟಿ ಮೇಲೆ 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಬಂದಿದ್ದ ಇಂಗ್ಲೆಂಡ್ ಪಡೆ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೀಗ ಸರಣಿ ಮುಗಿದ ಬಳಿಕ ಇಂಗ್ಲೆಂಡ್ ನಾಯಕ ಮೊಯಿನ್ ಆಡಿರುವ ಮಾತುಗಳು ಪಾಕ್ ಮಂಡಳಿ ಮುಜುಗರ ಪಡುವಂತೆ ಮಾಡಿದೆ.
ಸರಣಿ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮೊಯಿನ್ ಅಲಿಯನ್ನು ಪಾಕಿಸ್ತಾನದ ಊಟೋಪಚಾರದ ಬಗ್ಗೆ ಕೇಳಲಾಯಿತು. ಇದಕ್ಕೆ ನೇರವಾಗಿಯೇ ಉತ್ತರಿಸಿದ ಪಾಕ್ ಮೂಲದ ಇಂಗ್ಲೆಂಡ್ ನಾಯಕ ಮೊಯಿನ್ ಅಲಿ, ನನಗೆ ಲಾಹೋರ್ನ ಊಟ ಇಷ್ಟವಾಗಲಿಲ್ಲ ಎಂದರು. ಆ ಬಳಿಕ ಕರಾಚಿ ಹಾಗೂ ಲಾಹೋರ್‌ನಲ್ಲಿ ಒದಗಿಸಲಾದ ಆಹಾರದ ನಡುವಿನ ವ್ಯತ್ಯಾಸವನ್ನು ಕೇಳಲಾಯಿತು. ಇದಕ್ಕೆ ಮೊಯಿನ್ ಅಲಿ ನೀಡಿದ ಉತ್ತರ ಎಲ್ಲರಿಗೂ ಸ್ವಲ್ಪ ಸಮಾದಾನ ತರಿಸಿತು.
ಲಾಹೋರ್‌ನಲ್ಲಿ ಊಟ ಕರಾಚಿಯಂತಿರಲಿಲ್ಲ – ಮೊಯಿನ್ ಅಲಿ
ಊಟದ ಬಗ್ಗೆ ಉತ್ತರಿಸಿದ ಮೊಯಿನ್ ಅಲಿ, “ಕರಾಚಿಯಲ್ಲಿನ ಊಟೋಪಚಾರ ಲಾಹೋರ್‌ಗಿಂತ ಉತ್ತಮವಾಗಿದೆ. ಲಾಹೋರ್‌ನಲ್ಲಿನ ಆಹಾರ ಉತ್ತಮವಾಗಿರಲಿಲ್ಲ. ಹೀಗಾಗಿ ನನಗೆ ಲಾಹೋರ್‌ಗಿಂತ ಕರಾಚಿಯಲ್ಲಿ ಮಾಡಿದ್ದ ಊಟದ ವ್ಯವಸ್ಥೆ ಇಷ್ಟವಾಯಿತು ಎಂದು ಅಲಿ ಹೇಳಿದ್ದಾರೆ. ಜೊತೆಗೆ ಪಾಕಿಸ್ತಾನ ನೀಡಿದ ಭದ್ರತಾ ವ್ಯವಸ್ಥೆಯನ್ನು ಹೊಗಳಿದ ಅಲಿ, ಇಲ್ಲಿ ನಮಗೆ ಕಲ್ಪಿಸಲಾಗಿದ್ದ ಭದ್ರತಾ ವ್ಯವಸ್ಥೆ ತುಂಬಾ ಸುರಕ್ಷಿತ ಮನೋಭಾವವನ್ನು ಹುಟ್ಟಿಸಿತು. ಹಾಗಾಗಿ ನಾವು ಯಾವುದೇ ಆತಂಕವಿಲ್ಲದೆ ಪಂದ್ಯವನ್ನಾಡಿದೆವು ಎಂದಿದ್ದಾರೆ.
Moeen Ali "food wise. I've been a little bit disappointed in Lahore. Karachi was really nice" #PakvEng #Cricket pic.twitter.com/I8lVa1Xsc1
— Saj Sadiq (@SajSadiqCricket) October 2, 2022
ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್
ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು 67 ರನ್‌ಗಳಿಂದ ಸೋಲಿಸಿತು. ಪಾಕಿಸ್ತಾನದ ಈ ಸೋಲಿನೊಂದಿಗೆ ಇಂಗ್ಲೆಂಡ್ 4-3 ರಿಂದ 7 ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ ಕೇವಲ 142 ರನ್ ಗಳಿಸುವ ಮೂಲಕ 67 ರನ್ಗಳ ಸೋಲೊಪ್ಪಿಕೊಂಡಿತು.
ಲಾಹೋರ್‌ನಲ್ಲಿ ನಡೆದ ಕೊನೆಯ ಟಿ20ಯಲ್ಲಿ ಮೊಯಿನ್ ಅಲಿ ಪ್ರದರ್ಶನದಲ್ಲಿ ವಿಶೇಷವೇನೂ ಇರಲಿಲ್ಲ. ಈ ಪಂದ್ಯದಲ್ಲಿ ಮೊಯಿನ್ ಅಲಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆ ಬಳಿಕ ಬೌಲಿಂಗ್ನಲ್ಲಿ ಕೇವಲ ಒಂದು ಓವರ್ ಎಸೆದ ಅಲಿ, ಯಾವುದೇ ವಿಕೆಟ್ ಪಡೆಯದೆ 5 ರನ್ ನೀಡಿದರು.