PAK vs NZ: ತವರಿನಲ್ಲಿ ಸತತ 5ನೇ ಸರಣಿ ಸೋಲು! ಮತ್ತೊಮ್ಮೆ ಸೋತ ಪಾಕ್, ಏಕದಿನ ಸರಣಿ ಗೆದ್ದ ಕಿವೀಸ್
PAK vs NZ: ಈ ಸೋಲಿನೊಂದಿಗೆ ತವರಿನಲ್ಲಿ ಪಾಕಿಸ್ತಾನ ಸತತ ಐದನೇ ಸರಣಿ ಗೆಲ್ಲಲು ವಿಫಲವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಳ್ಳುವ ಮೊದಲು, ಈ ಎರಡು ತಂಡಗಳ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಡ್ರಾ ಆಗಿತ್ತು.
ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಬೆನ್ನು ಬಿದ್ದಿರುವ ಸೋಲುಗಳ ಸರಣಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ತವರಿನಲ್ಲಿ ಸತತ ಸರಣಿಗಳ ಸೋಲಿನಿಂದ ಕಂಗೆಟ್ಟಿರುವ ಪಾಕ್ ಪಡೆಗೆ ಕಿವೀಸ್ ವಿರುದ್ಧದ (Pakistan vs New zealand) ಏಕದಿನ ಸರಣಿಯಲ್ಲೂ ಮುಖಭಂಗ ಎದುರಾಗಿದೆ. ಕರಾಚಿಯಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎರಡು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು 280 ರನ್ ಗಳಿಸಿತ್ತು. ನ್ಯೂಜಿಲೆಂಡ್ ತಂಡ 48.1 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಮೊದಲ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಿದೆ.
ಈ ಸೋಲಿನೊಂದಿಗೆ ತವರಿನಲ್ಲಿ ಪಾಕಿಸ್ತಾನ ಸತತ ಐದನೇ ಸರಣಿ ಗೆಲ್ಲಲು ವಿಫಲವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಳ್ಳುವ ಮೊದಲು, ಈ ಎರಡು ತಂಡಗಳ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಡ್ರಾ ಆಗಿತ್ತು. ಇದಕ್ಕೂ ಮುನ್ನ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿತ್ತು. ಅದಕ್ಕೂ ಮುನ್ನ ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಇದರೊಂದಿಗೆ, ಬಾಬರ್ ಅಜಮ್ ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡ ಮೊದಲ ಪಾಕಿಸ್ತಾನದ ನಾಯಕ ಎಂಬ ಬೇಡದ ದಾಖಲೆಗೆ ಕೊರೊಳ್ಳೊಡಿದ್ದಾರೆ.
Lalit Modi: ಹದಗೆಟ್ಟ ಲಲಿತ್ ಮೋದಿ ಆರೋಗ್ಯ; ಕೊರೊನಾ ಜೊತೆಗೆ ನ್ಯುಮೋನಿಯಾದಿಂದ ಬಳಲುತ್ತಿರುವ ಐಪಿಎಲ್ ಜನಕ
ಕಿವೀಸ್ಗೆ ಜಯ ತಂದುಕೊಟ್ಟ ಫಿಲಿಪ್ಸ್- ವಿಲಿಯಮ್ಸನ್ ಆಟ
281 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಒಟ್ಟು 43 ರನ್‌ಗಳಿಗೆ ಆಘಾತ ಅನುಭವಿಸಿತು. ಫಿನ್ ಅಲೆನ್ 25 ರನ್ ಗಳಿಸಿ ಔಟಾದರು. ಇದಾದ ಬಳಿಕ ಡೆವೊನ್ ಕಾನ್ವೆ ಮತ್ತು ವಿಲಿಯಮ್ಸನ್ ತಂಡದ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. ಕಾನ್ವೆ ತಂಡದ ಮೊತ್ತ ಒಟ್ಟು 108 ರನ್ ಇದ್ದಾಗ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 65 ಎಸೆತಗಳನ್ನು ಎದುರಿಸಿದ ಕಾನ್ವೆ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಇವರ ಬಳಿಕ ಕ್ಯಾಪ್ಟನ್ ವಿಲಿಯಮ್ಸನ್ ಡ್ಯಾರಿಲ್ ಮಿಚೆಲ್ ಜೊತೆಗೂಡಿ ತಂಡದ ಮೊತ್ತವನ್ನು ಏರಿಸಿದರು. ಆದರೆ ಮಿಚೆಲ್ಗೆ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 31 ರನ್ ಗಳಿಸಿ ಮಿಚೆಲ್ ಔಟಾದರು.
ಅರ್ಧಶತಕ ಪೂರೈಸಿದ ಬಳಿಕ ವಿಲಿಯಮ್ಸನ್ ಕೂಡ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 68 ಎಸೆತಗಳನ್ನು ಎದುರಿಸಿದ ಕೇನ್, ಎರಡು ಬೌಂಡರಿಗಳ ಸಹಾಯದಿಂದ 53 ರನ್ ಗಳಿಸಿದರು. ಕೇನ್ ವಿಕೆಟ್ ಬಳಿಕ ಕಿವೀಸ್ ಪಾಳಾಯದ ಪೆವಿಲಿಯನ್ ಪರೇಡ್ ಆರಂಭವಾಯಿತು. ಹೀಗಾಗಿ ನ್ಯೂಜಿಲೆಂಡ್ ಸೋಲಿನ ಸುಳಿಗೆ ಸಿಲುಕಿತು. ಆದರೆ ಒಂದು ತುದಿಯಲ್ಲಿ ಅಬ್ಬರಿಸಲು ಆರಂಭಿಸಿದ ಗ್ಲೆನ್ ಫಿಲಿಪ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಫಿಲಿಪ್ಸ್ 42 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ ಅಜೇಯ 63 ರನ್ ಗಳಿಸಿದರು.
ಫಖರ್ ಜಮಾನ್ ಶತಕ ವ್ಯರ್ಥ
ಇದಕ್ಕೂ ಮುನ್ನ ಪಾಕಿಸ್ತಾನ ಪರ ಫಖರ್ ಜಮಾನ್ ಶತಕ ಬಾರಿಸಿದ್ದರು. ಇವರನ್ನು ಬಿಟ್ಟರೆ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನ ಪರ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರನ್ನು ಬಿಟ್ಟಾರೆ ಮತ್ತ್ಯಾರು ಹೇಳಿಕೊಳ್ಳುವಂತಹ ಆಟ ಆಡಲಿಲ್ಲ. ಶಾನ್ ಮಸೂದ್ ಖಾತೆ ತೆರೆಯದೆ ಔಟಾದರೆ, ನಾಯಕ ಬಾಬರ್ ಅಜಮ್ ನಾಲ್ಕು ರನ್ ಗಳಿಸಿ ಔಟಾದರು. ಇವರಿಬ್ಬರು ಔಟಾದ ಬಳಿಕ ಫಖರ್ ಮತ್ತು ರಿಜ್ವಾನ್ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಇಬ್ಬರೂ ಶತಕದ ಜೊತೆಯಾಟವಾಡಿದರು. ಆದರೆ, ರಿಜ್ವಾನ್ ಶತಕ ಪೂರೈಸಲು ಸಾಧ್ಯವಾಗದೆ 77 ರನ್ ಗಳಿಸಿ ಔಟಾದರು. 74 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿಗಳನ್ನು ಬಾರಿಸಿದರು.
ಫಖರ್ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 122 ಎಸೆತಗಳನ್ನು ಎದುರಿಸಿ, 10 ಬೌಂಡರಿಗಳ ಹೊರತಾಗಿ ಒಂದು ಸಿಕ್ಸರ್ ಸೇರಿದಂತೆ 101 ರನ್ ವಾರಿಸಿದರು. ಅಂತಿಮವಾಗಿ ಅಗಾ ಸಲ್ಮಾನ್ 43 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 14 January 23