IND vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಸೂರ್ಯ- ಕಿಶನ್​ಗೆ ಸ್ಥಾನ

IND vs AUS: ಮುಂದಿನ ತಿಂಗಳು ಭಾರತದಲ್ಲಿಯೇ ನಡೆಯಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್‌ಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿ ಸರಣಿಯ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಶುಕ್ರವಾರ ತಡರಾತ್ರಿ ಬಿಸಿಸಿಐ ಭಾರತೀಯ ತಂಡವನ್ನು ಪ್ರಕಟಿಸಿದೆ.

IND vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಸೂರ್ಯ- ಕಿಶನ್​ಗೆ ಸ್ಥಾನ
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Jan 14, 2023 | 10:40 AM

ಮುಂದಿನ ತಿಂಗಳು ಭಾರತದಲ್ಲಿಯೇ ನಡೆಯಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಣ 4 ಟೆಸ್ಟ್‌ಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಶುಕ್ರವಾರ ತಡರಾತ್ರಿ ಬಿಸಿಸಿಐ (BCCI) ಭಾರತೀಯ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲೂ ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಬಿಸಿಸಿಐ, ಟಿ20ಯ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್​ಗೆ (Suryakumar Yadav) ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ನೀಡಿದೆ. ಸೂರ್ಯ ಅಲ್ಲದೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಇಶಾನ್ ಕಿಶನ್ (Ishan Kishan) ಕೂಡ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅದೇ ಸಮಯದಲ್ಲಿ ಇಂಜುರಿಯಿಂದಾಗಿ ಬಹಳ ದಿನಗಳಿಂದ ತಂಡದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಕೂಡ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಅವರು ಆಸ್ಟ್ರೇಲಿಯಾ ವಿರುದ್ಧ ಆಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿ, ಆ ನಂತರ ತಂಡದಿಂದ ಕೈಬಿಟ್ಟಿದ್ದ ಜಸ್ಪ್ರೀತ್ ಬುಮ್ರಾ, ಈ ಟೆಸ್ಟ್ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಗಳಿವೆ. ಇದಕ್ಕೆ ಪೂರಕವಾಗಿ ಈಗ ಆಯ್ಕೆ ಮಾಡಿರುವ ತಂಡದಲ್ಲಿ ಬುಮ್ರಾ ಹೆಸರು ಕಾಣಿಸಿಕೊಂಡಿಲ್ಲ. ಹೀಗಾಗಿ ಬುಮ್ರಾ ತಮ್ಮ ಬೆನ್ನುನೋವಿನ ಇಂಜುರಿಯಿಂದ ಇನ್ನು ಚೇತರಿಸಿಕೊಂಡಿಲ್ಲ ಎಂದು ತೋರುತ್ತದೆ.

IND vs NZ: ಪೃಥ್ವಿ ಇನ್, ಸಂಜು ಮತ್ತೆ ಔಟ್! ರಾಹುಲ್- ಅಕ್ಷರ್​ಗೆ ವಿಶ್ರಾಂತಿ; ಕಿವೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ

ಉನಾದ್ಕಟ್ ಮೇಲೆ ಹೆಚ್ಚಿನ ನಿರೀಕ್ಷೆ

ಎಂದಿನಂತೆ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ವಹಿಸಲಾಗಿದ್ದು ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಉಪನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕೆಎಸ್ ಭರತ್, ಜಯದೇವ್ ಉನದ್ಕಟ್ ಅವರಿಗೂ ಟೆಸ್ಟ್ ತಂಡದಲ್ಲಿ ಅವಕಾಶ ನೀಡಲಾಗಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ತಂಡಕ್ಕೆ ಮರಳಿದ್ದ ಉನಾದ್ಕಟ್ 3 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಆಯ್ಕೆದಾರರು ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ಸ್ಥಾನ ನೀಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಮೇಲೆ ಕಣ್ಣು

ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಪಂದ್ಯಗಳ ಸರಣಿಯು ಭಾರತಕ್ಕೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿಯನ್ನು ಗೆದ್ದರೆ ಮಾತ್ರ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಎಂಟ್ರಿಕೊಡಲಿದೆ. ಅಲ್ಲದೆ ಈ ಸರಣಿಯ ಕನಿಷ್ಠ 3 ಪಂದ್ಯಗಳನ್ನಾದರೂ ಗೆಲ್ಲುವುದು ರೋಹಿತ್ ಪಡೆಗೆ ಅನಿವಾರ್ಯವಾಗಿದೆ.

ಆಸೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ಇಶಾನ್ ಕಿಶನ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Sat, 14 January 23