ತಂಡದ ಬಗ್ಗೆ ಮಾಹಿತಿ ಸೋರಿಕೆ ಆರೋಪ; ಸೈಬರ್ ಕ್ರೈಂನಿಂದ ರಿಜ್ವಾನ್, ಇಮಾಮ್ ವಿಚಾರಣೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ವಿರುದ್ಧ ಮಾಹಿತಿ ಸೋರಿಕೆ ಆರೋಪದಡಿ ಸೈಬರ್ ಕ್ರೈಮ್ ತನಿಖೆ ಆರಂಭಿಸಿದೆ. ಇಬ್ಬರ ಫೋನ್‌ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ. ಈ ಆರೋಪಗಳು ಸಾಬೀತಾದರೆ, ಅವರ ವೃತ್ತಿಜೀವನಕ್ಕೆ ದೊಡ್ಡ ಹೊಡೆತ ಬೀಳಲಿದೆ. ಇದು ಪಾಕ್ ಕ್ರಿಕೆಟ್‌ನಲ್ಲಿ ಹೊಸ ವಿವಾದ ಸೃಷ್ಟಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ವಿವಾದಗಳಿಗೆ ಬರವಿಲ್ಲ. ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಪಾಕ್ ಕ್ರಿಕೆಟ್ ಮಂಡಳಿ ಇದೀಗ ತನ್ನ ತಂಡದ ಇಬ್ಬರು ಆಟಗಾರರ ವಿರುದ್ಧವೇ ತನಿಖೆಗಿಳಿದಿದೆ. ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರು ತಂಡದೊಳಗಿನ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಹೊತ್ತಿದ್ದಾರೆ. ಅಲ್ಲದೆ ಪಾಕಿಸ್ತಾನ ಮಂಡಳಿಯು ಸೈಬರ್ ಅಪರಾಧ ತನಿಖಾ ಸಂಸ್ಥೆಗೆ ಇಬ್ಬರ ವಿರುದ್ಧವೂ ದೂರು ದಾಖಲಿಸಿದ್ದು, ಶುಕ್ರವಾರ ಇಮಾಮ್ ಮತ್ತು ರಿಜ್ವಾನ್ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ನಾಲ್ಕು ಗಂಟೆಗಳ ಕಾಲ ವಿಚಾರಣೆ
ವರದಿಗಳ ಪ್ರಕಾರ, ಇಬ್ಬರೂ ಆಟಗಾರರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಪಾಕಿಸ್ತಾನ ಡ್ರೆಸ್ಸಿಂಗ್ ಕೊಠಡಿಯಿಂದ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತ ನಂತರ, ಪಿಸಿಬಿ ಇದ್ದಕ್ಕಿದ್ದಂತೆ ಇಂಗ್ಲೆಂಡ್‌ನಿಂದ 7 ಆಟಗಾರರನ್ನು ಕರೆಸಿಕೊಂಡಿತ್ತು. ಈ 7 ಆಟಗಾರರಲ್ಲಿ ಇವರಿಬ್ಬರು ಸೇರಿದ್ದರು. ಇದೀಗ ಪಿಸಿಬಿ ರಿಜ್ವಾನ್ ಮತ್ತು ಇಮಾಮ್ ವಿರುದ್ಧ ದೂರು ದಾಖಲಿಸಿದೆ.
ಲಿಖಿತ ಉತ್ತರ ಕೇಳಲಾಗಿದೆ
ಪಿಸಿಬಿ, ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರ ಫೋನ್‌ಗಳನ್ನು ಸಹ ಮುಟ್ಟುಗೋಲು ಹಾಕಿಕೊಂಡಿದೆ. ಎರಡೂ ಫೋನ್‌ಗಳು ಪಾಕಿಸ್ತಾನದ ಸೈಬರ್ ಅಪರಾಧ ತನಿಖಾ ಸಂಸ್ಥೆಯ ವಶದಲ್ಲಿವೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ಕಾರಣ, ಎನ್‌ಸಿಸಿಐಎ ಅವರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅದರಂತೆ ವಿಚಾರಣೆಗೊಳಪಟ್ಟಿರುವ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ಅವರನ್ನು ಪ್ರತಿ ಪ್ರಶ್ನೆಗೆ ಲಿಖಿತ ಉತ್ತರಗಳನ್ನು ನೀಡುವಂತೆ ಕೇಳಲಾಗಿದೆ ಎಂದು ವರದಿಯಾಗಿದೆ. ಲಿಖಿತ ಪ್ರತಿಕ್ರಿಯೆಗಳನ್ನು ನೀಡಲು ಇಬ್ಬರೂ ಆಟಗಾರರು ಏಜೆನ್ಸಿಯಿಂದ ಸಮಯ ಕೋರಿದ್ದಾರೆ ಎಂತಲೂ ಹೇಳಲಾಗುತ್ತಿದೆ.
ಪಾಕ್ ತಂಡದ ಹೆಡ್ ಕೋಚ್ ‘ಭಾರತದ ಏಜೆಂಟ್’; ಮಾಜಿ ಆಟಗಾರನ ಗಂಭೀರ ಆರೋಪ
ರಿಜ್ವಾನ್-ಇಮಾಮ್ ವೃತ್ತಿಜೀವನ ಅಂತ್ಯ?
ಈ ಪ್ರಕರಣದಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್-ಉಲ್-ಹಕ್ ತಪ್ಪಿತಸ್ಥರೆಂದು ಸಾಬೀತಾದರೆ, ಅವರ ವೃತ್ತಿಜೀವನ ಭಾಗಶಃ ಮುಗಿದಂತೆಯೆ. ತಂಡದ ಮಾಹಿತಿಯನ್ನು ಸೋರಿಕೆ ಮಾಡುವುದು ಗಂಭೀರ ಅಪರಾಧ. ಪಾಕಿಸ್ತಾನದ ಇತಿಹಾಸದಲ್ಲಿ ಪಿಸಿಬಿ ತನ್ನದೇ ಆಟಗಾರರ ವಿರುದ್ಧ ಸೈಬರ್ ಅಪರಾಧ ತನಿಖಾ ಸಂಸ್ಥೆಗೆ ದೂರು ನೀಡಿರುವುದು ಇದೇ ಮೊದಲು. ಹೀಗಾಗಿ ಕಳಪೆ ಪ್ರದರ್ಶನದಿಂದ ಮುಜುಗರಕ್ಕೊಳಗಾಗುತ್ತಿರುವ ಪಾಕ್ ತಂಡ ಇದೀಗ ತನ್ನದೇ ಆಟಗಾರರ ಕಳ್ಳಾಟದಿಂದಾಗಿ ಮತ್ತಷ್ಟು ಮುಜುಗರಕ್ಕೊಳಗಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Fri, 11 September 26




