1,294 ದಿನಗಳಿಂದ ಟೆಸ್ಟ್ ಪಂದ್ಯ ಗೆಲ್ಲದ ಪಾಕಿಸ್ತಾನ್..!

|

Updated on: Aug 26, 2024 | 8:05 AM

Pakistan vs Bangladesh: ಪಾಕಿಸ್ತಾನ್ ತಂಡವು ಕಳೆದ ಮೂರು ವರ್ಷಗಳಲ್ಲಿ ತವರಿನಲ್ಲಿ ಒಟ್ಟು 9 ಪಂದ್ಯಗಳನ್ನಾಡಿದೆ. ಈ ವೇಳೆ ಒಮ್ಮೆಯೂ ಗೆಲುವು ದಾಖಲಿಸಲಿಲ್ಲ ಎಂಬುದು ವಿಶೇಷ. ಅಂದರೆ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಪಾಕ್ ಪಡೆಯು ಈ ಸೋಲಿನ ಸರಪಳಿ ಕಳಚುವ ವಿಶ್ವಾಸದಲ್ಲಿತ್ತು. ಆದರೆ ಬಾಂಗ್ಲಾ ಪಡೆಯು 10 ವಿಕೆಟ್​ಗಳ ಗೆಲುವು ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದೆ.

1,294 ದಿನಗಳಿಂದ ಟೆಸ್ಟ್ ಪಂದ್ಯ ಗೆಲ್ಲದ ಪಾಕಿಸ್ತಾನ್..!
Pakistan
Follow us on

ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಬಾಂಗ್ಲಾದೇಶ್ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಅದು ಸಹ ಪಾಕ್ ನೆಲದಲ್ಲಿ ಎಂಬುದು ವಿಶೇಷ. ರಾವಲ್ಪಿಂಡಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 6 ವಿಕೆಟ್ ಕಳೆದುಕೊಂಡು 448 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು ಮೊದಲ ಇನಿಂಗ್ಸ್​ಲ್ಲಿ 565 ರನ್​ ಪೇರಿಸಿತು.

ಇತ್ತ 117 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡ ಕೇವಲ 146 ರನ್​ಗಳಿಗೆ ಆಲೌಟ್ ಆಗಿದೆ. ಅದರಂತೆ ಅಂತಿಮ ದಿನದಾಟದಲ್ಲಿ ಕೇವಲ 30 ರನ್​ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡವು 6.3 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಅತ್ತ ಬಾಂಗ್ಲಾದೇಶ್ ತಂಡವು ಐತಿಹಾಸಿಕ ಗೆಲುವು ಸಾಧಿಸಿದರೆ, ಇತ್ತ ಪಾಕಿಸ್ತಾನ್ ತಂಡವು ತವರಿನಲ್ಲಿ ಸೋಲಿನ ಸರಮಾಲೆಯನ್ನು ಮುಂದುವರೆಸಿದೆ. ಅಂದರೆ ಪಾಕ್ ಪಡೆಯು ಕಳೆದ 3 ವರ್ಷಗಳಿಂದ ತವರಿನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿಲ್ಲ.

3 ವರ್ಷಗಳಿಂದ ಸೋಲೇ ಸೋಲು:

ಪಾಕಿಸ್ತಾನ್ ತಂಡವು ಕಳೆದ 3 ವರ್ಷಗಳಲ್ಲಿ ತವರಿನಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಸೋಲನುಭವಿಸಿರುವುದು ವಿಶೇಷ. ಇನ್ನು ಗೆದ್ದಿರುವುದು 2021 ರಲ್ಲಿ ಬಾಂಗ್ಲಾದೇಶ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದಾದ ಬಳಿಕ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧ ಪರಾಜಯಗೊಂಡಿದೆ. ಅಂದರೆ ಪಾಕಿಸ್ತಾನ್ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ಬರೋಬ್ಬರಿ 1,294 ದಿನಗಳೇ ಕಳೆದಿವೆ.

ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!

ಇತ್ತ ಈ ಸೋಲಿನ ಕಾರಣ ಪಾಕ್ ಟೆಸ್ಟ್​ ತಂಡದ ನಾಯಕತ್ವದಿಂದ ಬಾಬರ್ ಆಝಂ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ಶಾನ್ ಮಸೂದ್ ಮುಂದಾಳತ್ವದಲ್ಲಿ ಕಣಕ್ಕಿಳಿದಿರುವ ಪಾಕ್ ಪಡೆಯು ಬಾಂಗ್ಲಾದೇಶ್ ವಿರುದ್ಧ ಕೂಡ ತವರಿನಲ್ಲಿ ಸೋತಿದೆ. ಈ ಸೋಲಿನೊಂದಿಗೆ ಪಾಕಿಸ್ತಾನ್ ತಂಡವು ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಯಾರ ಹೆಸರಲ್ಲಿದೆ ದಾಖಲೆ?

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಸತತ ಸೋಲುಗಳನ್ನು ಅನುಭವಿಸಿದ ಅತ್ಯಂತ ಕೆಟ್ಟ ದಾಖಲೆ ಝಿಂಬಾಬ್ವೆ ತಂಡದ ಹೆಸರಿನಲ್ಲಿದೆ. ಝಿಂಬಾಬ್ವೆ ತಂಡವು ತವರಿನಲ್ಲಿ ಗೆದ್ದು 4002 ದಿನಗಳೇ ಕಳೆದಿವೆ.  ಇದೀಗ 1,294 ದಿನಗಳ ನಡುವೆ ತವರಿನಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡವು ಸತತ ಸೋಲಿನೊಂದಿಗೆ ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದೆ.