IND vs PAK: ಈ ಸಲ ಪಾಕಿಸ್ತಾನ್ ಫ್ಯಾನ್ಸ್ ಟಿವಿ ಒಡೆಯಲ್ಲ, ಏಕೆಂದರೆ…
India vs Pakistan: ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಫೆ.23) ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋತರೂ ಅಭಿಮಾನಿಗಳು ಈ ಬಾರಿ ಟಿವಿ ಮೇಲೆ ತಮ್ಮ ಆಕ್ರೋಶ ತೀರಿಸಲ್ಲ ಎಂದಿದ್ದಾರೆ ಪಾಕ್ ತಂಡದ ಮಾಜಿ ಆಟಗಾರ ಬಾಸಿತ್ ಅಲಿ.

ಇಂಡೊ ಮತ್ತು ಪಾಕ್ ನಡುವಣ ಕ್ರಿಕೆಟ್ ಪಂದ್ಯ ಮುಗಿದರೆ, ಇತ್ತ ಭಾರತದಲ್ಲಿ ಸಂಭ್ರಮ ಮನೆ ಮಾಡಿದರೆ ಅತ್ತ ಪಾಕಿಸ್ತಾನದಲ್ಲಿ ಅಭಿಮಾನಿಗಳ ಪಿತ್ತ ನೆತ್ತಿಗೇರಿರುತ್ತದೆ. ಹೀಗೆ ಪ್ರತಿ ಬಾರಿಯೂ ನಿರಾಸೆಗೊಳ್ಳುವ ಪಾಕ್ ಅಭಿಮಾನಿಗಳು ಮಾಡುವ ಮೊದಲ ಕೆಲಸವೆಂದರೆ ಟಿವಿಯನ್ನು ಒಡೆದು ಹಾಕುವುದು. ಹೀಗೆ ಟಿವಿ ಒಡೆದು ಕೋಪ ನೀಗಿಸಿಕೊಳ್ಳುವ ಪ್ರವೃತ್ತಿ ಹೊಂದಿರುವ ಪಾಕಿಸ್ತಾನ್ ಅಭಿಮಾನಿಗಳು ಈ ಬಾರಿ ಟಿವಿ ಒಡೆಯಲ್ಲ. ಹೀಗಂದಿದ್ದು ಮತ್ಯಾರೂ ಅಲ್ಲ, ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಬಾಸಿತ್ ಅಲಿ.
ಫೆಬ್ರವರಿ 23 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಬಹುತೇಕ ಖಚಿತ. ಇದಾಗ್ಯೂ ಈ ಬಾರಿ ಪಾಕಿಸ್ತಾನ್ ಸೋತರೆ, ಪಾಕ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಟಿವಿ ಮೇಲೆ ತೀರಿಸಲ್ಲ ಎಂದು ಬಾಸಿತ್ ಅಲಿ ಹೇಳಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನದಲ್ಲಿನ ಆರ್ಥಿಕ ಪರಿಸ್ಥಿತಿ. ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವು ಏಕಪಕ್ಷೀಯವಾಗಿ ಮುಗಿದರೂ, ಪಾಕ್ ಅಭಿಮಾನಿಗಳು ಟಿವಿ ಒಡೆಯುವಂತಹ ಸಾಹಸಕ್ಕೆ ಕೈ ಹಾಕಲ್ಲ. ಇಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನರು ಪ್ರತಿಯೊಂದಕ್ಕೂ ದುಬಾರಿ ಮೊತ್ತವನ್ನು ಪಾವತಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಬಾರಿ ಪಾಕ್ ತಂಡ ಸೋತರೂ ಟಿವಿ ಸೆಟ್ಗಳು ಒಡೆಯುವಂತಹ ಶಬ್ದ ಕೇಳಿಸಲ್ಲ ಎಂದು ಬಾಸಿತ್ ಅಲಿ ಹೇಳಿದ್ದಾರೆ.
ಇದೇ ವೇಳೆ ಈ ಪಂದ್ಯದಲ್ಲಿ ಭಾರತ ತಂಡವೇ ಗೆಲ್ಲುವ ಫೇವರೇಟ್ ಎಂದಿರುವ ಬಾಸಿತ್ ಅಲಿ, ಪಾಕಿಸ್ತಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಒಂದಾರ್ಥದಲ್ಲಿ ಫೈನಲ್ ಮ್ಯಾಚ್ ಎನ್ನಬಹುದು. ಈ ಪಂದ್ಯದಲ್ಲಿ ಸೋತರೆ ಪಾಕಿಸ್ತಾನ್ ತಂಡದ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಅಂತ್ಯವಾಗಲಿದೆ.
ಇಂತಹ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋತರೆ, ಈ ಬಾರಿ ಅಭಿಮಾನಿಗಳು ತಮ್ಮ ದುಬಾರಿ ವಸ್ತುಗಳ ಮೇಲೆ ಕೋಪ ತೋರಿಸಲ್ಲ. ಬದಲಾಗಿ ಮಾತಿನಲ್ಲೇ ವಿಮರ್ಶೆಗಳು ಮುಂದುವರೆಯಲಿದೆ ಎಂದು ಬಾಸಿತ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ: 5126 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಮೊಹಮ್ಮದ್ ಶಮಿ
ಒಟ್ಟಿನಲ್ಲಿ ದುಬೈನಲ್ಲಿ ನಾಳೆ (ಫೆ.23) ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಇತ್ತ ಭಾರತದಲ್ಲಿ ಗೆಲುವಿನ ಸಂಭ್ರಮದೊಂದಿಗೆ ಪಟಾಕಿ ಹೊಡೆಯಲು ತಯಾರಿಗಳು ಆರಂಭಿಸಿದ್ದರೆ, ಅತ್ತ ಪಾಕಿಸ್ತಾನಿಗಳು ಟಿವಿ ಒಡೆಯುತ್ತಾರಾ ಎಂಬುದೇ ಈಗ ಕುತೂಹಲ.
Published On - 11:54 am, Sat, 22 February 25