ನೀವು ಝಿಂಬಾಬ್ವೆ ವಿರುದ್ಧ ಆಡೋಕೆ ಲಾಯಕ್ಕು: ಕಿಡಿಕಾರಿದ ಪಾಕ್ ಕ್ರಿಕೆಟಿಗ
ICC Champions trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಈ ಹೀನಾಯ ಪ್ರದರ್ಶನದ ವಿರುದ್ಧ ಪಾಕ್ ತಂಡದ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಕ್ಮಲ್, ಪಾಕಿಸ್ತಾನ್ ತಂಡ ದುರ್ಬಲ ತಂಡಗಳ ವಿರುದ್ಧ ಆಡುವುದು ಉತ್ತಮ ಎಂದಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿರುವ ಪಾಕಿಸ್ತಾನ್ ತಂಡದ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ. ಅದರಲ್ಲೂ ಪಾಕ್ ತಂಡದ ಮಾಜಿ ಆಟಗಾರರು ತಂಡದ ಪ್ರದರ್ಶನದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಹೀಗೆ ಮೊದಲ ಪಂದ್ಯದಲ್ಲೇ ಸೋತು ಸುಣ್ಣವಾಗಿರುವ ಪಾಕ್ ವಿರುದ್ಧ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ವಾಗ್ದಾಳಿ ನಡೆಸಿದ್ದಾರೆ.
ಕರಾಚಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 60 ರನ್ಗಳಿಂದ ಸೋತಿರುವ ಪಾಕಿಸ್ತಾನ್ ಪ್ರದರ್ಶನಕ್ಕೆ ಹತಾಶೆ ವ್ಯಕ್ತಪಡಿಸಿರುವ ಅಕ್ಮಲ್, ಅಗ್ರ ಶ್ರೇಣಿಯ ಎದುರಾಳಿಗಳಿಗಿಂತ ನೀವು ಝಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಆಡುವುದು ಉತ್ತಮ ಎಂದಿದ್ದಾರೆ.
ಪಾಕಿಸ್ತಾನ್ ತಂಡವು ಬಲಿಷ್ಠ ತಂಡಗಳನ್ನು ಎದುರಿಸುವ ಯಾವುದೇ ಸಾಮರ್ಥ್ಯ ಹೊಂದಿಲ್ಲ. ಪ್ರಸ್ತುತ ತಂಡವು ಝಿಂಬಾಬ್ವೆಯಂತಹ ದುರ್ಬಲ ತಂಡದ ವಿರುದ್ಧ ಆಡಲಿಕ್ಕಷ್ಟೇ ಲಾಯಕ್ಕು. ಹೀಗಾಗಿ ಪಾಕಿಸ್ತಾನ್ ತಂಡವು ಝಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಆಡುವುದು ಒಳಿತು ಎಂದು ಕಮ್ರಾನ್ ಅಕ್ಮಲ್ ಪಾಕ್ ತಂಡದ ಪ್ರದರ್ಶನವನ್ನು ವ್ಯಂಗ್ಯವಾಡಿದ್ದಾರೆ.
ನನ್ನ ಪ್ರಕಾರ, ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ್ ತಂಡವು ಒಂದೇ ಒಂದು ಪಂದ್ಯ ಗೆಲ್ಲುವುದು ಡೌಟ್. ಒಂದು ವೇಳೆ ಗೆದ್ದರೆ, ಅದುವೇ ಅದೃಷ್ಟ. ಇನ್ನು ಪಾಕಿಸ್ತಾನ್ ತಂಡ ಗೆಲ್ಲಬೇಕಿದ್ದರೆ ಝಿಂಬಾಬ್ವೆ ವಿರುದ್ಧ ಅಥವಾ ಐರ್ಲೆಂಡ್ನಂತಹ ತಂಡಗಳ ವಿರುದ್ಧ ಆಡಬೇಕು ಅಷ್ಟೇ. ಇದಾಗ್ಯೂ ಪಾಕ್ ತಂಡವು ಈ ಬಾರಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದನ್ನು ಎದುರು ನೋಡಬೇಡಿ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
ಕಮ್ರಾನ್ ಅಕ್ಮಲ್ ಅವರ ಇಂತಹ ಹೇಳಿಕೆಗಳಿಗೆ ಮುಖ್ಯ ಕಾರಣ, ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ಪಾಕಿಸ್ತಾನ್ ನೀಡಿದ ಅತ್ಯಂತ ಕಳಪೆ ಪ್ರದರ್ಶನ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ವಿಲ್ ಯಂಗ್ (107) ಹಾಗೂ ಟಾಮ್ ಲ್ಯಾಥಮ್ (118) ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನಿಂದ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 320 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಪರ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ ಅರ್ಧಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 81 ಎಸೆತಗಳನ್ನು. ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಪಾಕ್ ತಂಡ ಗೆಲುವಿನ ಆಸೆಗೆ ಆರಂಭದಲ್ಲೇ ಕೊಳ್ಳಿ ಇಟ್ಟಿದ್ದರು.
ಇದನ್ನೂ ಓದಿ: 5126 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಮೊಹಮ್ಮದ್ ಶಮಿ
ಅಲ್ಲದೆ ಅಂತಿಮವಾಗಿ ಪಾಕಿಸ್ತಾನ್ ತಂಡವು 47.2 ಓವರ್ಗಳಲ್ಲಿ 260 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕ್ ಪಡೆ 60 ರನ್ಗಳ ಅಂತರದಿಂದ ಹೀನಾಯ ಸೋಲನುಭವಿಸಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡ ದುರ್ಬಲ ಝಿಂಬಾಬ್ವೆ ವಿರುದ್ಧ ಆಡುವುದು ಉತ್ತಮ ಎನ್ನುವ ಮೂಲಕ ಕಮ್ರಾನ್ ಅಕ್ಮಲ್ ಪಾಕ್ ಪಡೆಯ ಪ್ರದರ್ಶನವನ್ನು ವ್ಯಂಗ್ಯವಾಡಿದ್ದಾರೆ.