3 ಪಂದ್ಯಗಳು…ಮೂರು ತಂಡಗಳು ಆಲೌಟ್. ಇದು ಏಷ್ಯಾಕಪ್ನಲ್ಲಿನ ಪಾಕಿಸ್ತಾನ್ ಬೌಲರ್ಗಳ ಪರಾಕ್ರಮ. ಅಂದರೆ ಈ ಬಾರಿಯ ಏಷ್ಯಾಕಪ್ನಲ್ಲಿ ಪಾಕ್ ವಿರುದ್ಧ ಕಣಕ್ಕಿಳಿದ ಯಾವುದೇ ತಂಡ 50 ಓವರ್ಗಳನ್ನು ಪೂರ್ಣಗೊಳಿಸಿಲ್ಲ. ಮೊದಲ ಪಂದ್ಯದಲ್ಲಿ ನೇಪಾಳ ತಂಡವು 23.4 ಓವರ್ಗಳಲ್ಲಿ ಕೇವಲ 103 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 48.5 ಓವರ್ಗಳಲ್ಲಿ 266 ರನ್ಗಳಿಗೆ ಆಲೌಟ್ ಮಾಡುವಲ್ಲಿ ಪಾಕ್ ವೇಗಿಗಳು ಯಶಸ್ವಿಯಾಗಿದ್ದರು. ಹಾಗೆಯೇ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು 38.4 ಓವರ್ಗಳಲ್ಲಿ 193 ರನ್ಗಳಿಗೆ ಆಲೌಟ್ ಮಾಡಿದೆ.
ಈ ಮೂರು ಪಂದ್ಯಗಳಲ್ಲೂ ಪಾಕ್ ಪರ ಕರಾರುವಾಕ್ ದಾಳಿ ನಡೆಸಿದ್ದು ವೇಗಿಗಳು ಎಂಬುದು ಉಲ್ಲೇಖಾರ್ಹ. ಹೀಗಾಗಿಯೇ ಮುಂಬರುವ ಪಂದ್ಯಗಳಲ್ಲೂ ಪಾಕ್ ತಂಡದ ಪ್ರಮುಖ ಅಸ್ತ್ರ ವೇಗಿಗಳು. ಇಲ್ಲಿ ಪಾಕಿಸ್ತಾನ್ ತಂಡದ ಮುಂದಿನ ಪಂದ್ಯ ಟೀಮ್ ಇಂಡಿಯಾ ವಿರುದ್ಧ ಎಂಬುದು ವಿಶೇಷ.
ನೇಪಾಳ ವಿರುದ್ಧದ ಪಂದ್ಯದಲ್ಲಿ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಜೊತೆಗೂಡಿ 5 ವಿಕೆಟ್ ಉರುಳಿಸಿದ್ದರು. ಇನ್ನು ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಈ ಮೂವರು ಸೇರಿ ಒಟ್ಟು 10 ವಿಕೆಟ್ ಕಬಳಿಸಿ ಏಷ್ಯಾಕಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು. ಹಾಗೆಯೇ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಒಟ್ಟು 9 ವಿಕೆಟ್ಗಳನ್ನು ವೇಗಿಗಳೇ ಕಬಳಿಸಿದ್ದಾರೆ.
ಅಂದರೆ ಮೂರು ಪಂದ್ಯಗಳಲ್ಲೂ ಎದುರಾಳಿಗಳನ್ನು ಆಲೌಟ್ ಮಾಡುವಲ್ಲಿ ವೇಗಿಗಳೇ ಪ್ರಮುಖ ಪಾತ್ರವಹಿಸಿರುವುದು ಸ್ಪಷ್ಟ. ಇದಕ್ಕೆ ಸಾಕ್ಷಿಯಾಗಿ ಈ ಬಾರಿಯ ಏಷ್ಯಾಕಪ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲೂ ಶಾಹೀನ್, ನಸೀಮ್ ಹಾಗೂ ಹ್ಯಾರಿಸ್ ರೌಫ್ ಟಾಪ್ನಲ್ಲಿದ್ದಾರೆ.
3 ಪಂದ್ಯಗಳಿಂದ ಒಟ್ಟು 9 ವಿಕೆಟ್ ಕಬಳಿಸಿರುವ ಹ್ಯಾರಿಸ್ ರೌಫ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಸೀಮ್ ಶಾ ಹಾಗೂ ಶಾಹೀನ್ ಶಾ ಅಫ್ರಿದಿ ತಲಾ 7 ವಿಕೆಟ್ಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಇದೀಗ ಈ ಮೂವರು ವೇಗಿಗಳ ಮುಂದಿನ ಟಾರ್ಗೆಟ್ ಟೀಮ್ ಇಂಡಿಯಾ.
ಈ ಹಿಂದಿನಂತೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವನ್ನು ಬ್ಯಾಟರ್ಸ್ ಮತ್ತು ಬೌಲರ್ಸ್ ನಡುವಣ ಹಣಾಹಣಿಯನ್ನಾಗಿಸುವಲ್ಲಿ ಪಾಕ್ ತಂಡದ ವೇಗಿಗಳು ಯಶಸ್ವಿಯಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರರು ವೇಗಿಗಳಿಗೆ ವಿಕೆಟ್ ಒಪ್ಪಿಸಿರುವುದು.
ಅಂದರೆ ಏಷ್ಯಾಕಪ್ ಇತಿಹಾಸದಲ್ಲೇ ಯಾವುದೇ ತಂಡ ವೇಗಿಗಳಿಗೆ ಮಾತ್ರ ವಿಕೆಟ್ ಒಪ್ಪಿಸಿ ಆಲೌಟ್ ಆಗಿರಲಿಲ್ಲ. ಆದರೆ ಟೀಮ್ ಇಂಡಿಯಾವನ್ನು ಆಲೌಟ್ ಮಾಡುವ ಮೂಲಕ ಶಾಹೀನ್ ಅಫ್ರಿದಿ, ನಸೀಮ್ ಶಾ ಹಾಗೂ ಹ್ಯಾರಿಸ್ ರೌಫ್ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇದೇ ಕಾರಣದಿಂದಾಗಿ ಇದೀಗ ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಬೌಲರ್ಸ್ ಮತ್ತು ಬ್ಯಾಟರ್ಸ್ ನಡುವಣ ಫೈಟ್ ಆಗಿ ಮಾರ್ಪಟ್ಟಿದೆ. ಇಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್ಗಳನ್ನು ಒಳಗೊಂಡ ಟೀಮ್ ಇಂಡಿಯಾ ಒಂದೆಡೆಯಾದರೆ, ವೇಗದ ಅಸ್ತ್ರಗಳೊಂದಿಗೆ ಪರಾಕ್ರಮ ಮರೆಯುವ ಪಾಕಿಸ್ತಾನ್ ಮತ್ತೊಂದೆಡೆ.
ಅತ್ತ ಎಡಗೈ ವೇಗಿ ಶಾಹೀನ್ ಅಫ್ರಿದಿ ಇದ್ದರೆ ಇತ್ತ ರನ್ ಮೆಷಿನ್ ವಿರಾಟ್ ಕೊಹ್ಲಿ ಇದ್ದಾರೆ. ಇನ್ನು ಹ್ಯಾರಿಸ್ ರೌಫ್ ವೇಗಕ್ಕೆ ಪ್ರತಿ ವೇಗದಲ್ಲಿ ಶಾಟ್ ಬಾರಿಸಬಲ್ಲ ರೋಹಿತ್ ಶರ್ಮಾ ಇದ್ದರೆ, ನಸೀಮ್ ಶಾ ಎಸೆತಗಳಿಗೆ ಮರುತ್ತರ ನೀಡಬಲ್ಲ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಟೀಮ್ ಇಂಡಿಯಾದಲ್ಲಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಇದಾಗ್ಯೂ ಮೊದಲ ಮುಖಾಮುಖಿಯಲ್ಲಿ ಟೀಮ್ ಇಂಡಿಯಾವನ್ನು ಆಲೌಟ್ ಮಾಡುವ ಮೂಲಕ ಪರಾಕ್ರಮ ಮೆರೆದಿರುವ ಪಾಕ್ ತ್ರಿಮೂರ್ತಿಗಳು ಇದೀಗ ಮತ್ತದೇ ಉತ್ಸಾಹದಲ್ಲಿದ್ದಾರೆ. ಹೀಗಾಗಿಯೇ ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಇಂಡೊ-ಪಾಕ್ ಮುಖಾಮುಖಿಯಲ್ಲಿ ರಣರೋಚಕ ಪೈಪೋಟಿಯನ್ನಂತು ನಿರೀಕ್ಷಿಸಬಹುದು.