ಚಾನ್ಸ್ ಸಿಗಬೇಕು, ಕ್ರಮಾಂಕ ವಿಷಯವಲ್ಲ ಎಂದು ಸಾರಿದ ಇಶಾನ್ ಕಿಶನ್
Ishan Kishan: 4ನೇ ಹಾಗೂ 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರನ್ನು ಹೊರತುಪಡಿಸಿ ಬೇರೆ ಆಯ್ಕೆಯಿಲ್ಲ ಅಂದುಕೊಂಡಿದ್ದವರಿಗೆ ಇಶಾನ್ ಕಿಶನ್ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಿದ್ದಾರೆ. ಇತ್ತ ಎಡಗೈ ದಾಂಡಿಗರ ಕೊರತೆಯನ್ನು ಹೊಂದಿರುವ ಟೀಮ್ ಇಂಡಿಯಾ ಮುಂದಿರುವ ಅತ್ಯುತ್ತಮ ಆಯ್ಕೆ ಇಶಾನ್ ಕಿಶನ್. ಏಕೆಂದರೆ ತಾನು ಯಾವುದೇ ಕ್ರಮಾಂಕದಲ್ಲೂ ಆಡಬಲ್ಲೆ ಎಂಬುದನ್ನು ಪಾಕ್ ವಿರುದ್ಧದ ಪಂದ್ಯದ ಮೂಲಕ ಯುವ ದಾಂಡಿಗ ಸಾರಿದ್ದಾರೆ.
ಈ ಬಾರಿಯ ಏಷ್ಯಾಕಪ್ ಆರಂಭಕ್ಕೂ ಮುನ್ನ ಬಹುಚರ್ಚಿತವಾದ ವಿಷಯ ಎಂದರೆ ಟೀಮ್ ಇಂಡಿಯಾದ ಆಯ್ಕೆ. ಅದರಲ್ಲೂ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್. ಈ ಇಬ್ಬರ ಫಿಟ್ನೆಸ್ ವರದಿ ಬಂದ ಬಳಿಕವಷ್ಟೇ ಭಾರತ ತಂಡವನ್ನು ಆಯ್ಕೆ ಮಾಡಲಾಗಿತ್ತು. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರೊಂದು ಆಯ್ಕೆಯಿಲ್ಲ ಎಂಬುದನ್ನು ಆಯ್ಕೆ ಸಮಿತಿಯೇ ಸಾರಿದ್ದರು.
ಆದರೆ ಏಷ್ಯಾಕಪ್ ತಂಡದ ಆಯ್ಕೆಯ ಬೆನ್ನಲ್ಲೇ ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. ಆದರೆ ಏಕದಿನ ವಿಶ್ವಕಪ್ ಹಿನ್ನಲೆಯಲ್ಲಿ ರಾಹುಲ್ ಅವರನ್ನು ತಂಡದಿಂದ ಕೈ ಬಿಡುವ ಕಠಿಣ ನಿರ್ಧಾರಕ್ಕೆ ಆಯ್ಕೆ ಸಮಿತಿ ಕೈ ಹಾಕಲಿಲ್ಲ. ಬದಲಾಗಿ ಏಷ್ಯಾಕಪ್ನ ಮೊದಲೆರಡು ಪಂದ್ಯಗಳಲ್ಲಿ ಕೆಎಲ್ಆರ್ ಬದಲಿಗೆ ಮತ್ತೋರ್ವ ಆಟಗಾರನಿಗೆ ಚಾನ್ಸ್ ನೀಡಲು ನಿರ್ಧರಿಸಿತು.
ಅದರಂತೆ ತಂಡದಲ್ಲಿ 2ನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಯ್ಕೆಯಾಗಿದ್ದ ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಇಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಥಾನ ಪಡೆದಿದ್ದು ಇಶಾನ್ ಕಿಶನ್ ಹಾಗೂ ಕೆಎಲ್ ರಾಹುಲ್ ಮಾತ್ರ. ಹೀಗಾಗಿ ಕಿಶನ್ ಅವರನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಕೂಡ ಟೀಮ್ ಇಂಡಿಯಾ ಮುಂದಿತ್ತು.
ಆದರೆ ಆರಂಭಿಕ ಆಟಗಾರನಾಗಿದ್ದ ಇಶಾನ್ ಕಿಶನ್ ಅವರನ್ನು ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಸುವುದು ಎಂಬುದು ಟೀಮ್ ಇಂಡಿಯಾ ನಾಯಕ ಹಾಗೂ ಕೋಚ್ ಮುಂದಿದ್ದ ದೊಡ್ಡ ಸವಾಲು. ಏಕೆಂದರೆ ಆರಂಭಿಕನಾಗಿ ಕಣಕ್ಕಿಳಿಸಿದರೆ ಇಡೀ ತಂಡದ ಬ್ಯಾಟಿಂಗ್ ಕ್ರಮಾಂಕ ಬದಲಿಸಬೇಕಿತ್ತು. ಹೀಗಾಗಿ ಅಂತಿಮವಾಗಿ ಇಶಾನ್ ಕಿಶನ್ ಅವರನ್ನು 5ನೇ ಕ್ರಮಾಂಕದಲ್ಲೇ ಆಡಿಸಲಾಯಿತು.
ಅದರಂತೆ ಪಾಕಿಸ್ತಾನ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಇಶಾನ್ ಕಿಶನ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಾಗ ಟೀಮ್ ಇಂಡಿಯಾ 48 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಹೊಸ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ಎಡಗೈ ದಾಂಡಿಗ ಪಾಕ್ ವೇಗಿಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದರು.
ಹಾರ್ದಿಕ್ ಪಾಂಡ್ಯ ಜೊತೆಗೂಡಿ 5ನೇ ವಿಕೆಟ್ಗೆ 138 ರನ್ಗಳ ಜೊತೆಯಾಟವಾಡಿದರು. ಅಲ್ಲದೆ 81 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 82 ರನ್ ಬಾರಿಸಿದರು. ಅಂದರೆ ಪಾಕಿಸ್ತಾನ್ ವಿರುದ್ಧದ ಒತ್ತಡದ ಪಂದ್ಯದಲ್ಲೇ ಇಶಾನ್ ಕಿಶನ್ ಅದ್ಭುತವಾಗಿ ಬ್ಯಾಟ್ ಬೀಸಿದ್ದರು.
ಈ ಮೂಲಕ ನನಗೆ ಕ್ರಮಾಂಕ ವಿಷಯವಲ್ಲ. ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗಬೇಕು ಎಂಬುದನ್ನು ಸಾರಿದ್ದರು. ಇದೀಗ ಈ ಅದ್ಭುತ ಪ್ರದರ್ಶನವೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ಗೆ ಹೊಸ ಚಿಂತೆಯನ್ನು ಉಂಟು ಮಾಡಿದೆ.
ಏಕೆಂದರೆ 4ನೇ ಹಾಗೂ 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರನ್ನು ಹೊರತುಪಡಿಸಿ ಬೇರೆ ಆಯ್ಕೆಯಿಲ್ಲ ಅಂದುಕೊಂಡಿದ್ದವರಿಗೆ ಇಶಾನ್ ಕಿಶನ್ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಿದ್ದಾರೆ. ಇತ್ತ ಎಡಗೈ ದಾಂಡಿಗರ ಕೊರತೆಯನ್ನು ಹೊಂದಿರುವ ಟೀಮ್ ಇಂಡಿಯಾ ಮುಂದಿರುವ ಅತ್ಯುತ್ತಮ ಆಯ್ಕೆ ಇಶಾನ್ ಕಿಶನ್. ಏಕೆಂದರೆ ತಾನು ಯಾವುದೇ ಕ್ರಮಾಂಕದಲ್ಲೂ ಆಡಬಲ್ಲೆ ಎಂಬುದನ್ನು ಪಾಕ್ ವಿರುದ್ಧದ ಪಂದ್ಯದ ಮೂಲಕ ಯುವ ದಾಂಡಿಗ ಸಾರಿದ್ದಾರೆ.
ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಅವರು ಪಾಕಿಸ್ತಾನ್ ವಿರುದ್ಧದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಇದಕ್ಕಾಗಿ ಇನ್ ಫಾರ್ಮ್ನಲ್ಲಿರುವ ಇಶಾನ್ ಕಿಶನ್ ಅವರನ್ನು ಆಡುವ ಬಳಗದಿಂದ ಕೈ ಬಿಡುತ್ತಾರಾ? ಎಂಬುದೇ ಪ್ರಶ್ನೆ.
ಏಕೆಂದರೆ ಆರಂಭಿಕನ ಸ್ಥಾನಕ್ಕೆ ಸೂಕ್ತ ಎಂದಿದ್ದ ಇಶಾನ್ ಕಿಶನ್ ಈ ಹಿಂದೆ 3ನೇ ಕ್ರಮಾಂಕದಲ್ಲೂ ಕಣಕ್ಕಿಳಿದು ಭರ್ಜರಿ ಪ್ರದರ್ಶನ ನೀಡಿದ್ದರು. ಇದೀಗ 5ನೇ ಕ್ರಮಾಂಕದಲ್ಲೂ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಏಕದಿನ ಪಂದ್ಯಗಳಲ್ಲಿ ಇಶಾನ್ ಕಿಶನ್ ಸತತವಾಗಿ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ: ಎಡಗೈ ವೇಗಿಗಳ ಮುಂದೆ ಮಂಡಿಯೂರುವ ಟೀಮ್ ಇಂಡಿಯಾದ ದಿಗ್ಗಜರು
ಇತ್ತ ಟೀಮ್ ಇಂಡಿಯಾದ ಟಾಪ್-6 ಕ್ರಮಾಂಕದಲ್ಲಿ ಯಾವುದೇ ಎಡಗೈ ದಾಂಡಿಗ ಬೇರೆ ಇಲ್ಲ. ಹೀಗಾಗಿ ಎಲ್ಲಾ ರೀತಿಯಲ್ಲೂ ಇಶಾನ್ ಕಿಶನ್ ಪ್ಲೇಯಿಂಗ್ ಇಲೆವೆನ್ಗೆ ಆಯ್ಕೆಗೆ ಅರ್ಹರು. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರನ್ನು ಕಣಕ್ಕಿಳಿಸಲಿದ್ದಾರಾ ಅಥವಾ ಇವರಿಬ್ಬರಲ್ಲಿ ಒಬ್ಬರನ್ನು ಕೈ ಬಿಟ್ಟು ಇಶಾನ್ ಕಿಶನ್ಗೆ ಚಾನ್ಸ್ ನೀಡಲಿದ್ದಾರಾ ಎಂಬುದೇ ಈಗ ಕುತೂಹಲ.
Published On - 6:22 pm, Thu, 7 September 23