PAK vs AUS: ತವರಿನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಟಿ20 ಸರಣಿ ಗೆದ್ದ ಪಾಕಿಸ್ತಾನ
Pakistan Dominates Australia: ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ಗೂ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಗೆದ್ದುಕೊಂಡಿದೆ. ಎರಡನೇ ಪಂದ್ಯವನ್ನು 90 ರನ್‌ಗಳಿಂದ ಭರ್ಜರಿ ಜಯ ಸಾಧಿಸಿರುವ ಪಾಕ್ ತಂಡದ ಮನೋಬಲ ಹೆಚ್ಚಿಸಿದೆ. ಪ್ರಮುಖ ಆಟಗಾರರಿಲ್ಲದ ಆಸ್ಟ್ರೇಲಿಯಾಕ್ಕೆ ಇದು ದೊಡ್ಡ ಹಿನ್ನಡೆಯಾಗಿದ್ದು, ವಿಶ್ವಕಪ್ ಸಿದ್ಧತೆಗಳ ಮೇಲೆ ಪರಿಣಾಮ ಬೀರಿದೆ.

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿರುವ ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಈ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಪ್ರಮುಖ ಆಟಗಾರರಿಲ್ಲದೆ ಪಾಕಿಸ್ತಾನಕ್ಕೆ ತೆರಳಿದ್ದ ಆಸ್ಟ್ರೇಲಿಯಾ ಟಿ20 ವಿಶ್ವಕಪ್ಗೂ ಮುನ್ನ ಟಿ20 ಸರಣಿ ಸೋಲಿನ ಆಘಾತಕ್ಕೀಡಾಗಿದೆ. ಸರಣಿಯ ಮೊದಲ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಪಾಕಿಸ್ತಾನ ಇದೀಗ ಸರಣಿಯ ಎರಡನೇ ಪಂದ್ಯವನ್ನು ಬರೋಬ್ಬರಿ 90 ರನ್‌ಗಳಿಂದ ಗೆದ್ದುಕೊಂಡಿದೆ. ಟಿ20 ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಮಣಿಸಿರುವುದು ಪಾಕಿಸ್ತಾನ ತಂಡದ ಮನೋಬಲ ಹೆಚ್ಚಿಸಿದೆ ಎನ್ನಬಹುದು.
ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 198 ರನ್ ಕಲೆಹಾಕಿತು. ತಂಡದ ಪರ ನಾಯಕ ಸಲ್ಮಾನ್ ಅಘಾ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿದರೆ, ಉಸ್ಮಾನ್ ಖಾನ್ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 53 ರನ್ ಗಳಿಸಿದರು. ಈ ಇಬ್ಬರು ಆಟಗಾರರ ಇನ್ನಿಂಗ್ಸ್ ನೆರವಿನಿಂದ ಪಾಕಿಸ್ತಾನ 5 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳ ಗುರಿ ನೀಡಿತು. ಆಸ್ಟ್ರೇಲಿಯಾ ಪರ ಕ್ಸೇವಿಯರ್ ಬಾರ್ಟ್ಲೆಟ್, ಮ್ಯಾಥ್ಯೂ ಕುಹ್ನೆಮನ್, ಕೂಪರ್ ಕಾನೊಲಿ, ಸೀನ್ ಅಬಾಟ್ ಮತ್ತು ಆಡಮ್ ಜಂಪಾ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ಗಳು ಮತ್ತೆ ಕಳಪೆ ಪ್ರದರ್ಶನ ನೀಡಿದರು. ತಂಡದ ಪರ ಏಕಾಂಗಿ ಹೋರಾಟ ನಿಡಿದ ಕ್ಯಾಮರೂನ್ ಗ್ರೀನ್ 20 ಎಸೆತಗಳಲ್ಲಿ 35 ರನ್ ಬಾರಿಸಿದರೆ ಮ್ಯಾಟ್ ಶಾರ್ಟ್ (23 ಎಸೆತಗಳಲ್ಲಿ 27 ರನ್) ಮಾತ್ರ 20 ಕ್ಕಿಂತ ಹೆಚ್ಚು ರನ್ ಗಳಿಸಿದ ತಂಡದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಉಳಿದಂತೆ ಯಾವ ಆಟಗಾರನಿಗೂ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಸೀಸ್ ತಂಡ ಕೇವಲ 15.4 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಆಯಿತು.
ಪಾಕಿಸ್ತಾನದ ಪರ ಅತ್ಯಂತ ಯಶಸ್ವಿ ಬೌಲರ್‌ಗಳೆಂದರೆ ಶಾದಾಬ್ ಖಾನ್ ಮತ್ತು ಅಬ್ರಾರ್ ಅಹ್ಮದ್ ಇವರಿಬ್ಬರು ತಲಾ ಮೂರು ವಿಕೆಟ್ ಉರುಳಿಸಿದರು. ಅಬ್ರಾರ್ ಮೂರು ಓವರ್ ಬೌಲಿಂಗ್ ಮಾಡಿ ಕೇವಲ 14 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ, ಶಾದಾಬ್ ತಮ್ಮ ನಾಲ್ಕು ಓವರ್‌ಗಳಲ್ಲಿ 26 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರು. ಉಸ್ಮಾನ್ ತಾರಿಕ್ ಎರಡು ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ನವಾಜ್ ಮತ್ತು ಸ್ಯಾಮ್ ಅಯೂಬ್ ತಲಾ ಒಂದು ವಿಕೆಟ್ ಪಡೆದರು. ಹೀಗಾಗಿ, ಪಾಕಿಸ್ತಾನವು ಆಸ್ಟ್ರೇಲಿಯಾವನ್ನು 90 ರನ್‌ಗಳಿಂದ ಸೋಲಿಸಿ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
Published On - 8:02 pm, Sat, 31 January 26
