ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವ ಭಾರತದ ಬೇಡಿಕೆಗೆ ಮಣಿಯಬೇಡಿ ಎಂದು ಪಾಕಿಸ್ತಾನ್ ಸರ್ಕಾರ ತನ್ನ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಇಂದರಿಂದ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಸಮಸ್ಯೆಯು ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿದೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಬಿಸಿಸಿಐ, ಐಸಿಸಿಗೆ ತಿಳಿಸಿದೆ. ಅಲ್ಲದೆ ಟೀಮ್ ಇಂಡಿಯಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸುವಂತೆ ಕೋರಲಾಗಿದೆ.
ಅದರಂತೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿತಿಳಿಸಿದೆ. ಅಲ್ಲದೆ ಟೀಮ್ ಇಂಡಿಯಾದ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವ ಬಗ್ಗೆ ಚರ್ಚಿಸಲಾಗಿದೆ.
ಆದರೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧರಿಲ್ಲ. ಅಲ್ಲದೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಪಾಕಿಸ್ತಾನ್ ಸರ್ಕಾರದ ಮೊರೆ ಹೋಗಲಾಗಿತ್ತು.
ಇದೀಗ ಪಾಕ್ ಸರ್ಕಾರದಿಂದ ಸ್ಪಷ್ಟ ಉತ್ತರ ಬಂದಿದ್ದು, ಯಾವುದೇ ಕಾರಣಕ್ಕೂ ಭಾರತದ ಬೇಡಿಕೆಗೆ ಮಣಿಯದಿರಿ ಎಂದು ಸೂಚಿಸಿದ್ದಾರೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದಿಂದ ಯಾವುದೇ ಪಂದ್ಯವನ್ನು ಸ್ಥಳಾಂತರಿಸಬೇಡಿ ಎಂದು ನಮ್ಮ ಸರ್ಕಾರ ನಮಗೆ ಹೇಳಿದೆ. ಸಮಯ ಬಂದಾಗ ನಮ್ಮ ನಿಲುವು ತಿಳಿಸುತ್ತೇವೆ. ಇದೀಗ, ಭಾರತದ ನಿರ್ಧಾರದ ಬಗ್ಗೆ ಐಸಿಸಿ ನಮಗೆ ತಿಳಿಸಿದೆ. ನಾವು ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ಹಕ್ಕುಗಳನ್ನು ಹೊಂದಿದ್ದೇವೆ.
ಆದರೆ ಟೂರ್ನಿಯ ಪಂದ್ಯಗಳನ್ನು ಪಾಕಿಸ್ತಾನದ ಹೊರಗೆ ಆಯೋಜಿಸುವ ಯಾವುದೇ ಆಲೋಚನೆಯಿಲ್ಲ. ಅಲ್ಲದೆ ಸರ್ಕಾರವೇ ಭಾರತದ ಬೇಡಿಕೆಗೆ ಮಣಿಯಬೇಡಿ ಎಂದು ತಿಳಿಸಿದೆ. ಹೀಗಾಗಿ ಪಾಕಿಸ್ತಾನದಲ್ಲೇ ಇಡೀ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಿದ್ದೇವೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನನ್ನೂರು, ನಾನು ಕನ್ನಡಿಗ: RCBಗೆ ಬರುವ ಸೂಚನೆ ನೀಡಿದ ಕೆಎಲ್ ರಾಹುಲ್
ಇತ್ತ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧರಿರದಿದ್ದರೆ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಹಕ್ಕು ಕೈ ತಪ್ಪಬಹುದು. ಇನ್ನು ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಕೈ ತಪ್ಪಿದರೆ, ಇಡೀ ಟೂರ್ನಿಯಿಂದಲೇ ಹೊರಗುಳಿಯಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂತಿಮವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದೇ ಈಗ ಕುತೂಹಲ.