Asia Cup 2022: ಇಂದು ಪಾಕ್ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೆ, ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್
Pakistan vs Afghanistan Asia Cup 2022: ಒಂದು ವೇಳೆ ಇವತ್ತಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಪಾಕ್ ತಂಡಕ್ಕೆ ಸೋಲುಣಿಸಿದರೆ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಅಥವಾ 2ನೇ ಸ್ಥಾನಕ್ಕೇರಬಹುದು.
Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ 5ನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಟೀಮ್ ಇಂಡಿಯಾ (Team India) ಪಾಲಿಗೆ ನಿರ್ಣಾಯಕ ಎಂಬುದು ವಿಶೇಷ. ಅಂದರೆ ಈ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡ ಗೆದ್ದರೆ ಟೀಮ್ ಇಂಡಿಯಾ ಏಷ್ಯಾಕಪ್ನಿಂದ ಹೊರಬೀಳಲಿದೆ. ಒಂದು ವೇಳೆ ಅಫ್ಘಾನಿಸ್ತಾನ್ ಗೆದ್ದರೆ ಭಾರತದ ಫೈನಲ್ಗೇರುವ ಕನಸು ಜೀವಂತವಾಗಿರಲಿದೆ. ಅಂದರೆ ಸೂಪರ್-4 ಪಾಯಿಂಟ್ ಟೇಬಲ್ನಲ್ಲಿ 2 ಜಯ ಸಾಧಿಸಿರುವ ಶ್ರೀಲಂಕಾ ತಂಡವು ಅಗ್ರಸ್ಥಾನದಲ್ಲಿದೆ. ಹಾಗೆಯೇ ಆಡಿರುವ 1 ಪಂದ್ಯದಲ್ಲಿ ಗೆದ್ದಿರುವ ಪಾಕಿಸ್ತಾನ್ ತಂಡವು 2ನೇ ಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾ 3ನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ್ ನಾಲ್ಕನೇ ಸ್ಥಾನದಲ್ಲಿದೆ.
ಒಂದು ವೇಳೆ ಇವತ್ತಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಪಾಕ್ ತಂಡಕ್ಕೆ ಸೋಲುಣಿಸಿದರೆ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಅಥವಾ 2ನೇ ಸ್ಥಾನಕ್ಕೇರಬಹುದು. ಅತ್ತ ಟೀಮ್ ಇಂಡಿಯಾ ಕೊನೆಯ ಸ್ಥಾನಕ್ಕೆ ಇಳಿಯಲಿದೆ. ಇದಾಗ್ಯೂ ಭಾರತ ತಂಡವು ಅಫ್ಘಾನಿಸ್ತಾನ್ ವಿರುದ್ದ ಕೊನೆಯ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಟೀಮ್ ಇಂಡಿಯಾ ಮತ್ತೆ ಪಾಯಿಂಟ್ ಟೇಬಲ್ನಲ್ಲಿ ಮೇಲೇರಬಹುದು. ಅದಾಗ್ಯೂ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸುವ ಅವಕಾಶ ಪಡೆಯಬೇಕಿದ್ದರೆ ಪಾಕಿಸ್ತಾನ್ ಮುಂದಿನ ಎರಡೂ ಪಂದ್ಯಗಳಲ್ಲಿ ಸೋಲಬೇಕು.
ಅಂದರೆ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ಪಾಕ್ ಸೋತರೆ, ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಶ್ರೀಲಂಕಾ ಗೆಲ್ಲಬೇಕು. ಈಗಾಗಲೇ ಫೈನಲ್ಗೆ ಸ್ಥಾನ ಖಚಿತಪಡಿಸಿಕೊಂಡಿರುವ ಶ್ರೀಲಂಕಾ ಗೆಲ್ಲುವುದರಿಂದ ಟೀಮ್ ಇಂಡಿಯಾದ ಪಾಯಿಂಟ್ಸ್ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಬದಲಾಗಿ ಪಾಕಿಸ್ತಾನ್, ಅಫ್ಘಾನಿಸ್ತಾನ್ ಹಾಗೂ ಟೀಮ್ ಇಂಡಿಯಾ ಒಂದೊಂದು ಪಂದ್ಯ ಗೆದ್ದರೆ ಅಲ್ಲಿ ನೆಟ್ ರನ್ ಮುಖ್ಯವಾಗುತ್ತದೆ. ಅದರಂತೆ ಅಫ್ಘಾನಿಸ್ತಾನ್ ವಿರುದ್ದ ಭರ್ಜರಿ ಜಯ ಸಾಧಿಸಿ, ನೆಟ್ ರನ್ ರೇಟ್ ಮೂಲಕ ಟೀಮ್ ಇಂಡಿಯಾಗೆ ಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಅಫ್ಘಾನಿಸ್ತಾನ್ ತಂಡವು ಗೆದ್ದರೆ, ಟೀಮ್ ಇಂಡಿಯಾದ ಫೈನಲ್ಗೇರುವ ಆಸೆ ಜೀವಂತವಿರಲಿದೆ. ಒಂದು ವೇಳೆ ಅಫ್ಘಾನಿಸ್ತಾನ್ ಸೋತರೆ ಟೀಮ್ ಇಂಡಿಯಾ ಅಧಿಕೃತವಾಗಿ ಏಷ್ಯಾಕಪ್ನಿಂದ ಹೊರಬೀಳಲಿದೆ. ಹಾಗಾಗಿ ಅಫ್ಘಾನ್-ಪಾಕ್ ನಡುವಣ ಇಂದಿನ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ.