ಕ್ರೀಡಾಲೋಕದಲ್ಲಿ...ದಾಖಲೆಗಳು ಇರುವುದೇ ಮುರಿಯುದಕ್ಕೆ ಎಂಬ ಮಾತಿದೆ. ಆದರೆ ಕೆಲವೊಂದು ದಾಖಲೆಯನ್ನು ಮುರಿಯುವುದಿರಲಿ, ಅದರ ಹತ್ತಿರ ಸುಳಿಯಲೂ ಕೂಡ ಸಾಧ್ಯವಾಗುವುದಿಲ್ಲ. ಅಂತಹದೊಂದು ವಿಶ್ವ ದಾಖಲೆಯನ್ನು ಮುರಿದು ಇದೀಗ ಇಂಗ್ಲೆಂಡ್-ಪಾಕಿಸ್ತಾನ್ ಐತಿಹಾಸಿಕ ಸಾಧನೆ ಮಾಡಿದೆ.
ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 74 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 101 ವರ್ಷಗಳ ಹಳೆಯ ವಿಶ್ವ ದಾಖಲೆ ಅಳಿಸಿ ಹೋಗಿರುವುದು ವಿಶೇಷ.
ಆ ವಿಶ್ವ ದಾಖಲೆ ಯಾವುದೆಂದರೆ...ರನ್ಗಳ ರೆಕಾರ್ಡ್. ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ಗಳಿಸಿದ ದಾಖಲೆ ಇದೀಗ ಇಂಗ್ಲೆಂಡ್-ಪಾಕಿಸ್ತಾನ್ ತಂಡಗಳ ಪಾಲಾಗಿದೆ. ಈ ಪಂದ್ಯದಲ್ಲಿ ಒಟ್ಟು 1768 ರನ್ಗಳಿಸಿ ಉಭಯ ತಂಡಗಳು ಟೆಸ್ಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಈ ಹಿಂದೆ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಹೆಸರಿನಲ್ಲಿತ್ತು. 1921 ರಲ್ಲಿ, ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯದಲ್ಲಿ ಒಟ್ಟು 1753 ರನ್ ಕಲೆಹಾಕಲಾಗಿತ್ತು. ಆ ಪಂದ್ಯವನ್ನು ಅಂದು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
ಇದೀಗ 101 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ವಿಶ್ವ ದಾಖಲೆಯನ್ನು ಬರೆದಿರುವುದು ವಿಶೇಷ.
ಇನ್ನು ರಾವಲ್ಪಿಂಡಿ ಟೆಸ್ಟ್‌ನಲ್ಲಿ ಒಟ್ಟು 7 ಶತಕಗಳನ್ನು ದಾಖಲಾಗಿದೆ. ಇದು ಕೂಡ ವಿಶ್ವ ದಾಖಲೆ ಎಂಬುದು ವಿಶೇಷ. ಅಂದರೆ ಈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು 4 ಶತಕಗಳು ಬಾರಿಸಿದರೆ, ಪಾಕ್ ಆಟಗಾರರು 3 ಶತಕಗಳನ್ನು ಸಿಡಿಸಿದ್ದರು. ಇದು ಟೆಸ್ಟ್ ಇತಿಹಾಸದಲ್ಲೇ ಒಂದು ಪಂದ್ಯದಲ್ಲಿ ಮೂಡಿಬಂದ ಅತ್ಯಧಿಕ ಶತಕವಾಗಿದೆ.
ಇದಕ್ಕೂ ಮುನ್ನ 1921ರಲ್ಲಿ ಆಡಿಲೇಡ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ 5 ಶತಕಗಳು ಮೂಡಿಬಂದಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಇಂಗ್ಲೆಂಡ್-ಪಾಕ್ ಬ್ಯಾಟರ್ಗಳು ಅಳಿಸಿ ಹಾಕಿದ್ದಾರೆ.
ಅಂದಹಾಗೆ, ರಾವಲ್ಪಿಂಡಿಯಲ್ಲಿ ಟೆಸ್ಟ್ ಜಯ ಇಂಗ್ಲೆಂಡ್ ಪಾಲಿಗೆ ಸ್ಮರಣೀಯ ಗೆಲುವಾಗಿದೆ. ಏಕೆಂದರೆ 17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಆಡುತ್ತಿದ್ದು, 22 ವರ್ಷಗಳ ಪಾಕ್ ನೆಲದಲ್ಲಿ ಆಂಗ್ಲರು ಟೆಸ್ಟ್ ಪಂದ್ಯವನ್ನು ಗೆದ್ದಿದ್ದಾರೆ. ಹೀಗಾಗಿ ಈ ವಿಶ್ವ ದಾಖಲೆಯ ಟೆಸ್ಟ್ ಪಂದ್ಯವು ಇಂಗ್ಲೆಂಡ್ ಪಾಲಿಗೆ ಐತಿಹಾಸಿಕ ಗೆಲುವಾಗಿ ಮಾರ್ಪಟ್ಟಿದೆ.
Published On - 10:23 pm, Mon, 5 December 22