ಭಾರತದ ವಿರುದ್ಧ ನಾವು ಸಹ ಆಡಲ್ಲ: ಪಾಕಿಸ್ತಾನದ ಗೊಡ್ಡು ಬೆದರಿಕೆ

|

Updated on: Nov 11, 2024 | 12:15 PM

Champions Trophy 2025: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಇಂಗ್ಲೆಂಡ್, ಬಾಂಗ್ಲಾದೇಶ್, ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಈ ಟೂರ್ನಿಗೆ ಅರ್ಹತೆ ಪಡೆದಿದ್ದು, ಅದರಂತೆ ಫೆಬ್ರವರಿಯಲ್ಲಿ ಎಂಟು ದೇಶಗಳ ಕ್ರಿಕೆಟ್ ಕದನ ನಡೆಯಲಿದೆ.

ಭಾರತದ ವಿರುದ್ಧ ನಾವು ಸಹ ಆಡಲ್ಲ: ಪಾಕಿಸ್ತಾನದ ಗೊಡ್ಡು ಬೆದರಿಕೆ
PAK vs IND
Follow us on

ಭಾರತ ಮತ್ತು ಪಾಕಿಸ್ತಾನ್ ನಡುವಣ ಕ್ರಿಕೆಟ್ ಪರಿಸ್ಥಿತಿ ಮತ್ತೆ ಉಲ್ಬಣಗೊಂಡಿದೆ. ಪಾಕ್​ನಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದೆ. ಈ ಸ್ಪಷ್ಟನೆಯ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಎದುರಾಗಿದೆ.

ಆದರೆ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧವಿಲ್ಲ. ಹೀಗಾಗಿಯೇ ಇದೀಗ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಏಕೆಂದರೆ ಈ ಟೂರ್ನಿಯಿಂದ ಭಾರತ ತಂಡ ಹೊರಗುಳಿದರೆ, ಪಾಕ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿಗೆ ತುಂಬಲಾರದ ನಷ್ಟ ಉಂಟಾಗಲಿದೆ. ಹೀಗಾಗಿಯೇ ಪಿಸಿಬಿ ಇದೀಗ ಗೊಡ್ಡು ಬೆದರಿಕೆಗಳತ್ತ ಮುಖ ಮಾಡಿದೆ.

ಅದರ ಮೊದಲ ಭಾಗವಾಗಿ ಇದೀಗ ಭಾರತ ತಂಡವು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ನಿರಾಕರಿಸಿದರೆ, ಇನ್ಮುಂದೆ ನಾವು ಸಹ ಭಾರತದ ವಿರುದ್ಧ ಆಡಲ್ಲ ಎಂದು ಪಾಕ್ ಬೆದರಿಕೆಯೊಡ್ಡಿದೆ.

ಅಂದರೆ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದೆ. ಒಂದು ವೇಳೆ ಟೀಮ್ ಇಂಡಿಯಾ ಪಾಕ್​ಗೆ ತೆರಳಲು ಹಿಂದೇಟು ಹಾಕಿದರೆ, ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತದ ವಿರುದ್ಧ ಯಾವುದೇ ಪಂದ್ಯವಾಡದಿರಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಇಲ್ಲಿ ಪಾಕಿಸ್ತಾನ್ ತಂಡವು ಭಾರತದ ವಿರುದ್ಧದ ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿಯದಿದ್ದರೆ, ಅದರಿಂದ ಬಿಸಿಸಿಐಗೆ ಹೆಚ್ಚಿನ ನಷ್ಟ ಉಂಟಾಗಲಿದೆ. ಏಕೆಂದರೆ ಪಾಕ್ ವಿರುದ್ಧದ ಪಂದ್ಯದಿಂದ ಬಿಸಿಸಿಐ ಭಾರೀ ಪ್ರಮಾಣದ ಆದಾಯಗಳಿಸುತ್ತಿದೆ.

ಇದೀಗ ಇದನ್ನೇ ಬಂಡವಾಳವಾಗಿಸಿ ಬಿಸಿಸಿಐ ಅನ್ನು ಬೆದರಿಸುವ ತಂತ್ರಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಆದರೆ ಪಿಸಿಬಿಯ ಈ ಗೊಡ್ಡು ಬೆದರಿಕೆಗಳಿಗೆ ಬಿಸಿಸಿಐ ತಲೆ ಕೆಡಿಸಿಕೊಳ್ಳುವುದಿಲ್ಲ.

ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದಿಂದ ಬಿಸಿಸಿಐ ಉತ್ತಮ ಆದಾಯ ಗಳಿಸುತ್ತಿದ್ದರೂ, ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಪಾಲಿಗೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯಗಳೇ ಜೀವಾಳ.

ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಒಡ್ಡಿಯಿರುವ ಈ ಬೆದರಿಕೆಯನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿಲ್ಲ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ವಿಷಯದಲ್ಲಿ ತನ್ನ ನಿರ್ಧಾರವನ್ನು ಸಹ ಬದಲಿಸುವುದಿಲ್ಲ ಎನ್ನಬಹುದು.

ಇದನ್ನೂ ಓದಿ: ಹುಡುಗಿಯಾಗಿ ಬದಲಾದ ಟೀಮ್ ಇಂಡಿಯಾ ಕ್ರಿಕೆಟಿಗನ ಪುತ್ರ

ಹಾಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳಬೇಕಿದ್ದರೆ, ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ಪಾಕ್ ಕ್ರಿಕೆಟ್ ಮಂಡಳಿಗೆ ಎದುರಾಗಲಿದೆ. ಇಲ್ಲಿ ಇಡೀ ಟೂರ್ನಿಯು ಪಾಕಿಸ್ತಾನದಲ್ಲೇ ನಡೆದರೂ, ಭಾರತದ ಪಂದ್ಯಗಳಿಗೆ ಶ್ರೀಲಂಕಾ ಅಥವಾ ಯುಎಇ ಆತಿಥ್ಯವಹಿಸುವ ಸಾಧ್ಯತೆಯಿದೆ. ಅದರಂತೆ 2025ರ ಚಾಂಪಿಯನ್ಸ್ ಟ್ರೋಫಿ ಹೇಗೆ ಜರುಗಲಿದೆ ಎಂಬುದಕ್ಕೆ ಶೀಘ್ರದಲ್ಲೇ ಸ್ಪಷ್ಟ ಉತ್ತರ ಸಿಗಲಿದೆ.