ನಮ್ಮ ಜೊತೆ 10 ಪಂದ್ಯಗಳನ್ನಾಡಿ ನೋಡಿ: ಟೀಮ್ ಇಂಡಿಯಾಗೆ ಪಾಕ್ ಕ್ರಿಕೆಟಿಗನ ಸವಾಲು

India vs Pakistan: ಭಾರತ ಮತ್ತು ಪಾಕಿಸ್ತಾನ್ ಈವರೆಗೆ ಒಟ್ಟು 208 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಪಾಕಿಸ್ತಾನ್ ತಂಡ 88 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಭಾರತ ತಂಡ 76 ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಕಳೆದೊಂದು ದಶಕದಿಂದ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮರೆಯುತ್ತಾ ಬರುತ್ತಿದೆ. ಹೀಗಾಗಿಯೇ ಉಭಯ ತಂಡಗಳ ನಡುವಣ ದ್ವಿಪಕ್ಷೀಯ ಸರಣಿ ಮೂಲಕ ಯಾರು ಬಲಿಷ್ಠ ಎಂಬುದು ನಿರ್ಧಾರವಾಗಲಿ ಎಂದು ಸಕ್ಲೇನ್ ಮುಷ್ತಾಕ್ ಆಗ್ರಹಿಸಿದ್ದಾರೆ.

ನಮ್ಮ ಜೊತೆ 10 ಪಂದ್ಯಗಳನ್ನಾಡಿ ನೋಡಿ: ಟೀಮ್ ಇಂಡಿಯಾಗೆ ಪಾಕ್ ಕ್ರಿಕೆಟಿಗನ ಸವಾಲು
Team India - Saqlain Mushtaq

Updated on: Mar 12, 2025 | 10:33 AM

ಪಾಕಿಸ್ತಾನ್ ವಿರುದ್ಧದ ಟೀಮ್ ಇಂಡಿಯಾದ ಪಾರುಪತ್ಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಮುಂದುವರೆದಿದೆ. ಆದರೆ ಈ ಬಾರಿ ಪಾಕ್ ಪಡೆಯನ್ನು ಭಾರತೀಯರು ಅತ್ಯಂತ ಹೀನಾಯವಾಗಿ ಸೋಲಿಸಿದ್ದರು. ಈ ಸೋಲನ್ನು ಅರಗಿಸಿಕೊಳ್ಳಲು ಪಾಕಿಸ್ತಾನದ ಮಾಜಿ ಆಟಗಾರರಿಗೂ ಕೂಡ ಸಾಧ್ಯವಾಗುತ್ತಿಲ್ಲ ಎಂಬುದು ವಿಶೇಷ.
ಚಾಂಪಿಯನ್ಸ್ ಟ್ರೋಫಿಯಲ್ಲಿನ ಟೀಮ್ ಇಂಡಿಯಾದ ಉತ್ತಮ ಪ್ರದರ್ಶನದ ಬಳಿಕ ಮಾತನಾಡಿದ ಪಾಕ್ ತಂಡದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್, ನಾವು ರಾಜಕೀಯ ವಿಷಯಗಳನ್ನು ಬದಿಗಿಟ್ಟರೆ, ಅವರ ಆಟಗಾರರು ತುಂಬಾ ಒಳ್ಳೆಯವರು. ಅಲ್ಲದೆ ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಅವರು ಪಾಕಿಸ್ತಾನ್ ವಿರುದ್ಧ ಹೆಚ್ಚಿನ ಪಂದ್ಯಗಳನ್ನಾಡದಿರುವುದೇ ಸಮಸ್ಯೆಯಾಗಿರುವುದು.

ಒಂದು ವೇಳೆ ಟೀಮ್ ಇಂಡಿಯಾ ನಿಜವಾಗಿಯೂ ಉತ್ತಮ ತಂಡವಾಗಿದ್ದರೆ, ಪಾಕಿಸ್ತಾನದ ವಿರುದ್ಧ 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಲಿ, ನೋಡೋಣ. ಇದರಲ್ಲಿ ಯಾರು ಅತೀ ಹೆಚ್ಚು ಪಂದ್ಯಗಳನ್ನು ಗೆಲ್ಲುತ್ತಾರೋ ಅವರೇ ಬಲಿಷ್ಠರು ಎಂಬುದು ನಿರ್ಧಾರವಾಗುತ್ತದೆ.

ಇದರ ಹೊರತಾಗಿ ಒಂದು ಪಂದ್ಯದ ಫಲಿತಾಂಶದಿಂದ ಯಾರು ಉತ್ತಮರು ಎಂದು ಅಳೆಯುವುದು ಸರಿಯಲ್ಲ. ನನ್ನ ಪ್ರಕಾರ, ಎರಡೂ ತಂಡಗಳು ಮೂರು ಸ್ವರೂಪಗಳಲ್ಲೂ ಕನಿಷ್ಠ ಹತ್ತತ್ತು ಪಂದ್ಯಗಳನ್ನಾಡಲಿ. ಇದರಿಂದ ಯಾವ ತಂಡ ಬಲಿಷ್ಠ ಎಂಬುದು ಗೊತ್ತಾಗುತ್ತದೆ ಎಂದು ಸಕ್ಲೇನ್ ಮುಷ್ತಾಕ್ 24 ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಸಕ್ಲೇನ್ ಮುಷ್ತಾಕ್ ಅವರ ಈ ಸವಾಲಿನ ಹೊರತಾಗಿಯೂ ಭಾರತ ಮತ್ತು ಪಾಕಿಸ್ತಾನ್ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುವುದಿಲ್ಲ. ಹೀಗಾಗಿ ಮತ್ತೊಮ್ಮೆ ಇಂಡೊ-ಪಾಕ್ ಕದನಕ್ಕಾಗಿ ಮುಂಬರುವ ಏಷ್ಯಾಕಪ್​ವರೆಗೆ ಕಾಯಲೇಬೇಕು. ಅಷ್ಟರಲ್ಲಾದರೂ ಪಾಕಿಸ್ತಾನ್ ಬಲಿಷ್ಠ ಪಡೆಯನ್ನು ರೂಪಿಸಿಕೊಳ್ಳಲಿದೆಯಾ ಎಂಬುದೇ ಪ್ರಶ್ನೆ.

ಇದನ್ನೂ ಓದಿ: ಮುಂದಿನ ವಿಶ್ವಕಪ್​ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲ..!

ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ರೋಚಕತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಬರುತ್ತಿದೆ. ಅದರಲ್ಲೂ ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಪಂದ್ಯಗಳನ್ನು ಗೆಲ್ಲುತ್ತಿದೆ. ಅತ್ತ ಪಾಕ್ ಪಡೆ ಸುಲಭವಾಗಿ ಭಾರತದ ವಿರುದ್ಧ ಮಂಡಿಯೂರುತ್ತಿದೆ. ಹೀಗಾಗಿಯೇ ಕ್ರಿಕೆಟ್ ಪ್ರೇಮಿಗಳು ಸಹ ಪಾಕಿಸ್ತಾನ್ ತಂಡ ಮತ್ತಷ್ಟು ಬಲಿಷ್ಠವಾಗಲಿ ಎಂದು ಆಗ್ರಹಿಸುತ್ತಿದ್ದಾರೆ. ಈ ಮೂಲಕ ರಣರೋಚಕ ಭಾರತ-ಪಾಕಿಸ್ತಾನ್ ಪಂದ್ಯ ವೀಕ್ಷಿಸುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

 

 

Published On - 10:30 am, Wed, 12 March 25