ನಮ್ಮನ್ನ ಕರೆದಿಲ್ಲ… ದೂರು ನೀಡಿದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ..!
Champions Trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಯೋಜಿಸಿತ್ತು. ಹೈಬ್ರಿಡ್ ಮಾದರಿಯಲ್ಲಿ ಜರುಗಿದ ಟೂರ್ನಿಯ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಟೀಮ್ ಇಂಡಿಯಾದ ಮ್ಯಾಚ್ಗಳು ದುಬೈನಲ್ಲಿ ಆಯೋಜಿಸಲಾಗಿತ್ತು. ಅದರಂತೆ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 4 ವಿಕೆಟ್ಗಳಿಂದ ಸೋಲಿಸಿ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಿತು.

ಚಾಂಪಿಯನ್ಸ್ ಟ್ರೋಫಿ ಮುಗಿದು ದಿನಗಳು ಕಳೆದಿವೆ. ಟ್ರೋಫಿ ಗೆದ್ದ ಟೀಮ್ ಇಂಡಿಯಾ ಭಾರತಕ್ಕೆ ಮರಳಿದರೆ, ಸೋತ ನ್ಯೂಝಿಲೆಂಡ್ ಮುಂಬರುವ ಟಿ20 ಸರಣಿಗೆ ಸಜ್ಜಾಗುತ್ತಿದೆ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಗೋಳು ಮಾತ್ರ ಇನ್ನೂ ಸಹ ಮುಗಿದಿಲ್ಲ. ಟೂರ್ನಿಯ ಆಯೋಜಕರಾಗಿದ್ದ ಪಿಸಿಬಿಯ ಸದಸ್ಯರನ್ನು ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಇದೀಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ಸಲ್ಲಿಸಿದೆ ಎಂದು ವರದಿಯಾಗಿದೆ.
ಮಾರ್ಚ್ 9 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ವೇದಿಕೆ ಮೇಲೆ ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಸೇರಿದಂತೆ ಐಸಿಸಿಯ ಕೆಲ ಸದಸ್ಯರು ಕಾಣಿಸಿಕೊಂಡಿದ್ದರು. ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಯಾವೊಬ್ಬ ಸದಸ್ಯರು ಸಹ ವೇದಿಕೆ ಮೇಲಿರಲಿಲ್ಲ. ಈ ಬಗ್ಗೆ ಪಾಕಿಸ್ತಾನ್ ತಂಡದ ಮಾಜಿ ಆಟಗಾರರು ಪ್ರಶ್ನೆಗಳನ್ನೆತ್ತಿದ್ದರು.
ಆದರಲ್ಲೂ ಟೂರ್ನಿಯ ಆಯೋಜಕರಾಗಿದ್ದ ಪಿಸಿಬಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಸಮಾರಂಭಕ್ಕೆ ಗೈರಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೀಗ ನಖ್ವಿ ಅವರು ಈ ಕಾರ್ಯಕ್ರಮಕ್ಕಾಗಿ ದುಬೈಗೆ ಪ್ರಯಾಣಿಸಿಯೇ ಇರಲಿಲ್ಲ ಎಂಬುದು ಬಹಿರಘವಾಗಿದೆ. ಬದಲಿಗೆ ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಮೈರ್ ಅಹ್ಮದ್ ಸೈಯದ್ ಫೈನಲ್ ಪಂದ್ಯದ ಕಾರ್ಯಕ್ರಮಕ್ಕೆ ಕಳುಹಿಸಿ ಕೊಡಲಾಗಿತ್ತು.
ಆದರೆ ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಮೈರ್ ಅಹ್ಮದ್ ಸೈಯದ್ ಸ್ಥಳದಲ್ಲಿ ಹಾಜರಿದ್ದರೂ, ಪಂದ್ಯಾವಳಿಯ ನಿರ್ದೇಶಕರಾಗಿದ್ದರೂ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅವರನ್ನು ವೇದಿಕೆಗೆ ಆಹ್ವಾನಿಸಲಾಗಿರಲಿಲ್ಲ ಎಂದು ತಿಳಿದು ಬಂದಿದೆ. ಇದೇ ಕಾರಣದಿಂದಾಗಿ ಇದೀಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿದೆ.
ಪಿಸಿಬಿ ಔಪಚಾರಿಕ ದೂರು ಸಲ್ಲಿಸಲಾಗಿದ್ದು. ಈ ಬಗ್ಗೆ ವಿವರಣೆ ಮತ್ತು ಸಾರ್ವಜನಿಕ ಕ್ಷಮೆಯಾಚನೆಯನ್ನು ಕೋರಲಾಗಿದೆ. ಆತಿಥೇಯ ರಾಷ್ಟ್ರವಾಗಿ ಪಾಕಿಸ್ತಾನದ ಪಾತ್ರವನ್ನು ಈ ರೀತಿ ನಿರ್ಲಕ್ಷಿಸಿರುವುದು ನಮಗೆ ಆಘಾತವನ್ನುಂಟು ಮಾಡಿದೆ ಎಂದು ಪಿಸಿಬಿ ಮೂಲವೊಂದು ಡಾನ್ ಪೋರ್ಟಲ್‌ಗೆ ತಿಳಿಸಿದೆ.
ಟೂರ್ನಮೆಂಟ್ ನಿರ್ದೇಶಕ ಮತ್ತು ಪಿಸಿಬಿ ಅಧ್ಯಕ್ಷರ ನಿಯೋಜಿತ ಪ್ರತಿನಿಧಿಯಾಗಿದ್ದ ಸೈಯದ್ ಅವರನ್ನು ಹೊರಗಿಡುವ ಐಸಿಸಿ ನಿರ್ಧಾರವು ತನ್ನದೇ ಆದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಉಲ್ಲಂಘಿಸುತ್ತದೆ. ಇದು ತತ್ವ, ನ್ಯಾಯ ಮತ್ತು ಆಟದ ಜಾಗತಿಕ ಪಾಲುದಾರರಿಗೆ ಗೌರವದ ವಿಷಯವಾಗಿದೆ.
ಐಸಿಸಿಯ ಪುನರಾವರ್ತಿತ ಪ್ರಮಾದಗಳು, ದ್ವಿಮುಖ ನೀತಿಗಳು ಮತ್ತು ಆಯ್ದ ಆಡಳಿತವು ಅದರ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ನಾವು ಸಂಪೂರ್ಣ ಸಾರ್ವಜನಿಕ ಸ್ಪಷ್ಟೀಕರಣ ಮತ್ತು ಅಂತಹ ಪಕ್ಷಪಾತ ಮತ್ತು ಅನ್ಯಾಯದ ವರ್ತನೆ ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆಯನ್ನು ಕೋರಿದ್ದೇವೆ. ಪಿಸಿಬಿ ಕ್ರಿಕೆಟ್ ಆಡಳಿತ ಮಂಡಳಿಯು ವೃತ್ತಿಪರತೆ, ಪಾರದರ್ಶಕತೆ ಮತ್ತು ಸಮಾನ ಪ್ರಾತಿನಿಧ್ಯವನ್ನು ನಿರೀಕ್ಷಿಸುತ್ತದೆ ಎಂದು ಈ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದು ಕೇವಲ ಸಮಾರಂಭದ ಬಗ್ಗೆ ಅಲ್ಲ. ಗೌರವ, ಸಮಗ್ರತೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯಾಯಯುತ ಆಡಳಿತದ ಮೂಲಭೂತ ತತ್ವಗಳ ಪಾಲನೆಯ ವಿಷಯವಾಗಿದೆ. ಇವೆಲ್ಲವನ್ನೂ ಇಡೀ ವಿಶ್ವವೇ ವೀಕ್ಷಿಸುತ್ತಿದೆ. ಐಸಿಸಿ ಅಂತಿಮವಾಗಿ ವೃತ್ತಿಪರತೆಯನ್ನು ಎತ್ತಿಹಿಡಿಯುತ್ತದೆಯೇ ಅಥವಾ ಕ್ರಿಕೆಟ್‌ನ ಜಾಗತಿಕ ಮೌಲ್ಯಕ್ಕಾಗಿ ಆಯ್ದ ಹಿತಾಸಕ್ತಿಗಳಿಗೆ ಮನ್ನಣೆ ನೀಡಲಿದೆಯೇ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಅಲ್ಲದೆ ಆಗಿರುವ ಪ್ರಮಾದಕ್ಕೆ ಐಸಿಸಿ ಕಡೆಯಿಂದ ಸಾರ್ವಜನಿಕ ಕ್ಷಮಾಪಣೆಯನ್ನು ನಿರೀಕ್ಷಿಸುತ್ತಿರುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಯುಜ್ವೇಂದ್ರ ಚಹಲ್ ಲವ್ವಿ ಡವ್ವಿ: ಪತಿಯ ಫೋಟೋ ಮತ್ತೆ ಹಂಚಿಕೊಂಡ ಧನಶ್ರೀ ವರ್ಮಾ
ಒಟ್ಟಿನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಶುರುವಾದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಗೋಳು, ಟೂರ್ನಿ ಕಳೆದರೂ ಮುಗಿದಿಲ್ಲ ಎಂಬುದೇ ವಿಪರ್ಯಾಸ.
Published On - 9:04 am, Wed, 12 March 25