ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಫೈನಲ್ ಫೈಟ್

|

Updated on: Jan 20, 2025 | 8:42 PM

Physically Disabled Champions Trophy 2025: ಜನವರಿ 21 ರಂದು ಶ್ರೀಲಂಕಾದಲ್ಲಿ ನಡೆಯಲಿರುವ ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸೋತಿರುವುದರಿಂದ ಫೈನಲ್‌ ಕುತೂಹಲಕಾರಿಯಾಗಿದೆ. ವಿಕ್ರಾಂತ್ ರವೀಂದ್ರ ಕೆನ್ನಿ ನಾಯಕತ್ವದ ಭಾರತ ತಂಡ ಪ್ರಶಸ್ತಿ ಗೆಲ್ಲುವ ಬಲಿಷ್ಠ ಸ್ಪರ್ಧಿಯಾಗಿದೆ. ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದೆ.

ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ: ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಫೈನಲ್ ಫೈಟ್
ಟೀಂ ಇಂಡಿಯಾ
Follow us on

ಜನವರಿ 12 ರಿಂದ ಶ್ರೀಲಂಕಾದಲ್ಲಿ ನಡೆಯುತ್ತಿರುವ ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಜನವರಿ 21ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ಸೆಣಸಾಡಲಿವೆ. ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಪ್ರದರ್ಶನವು ಇಲ್ಲಿಯವರೆಗೆ ಉತ್ತಮವಾಗಿದ್ದು, ಪ್ರಶಸ್ತಿಯನ್ನು ಗೆಲ್ಲುವ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಆದರೆ ಲೀಗ್ ಹಂತದಲ್ಲಿ ಇದೇ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಸೋತಿರುವ ಕಾರಣ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

ಪ್ರಶಸ್ತಿಯಿಂದ ಒಂದು ಹೆಜ್ಜೆ ದೂರ

ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 4 ತಂಡಗಳು ಭಾಗವಹಿಸಿದ್ದವು. ಈ ಟೂರ್ನಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ಅಲ್ಲದೆ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸ್ಪರ್ಧಿಸಿದ್ದವು. ಆದರೆ ಈ ಎರಡೂ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಎಡವಿದ್ದವು. ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯನ್ನು 2019 ರ ನಂತರ ಮೊದಲ ಬಾರಿಗೆ ಆಡಲಾಗುತ್ತಿದ್ದು, ಈ ಟೂರ್ನಿಯಲ್ಲಿ ಭಾರತ ತಂಡ ವಿಕ್ರಾಂತ್ ರವೀಂದ್ರ ಕೆನ್ನಿ ಅವರ ನಾಯಕತ್ವದಲ್ಲಿ ಇಲ್ಲಿಯವರೆಗೆ ಅತ್ಯಂತ ಬಲಿಷ್ಠ ಆಟ ಪ್ರದರ್ಶಿಸಿದೆ.

ಇಂಗ್ಲೆಂಡ್ ವಿರುದ್ಧ ಸೋಲು

ಈ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿತ್ತು. ಇದರ ನಂತರ, ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧವೂ ಏಕಪಕ್ಷೀಯ ಗೆಲುವು ಸಾಧಿಸಿತ್ತು. ಆ ಬಳಿಕ ಟೀಂ ಇಂಡಿಯಾ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಿದ್ದು, ಆ ಪಂದ್ಯದಲ್ಲೂ ಭಾರತ ಗೆಲುವು ಸಾಧಿಸಿತ್ತು. ಆದರೆ ಇದಾದ ಬಳಿಕ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಬೇಕಾಯಿತು. ಆದರೆ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದ್ದು, ಇದೀಗ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಯಿಂದ ನಡೆಯಲಿದೆ.

ಟೀಂ ಇಂಡಿಯಾ ತಂಡ: ವಿಕ್ರಾಂತ್ ರವೀಂದ್ರ ಕೆನ್ನಿ (ನಾಯಕ), ರವೀಂದ್ರ ಗೋಪಿನಾಥ್ ಸಂತೆ (ಉಪನಾಯಕ), ಯೋಗೇಂದರ್ ಸಿಂಗ್ (ವಿಕೆಟ್ ಕೀಪರ್), ಅಖಿಲ್ ರೆಡ್ಡಿ, ರಾಧಿಕಾ ಪ್ರಸಾದ್, ದೇವೇಂದ್ರ ಸಿಂಗ್ (ವಿಕೆಟ್ ಕೀಪರ್), ಆಕಾಶ್ ಅನಿಲ್ ಪಾಟೀಲ್, ಸನ್ನಿ ಗೋಯತ್, ಪವನ್ ಕುಮಾರ್, ಜಿತೇಂದ್ರ, ನರೇಂದ್ರ, ರಾಜೇಶ್ ನಿಖಿಲ್ ಮನ್ಹಾಸ್, ಅಮೀರ್ ಹಾಸನ್, ಮಜಿದ್ ಮಗರೆ, ಕುನಾಲ್ ದತ್ತಾತ್ರೇಯ ಫಣಸಾಯ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ