Champions Trophy 2025: ಟೀಮ್ ಇಂಡಿಯಾ ಬದಲಾವಣೆಗೆ ಇನ್ನೂ ಇದೆ ಅವಕಾಶ
Champions trophy 2025: ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳಲ್ಲಿ ಬದಲಾವಣೆ ತರಲು ಮುಂದಿನ ತಿಂಗಳುವರೆಗೂ ಅವಕಾಶ ನೀಡಲಾಗಿದೆ.
ಚಾಂಪಿಯನ್ಸ್ ಟ್ರೋಫಿಗಾಗಿ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಹದಿನೈದು ಸದಸ್ಯರಲ್ಲಿ 14 ಮಂದಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆನ್ನು ನೋವಿನ ಸಮಸ್ಯೆಯ ಕಾರಣ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹರ್ಷಿತ್ ರಾಣಾ ಕಣಕ್ಕಿಳಿಯಲಿದ್ದಾರೆ.
ಇನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಫೆಬ್ರವರಿ 12ರ ತನಕ ಅವಕಾಶ ನೀಡಲಾಗಿದೆ. ಅಂದರೆ ಯಾವುದಾದರೂ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದರೆ, ಅವರನ್ನು ಕೈ ಬಿಟ್ಟು ಬೇರೆಯವರ ಆಯ್ಕೆಗೆ ಐಸಿಸಿ ಅನುವು ಮಾಡಿಕೊಟ್ಟಿದೆ.
ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಟೀಮ್ ಇಂಡಿಯಾ ಆಟಗಾರರ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರೆ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈ ಬಿಡಲು ಮುಂದಿನ ತಿಂಗಳು 12ರ ತನಕ ಅವಕಾಶವಿದೆ.
ಗಾಯಾಳುಗಳ ಬದಲಾವಣೆಗೆ ನೇರ ಅವಕಾಶ:
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿರುವ ಆಟಗಾರರು ಗಾಯಗೊಂಡರೆ ಅವರನ್ನು ನೇರವಾಗಿ ಬದಲಿಸಬಹುದು. ಅಂದರೆ ಟೂರ್ನಿ ಆರಂಭಕ್ಕೂ ಮುನ್ನ ಅಥವಾ ಟೂರ್ನಿ ನಡುವೆ ಇಂಜುರಿಗೆ ಒಳಗಾದರೆ ಅಥವಾ ವೈಯಕ್ತಿಕ ಕಾರಣದಿಂದ ಹೊರಗುಳಿಯಲು ನಿರ್ಧರಿಸಿದರೆ ಅವರ ಬದಲಿಗೆ ಮತ್ತೋರ್ವ ಆಟಗಾರನನ್ನು ಆಯ್ಕೆ ಮಾಡಬಹುದು.
ಆದರೆ ಅದಕ್ಕೂ ಮುನ್ನ ಐಸಿಸಿಯ ಟೆಕ್ನಿಕಲ್ ಕಮಿಟಿಯ ಅನುಮತಿ ಪಡೆಯಬೇಕು. ಹೀಗೆ ಎರಡು ಆಯ್ಕೆಗಳ ಮೂಲಕ ತಂಡದಲ್ಲಿ ಬದಲಾವಣೆ ತರಲು ಅವಕಾಶ ಇರುವುದರಿಂದಲೇ ಈ ಬಾರಿ ಬಿಸಿಸಿಐ ಆಯ್ಕೆ ಸಮಿತಿ ಮೀಸಲು ಆಟಗಾರರ ಆಯ್ಕೆಗೆ ಒತ್ತು ನೀಡಿಲ್ಲ.
ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗುತ್ತಾ?
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತರ ಸಿಗಲಿದೆ. ಏಕೆಂದರೆ ಈ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಾಳು ಜಜಸ್ಪ್ರೀತ್ ಬುಮ್ರಾ ಅವರನ್ನು ಕಣಕ್ಕಿಳಿಯುವಂತೆ ಆಯ್ಕೆ ಸಮಿತಿ ಮನವಿ ಮಾಡಿದೆ.
ಈ ವೇಳೆಗೆ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದರೆ ಅವರು ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯವಾಡಲಿದ್ದಾರೆ. ಒಂದು ವೇಳೆ ಅವರು ಚಾಂಪಿಯನ್ಸ್ ಟ್ರೋಫಿ ವೇಳೆ ಫಿಟ್ ನೆಸ್ ಸಾಧಿಸಲ್ಲ ಎಂದು ಕಂಡು ಬಂದರೆ, ಅವರ ಸ್ಥಾನದಲ್ಲಿ ಮತ್ತೋರ್ವ ವೇಗಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಕೊನೆ ಕ್ಷಣದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: Champions Trophy 2025: ಟೀಮ್ ಇಂಡಿಯಾದಲ್ಲಿ 6 ಹಳೆ ಹುಲಿಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ.