IPL 2025: ಕಿರಿಯ ವಯಸ್ಸಿನಲ್ಲೇ ದಾಖಲೆ; 14 ವರ್ಷದ ವೈಭವ್ ಆಟಕ್ಕೆ ಫಿದಾ ಆದ ಪ್ರಧಾನಿ ಮೋದಿ

PM Modi Praises Young Cricketer Vaibhav Suryavanshi: ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಐಪಿಎಲ್ ಶತಕವನ್ನು ಶ್ಲಾಘಿಸಿದ್ದಾರೆ. ವೈಭವ್ ಅವರ ಕಠಿಣ ಪರಿಶ್ರಮ ಮತ್ತು ಯಶಸ್ಸನ್ನು ಅವರು ಮೆಚ್ಚಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪ್ರಗತಿ ಮತ್ತು ಭವಿಷ್ಯದ ಬಗ್ಗೆಯೂ ಮಾತನಾಡಿದ ಮೋದಿ, ಕ್ರೀಡಾ ವಲಯಕ್ಕೆ 4000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ.

IPL 2025: ಕಿರಿಯ ವಯಸ್ಸಿನಲ್ಲೇ ದಾಖಲೆ; 14 ವರ್ಷದ ವೈಭವ್ ಆಟಕ್ಕೆ ಫಿದಾ ಆದ ಪ್ರಧಾನಿ ಮೋದಿ
ವೈಭವ್ ಸೂರ್ಯವಂಶಿ, ಪ್ರಧಾನಿ ಮೋದಿ

Updated on: May 04, 2025 | 10:48 PM

ಬಿಹಾರದ ಪಾಟ್ನಾದಲ್ಲಿ ನಡೆದ ಖೇಲೋ ಇಂಡಿಯಾ (Khelo India) ಯುವ ಕ್ರೀಡಾಕೂಟ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವರ್ಚುವಲ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ಶ್ಲಾಘಿಸಿದರು. ‘ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಅವರು ಹೆಚ್ಚು ಆಟವಾಡಿದಷ್ಟೂ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾರೆ.

ಐಪಿಎಲ್‌ನಲ್ಲಿ ಬಿಹಾರದ ಮಗ ವೈಭವ್ ಸೂರ್ಯವಂಶಿಯ ಪ್ರದರ್ಶನವನ್ನು ನಾವೆಲ್ಲರೂ ನೋಡಿದ್ದೇವೆ. ವೈಭವ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಅವರು ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಡಿದ್ದು ಸಹ ಅವರಿಗೆ ಸಹಾಯ ಮಾಡಿತು. ಇದರರ್ಥ ಒಬ್ಬರು ಹೆಚ್ಚು ಆಟವಾಡಿದಷ್ಟೂ ಅವರು ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

35 ಎಸೆತಗಳಲ್ಲಿ ಶತಕ ಸಿಡಿಸಿದ್ದ ವೈಭವ್

ವಾಸ್ತವವಾಗಿ ಏಪ್ರಿಲ್ 28 ರಂದು ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ್ದರು. 7 ಬೌಂಡರಿ ಹಾಗೂ 11 ಸಿಕ್ಸರ್ ಸಹಿತ 100 ರನ್ ಪೂರೈಸಿದ ವೈಭವ್, ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದರು. ಇದು ಮಾತ್ರವಲ್ಲದೆ ಐಪಿಎಲ್ ಹಾಗೂ ಟಿ20 ಕ್ರಿಕೆಟ್​ನಲ್ಲಿ ಅತಿ ವೇಗದ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆಗೂ ವೈಭವ್ ಕೊರಳೊಡ್ಡಿದ್ದರು. ಇಷ್ಟೇ ಅಲ್ಲ ಕೇವಲ 14 ವರ್ಷ 32 ದಿನಗಳ ವಯಸ್ಸಿನಲ್ಲಿ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದ ವೈಭವ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಸ್ವರೂಪದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

IPL 2025: 35 ಎಸೆತಗಳಲ್ಲಿ ಶತಕ..! ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ 9ನೇ ಕ್ಲಾಸ್ ವೈಭವ್

ಕ್ರೀಡಾ ಕ್ಷೇತ್ರಕ್ಕೆ 4,000 ಕೋಟಿ ರೂ

ಇನ್ನು ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿದ ಮೋದಿ, ‘ಭಾರತವು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದೆ. ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿ ಸಾಧಿಸಿದಷ್ಟೂ ದೇಶದ ಶಕ್ತಿಯೂ ಹೆಚ್ಚಾಗುತ್ತದೆ. ಭಾರತದಲ್ಲಿ ಕ್ರೀಡೆಗಳ ಭವಿಷ್ಯ ಉಜ್ವಲವಾಗಿದೆ. ದೇಶದಲ್ಲಿ ಕ್ರೀಡಾ ವಲಯವನ್ನು ಉತ್ತೇಜಿಸಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಕ್ರೀಡಾ ಕ್ಷೇತ್ರಕ್ಕೆ 4,000 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಇದರಿಂದ ಭಾರತ ಕ್ರೀಡಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತದೆ ಮತ್ತು ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳು ಸಿಗುತ್ತವೆ ಎಂಬ ವಿಶ್ವಾಸ ನನಗಿದೆ. ಈಗ ಕ್ರೀಡೆ ಕೇವಲ ಸ್ಪರ್ಧೆಯಾಗಿ ಉಳಿದಿಲ್ಲ, ಬದಲಾಗಿ ನಮ್ಮ ದೇಶಗಳ ಗುರುತಾಗುತ್ತಿದೆ. ನಮ್ಮ ದೇಶದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆದಂತೆ, ದೇಶದ ಬಲವು ಮಹಾಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ’ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Sun, 4 May 25