ವಾರಣಾಸಿ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಇಂದು ಶಂಕುಸ್ಥಾಪನೆ; ಈ ಮೈದಾನದ ವಿಶೇಷತೆ ಏನು ಗೊತ್ತಾ?
PM Modi: ಉತ್ತರ ಪ್ರದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರ್ಜರಿ ಗಿಫ್ಟ್ ನೀಡಲಿದ್ದಾರೆ. ಶನಿವಾರ ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದು, ಇದು ಇಲ್ಲಿನ ಮೊದಲ ಕ್ರಿಕೆಟ್ ಸ್ಟೇಡಿಯಂ ಆಗಲಿದೆ.
ಉತ್ತರ ಪ್ರದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಶನಿವಾರ ಭರ್ಜರಿ ಗಿಫ್ಟ್ ನೀಡಲಿದ್ದಾರೆ. ಶನಿವಾರ ವಾರಣಾಸಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ (cricket stadium in Varanasi) ಶಂಕುಸ್ಥಾಪನೆ ಮಾಡಲಿದ್ದು, ಇದು ಇಲ್ಲಿನ ಮೊದಲ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. ಶಿವನಿಗೆ ಸಂಬಂಧಿಸಿದ ವಿಷಯದ ಮೇಲೆ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್ (IPL) ಪಂದ್ಯಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿಯವರಿಗೂ ವಾರಣಾಸಿಗೂ ವಿಶೇಷ ಸಂಬಂದವಿದ್ದು, ಮೋದಿ ಅವರು ಇಲ್ಲಿನ ಸಂಸದರೂ ಆಗಿದ್ದಾರೆ, ಅದಕ್ಕಾಗಿಯೇ ಈ ಕ್ರೀಡಾಂಗಣವು ವಿಶೇಷವಾಗಿದೆ.
ವಾರಣಾಸಿಯಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣದಲ್ಲಿ ಏನೆಲ್ಲ ವಿಶೇಷತೆ ಮೂಡಲಿದೆ ಎಂಬ ಪಟ್ಟಿ ದೊಡ್ಡದಿದೆ. 30 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣಕ್ಕೆ ಸುಮಾರು 450 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಈ ಕ್ರೀಡಾಂಗಣ ತನ್ನ ಥೀಮ್ನಿಂದ ಸಾಕಷ್ಟು ಸದ್ದು ಮಾಡುತ್ತಿದೆ.
ಜಿ 20 ಶೃಂಗಸಭೆ: ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ
ಈ ಕ್ರೀಡಾಂಗಣ ಏಕೆ ವಿಶೇಷ?
ವಾರಣಾಸಿಯ ರಿಂಗ್ ರೋಡ್ ಬಳಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ ಯುಪಿ ಸರ್ಕಾರ ಸುಮಾರು 120 ಕೋಟಿ ರೂ. ಮತ್ತು ಬಿಸಿಸಿಐ 330 ಕೋಟಿ ರೂ. ವೆಚ್ಚ ಬರಿಸುತ್ತಿದೆ. ಪ್ರಧಾನಿ ಮೋದಿ ಈ ಕ್ರೀಡಾಂಗಣದ ಶಂಕುಸ್ಥಾಪನೆ ಮಾಡಲಿದ್ದು, ಈ ವೇಳೆ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ತಾರೆಯರು ಪ್ರಧಾನಿ ಮೋದಿಯವರೊಂದಿಗೆ ಉಪಸ್ಥಿತರಿರುತ್ತಾರೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ಕ್ರೀಡಾಂಗಣದ ವಾಸ್ತುಶಿಲ್ಪವು ಭಗವಾನ್ ಶಿವನಿಂದ ಪ್ರೇರಿತವಾಗಿದ್ದು, ಇದು ಅರ್ಧಚಂದ್ರಾಕಾರದ ಛಾವಣಿಯ ಹೊದಿಕೆ ಮತ್ತು ತ್ರಿಶೂಲದ ಆಕಾರದ ಫ್ಲಡ್-ಲೈಟ್ಗಳನ್ನು ಹೊಂದಿದೆ. ಅಲ್ಲದೆ ಸ್ನಾನ ಘಟ್ಟಗಳ ಮೆಟ್ಟಿಲುಗಳ ಮಾದರಿಯಲ್ಲಿ ಪ್ರೇಕ್ಷಕರ ಗ್ಯಾಲರಿಯು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ಸುಮಾರು 30 ಸಾವಿರ ಅಭಿಮಾನಿಗಳು ಏಕಕಾಲದಲ್ಲಿ ಪಂದ್ಯವನ್ನು ವೀಕ್ಷಿಸಬಹುದಾಗಿದ್ದು, ಈ ಕ್ರೀಡಾಂಗಣದ ನಿರ್ಮಾಣ ಕೆಲಸ ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
ಮೋದಿ ಸ್ಟೇಡಿಯಂಗಿಂತ ಎಷ್ಟು ಭಿನ್ನ?
ವಾರಣಾಸಿ ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರವಾಗಿದ್ದು, ಇದೀಗ ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ಉಡುಗೊರೆಯಾಗಿ ಪಡೆಯುತ್ತಿದೆ. ಅಲ್ಲದೆ ವಾರಣಾಸಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಹೋಲಿಸಲಾಗುತ್ತಿದೆ. ಎರಡೂ ಸ್ಟೇಡಿಯಂಗಳನ್ನು ನೋಡುವುದಾದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸುಮಾರು 1.25 ಲಕ್ಷ ಜನರು ಕುಳಿತುಕೊಳ್ಳವ ಸಾಮಥ್ಯ್ರ ಹೊಂದಿದ್ದು, ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎನಿಸಿಕೊಂಡಿದೆ. ಆದರೆ ವಾರಣಾಸಿಯಲ್ಲಿ ನಿರ್ಮಿಸಲಾಗುವ ಕ್ರೀಡಾಂಗಣದಲ್ಲಿ ಕೇವಲ 33 ಸಾವಿರ ಜನರು ಮಾತ್ರ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.
ಈ ಕ್ರೀಡಾಂಗಣವು ಸುಮಾರು 63 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಡ್ರೆಸ್ಸಿಂಗ್ ರೂಮ್‌ನಲ್ಲಿಯೇ ಹಲವು ರೀತಿಯ ಸೌಲಭ್ಯಗಳನ್ನು ಮಾಡಲಾಗಿದೆ. ಕ್ರೀಡಾಂಗಣದಲ್ಲಿಯೇ 6 ಒಳಾಂಗಣ ಮತ್ತು 3 ಹೊರಾಂಗಣ ಅಭ್ಯಾಸ ಪಿಚ್‌ಗಳನ್ನು ಮಾಡಲಾಗಿದೆ. ಸಕಲ ಸೌಲಭ್ಯಗಳನ್ನು ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾರ್ಪೊರೇಟ್ ಮನೆಗಳೂ ನಿರ್ಮಾಣವಾಗಿವೆ. ಮೊದಲು ಈ ಕ್ರೀಡಾಂಗಣವನ್ನು ಮೊಟೆರಾ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಆದರೆ ಅದನ್ನು ನವೀಕರಿಸಿ, ಸಂಪೂರ್ಣ ಬದಲಾವಣೆಗಳೊಂದಿಗೆ ಅದನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:40 am, Sat, 23 September 23