ಪೃಥ್ವಿ ಶಾಗೆ 100 ರೂ ದಂಡ ವಿಧಿಸಿ ಕೊನೆಯ ಅವಕಾಶ ನೀಡಿದ ನ್ಯಾಯಾಲಯ
Prithvi Shaw: ಮುಂಬೈನ ಸೆಷನ್ಸ್ ನ್ಯಾಯಾಲಯವು ಕ್ರಿಕೆಟರ್ ಪೃಥ್ವಿ ಶಾ ಅವರಿಗೆ ಸಪ್ನಾ ಗಿಲ್ ಜೊತೆಗಿನ ಸೆಲ್ಫಿ ವಿವಾದಕ್ಕೆ ಸಂಬಂಧಿಸಿದಂತೆ ₹100 ದಂಡ ವಿಧಿಸಿದೆ. ಪೃಥ್ವಿ ಶಾ ಅವರು ನ್ಯಾಯಾಲಯಕ್ಕೆ ಉತ್ತರ ಸಲ್ಲಿಸಲು ವಿಫಲರಾದ ಕಾರಣ ಈ ದಂಡ ವಿಧಿಸಲಾಗಿದೆ. ಸಪ್ನಾ ಗಿಲ್ ಅವರು ಪೃಥ್ವಿ ಶಾ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎಫ್‌ಐಆರ್ ದಾಖಲಿಸಲು ನಿರಾಕರಿಸಿತ್ತು. ನ್ಯಾಯಾಲಯವು ಪೃಥ್ವಿ ಶಾ ಅವರಿಗೆ ಮುಂದಿನ ವಿಚಾರಣೆಯಲ್ಲಿ ಉತ್ತರ ಸಲ್ಲಿಸುವಂತೆ ಎಚ್ಚರಿಕೆ ನೀಡಿದೆ.

ಮುಂಬೈನ ದಿನೋಶಿ ಸೆಷನ್ಸ್ ನ್ಯಾಯಾಲಯವು ಟೀಂ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಅವರಿಗೆ 100 ರೂ. ದಂಡ ವಿಧಿಸಿದೆ. ಕೋಟಿಗಳ ಒಡೆಯನಾಗಿರುವ ಪೃಥ್ವಿ ಶಾಗೆ ನ್ಯಾಯಾಲಯ ಕೇವಲ 100 ರೂ.ಗಳನ್ನು ದಂಡವಾಗಿ ವಿಧಿಸಲು ಕಾರಣವೇನು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಅದಕ್ಕೆ ಉತ್ತರ, ಪೃಥ್ವಿ ಶಾ ಅವರ ನಿರ್ಲಕ್ಷತನ. ವಾಸ್ತವವಾಗಿ 2023 ರಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸಪ್ನಾ ಗಿಲ್ (Sapna Gill) ಹಾಗೂ ಪೃಥ್ವಿ ಶಾ ನಡುವೆ ಸೆಲ್ಫಿ ವಿಚಾರವಾಗಿ ನಡೆದಿದ್ದ ಗಲಾಟೆಯ ಘಟನೆ ನಿಮಗೆಲ್ಲ ನೆನಪಿರಬಹುದು. ಅದೇ ಘಟನೆಗೆ ಸಂಬಂಧಿಸಿದಂತೆ ಇದೀಗ ಪೃಥ್ವಿ ಅವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿರುವುದಲ್ಲದೆ ದಂಡವನ್ನು ಸಹ ವಿಧಿಸಿದೆ.
2023 ರಲ್ಲಿ ನಡೆದಿದ್ದ ಘಟನೆ
ಅಷ್ಟಕ್ಕೂ ಪೃಥ್ವಿ ಶಾ ಅವರಿಗೆ ನ್ಯಾಯಾಲಯ ದಂಡ ವಿಧಿಸಲು ಕಾರಣವೇನು ಎಂಬುದನ್ನು ನೋಡುವುದಾದರೆ.. ಮೇಲೆ ಹೇಳಿದಂತೆ 2023 ರಲ್ಲಿ ಮುಂಬೈನ ಅಂಧೇರಿಯಲ್ಲಿರುವ ಪಬ್‌ನಲ್ಲಿ ಸಪ್ನಾ ಗಿಲ್ ಮತ್ತು ಪೃಥ್ವಿ ಶಾ ನಡುವೆ ಸೆಲ್ಫಿ ವಿಚಾರವಾಗಿ ಜಗಳವಾಗಿತ್ತು. ಸಪ್ನಾ ಗಿಲ್ ಹಾಗೂ ಆಕೆಯ ಸ್ನೇಹಿತರು ಪೃಥ್ವಿ ಶಾ ಅವರಿಂದ ಸೆಲ್ಫಿ ತೆಗೆದುಕೊಳ್ಳಲು ಪದೇ ಪದೇ ಬೇಡಿಕೆ ಇಟ್ಟಿದ್ದರು. ಆರಂಭದಲ್ಲಿ ಶಾ ಫೋಟೋಗಳಿಗೆ ಪೋಸ್ ನೀಡಿದರು.
ಆದರೆ ಆ ಬಳಿಕ ಸೆಲ್ಫಿ ನೀಡಲು ನಿರಾಕರಿಸಿದ ಬಳಿಕ ಶಾ ತನ್ನ ಸ್ನೇಹಿತ ಆಶಿಶ್ ಯಾದವ್ ಜೊತೆ ಹೊರಗೆ ಬಂದಾಗ, ಸಪ್ನಾ ಗಿಲ್ ಹಾಗೂ ಆಕೆಯ ಸ್ನೇಹಿತರು ಬೇಸ್‌ಬಾಲ್ ಬ್ಯಾಟ್‌ನಿಂದ ದಾಳಿ ಮಾಡಿದ್ದರು ಎಂದು ಆರೋಪಿಸಿ ಪೃಥ್ವಿ ಶಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ಸಪ್ನಾ ಗಿಲ್ ಹಾಗೂ ಆಕೆಯ ಸ್ನೇಹಿತರು ನನ್ನನ್ನು ಹಿಂಬಾಲಿಸಿ 50,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದರು. ಆ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಫೆಬ್ರವರಿ 17 ರಂದು ಸಪ್ನಾ ಗಿಲ್ ಅವರನ್ನು ಬಂಧಿಸಿದರು, ಮೂರು ದಿನಗಳ ನಂತರ ಅವರಿಗೆ ಜಾಮೀನು ಸಿಕ್ಕಿತು.
ಪೃಥ್ವಿ ವಿರುದ್ಧ ಸಪ್ನಾ ಗಿಲ್ ಆರೋಪ
ಜಾಮೀನು ಸಿಕ್ಕ ಬಳಿಕ ಸಪ್ನಾ ಗಿಲ್ ಕೂಡ ಪೃಥ್ವಿ ಶಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ದಾಖಲಿಸಲು ಮುಂದಾದರು. ಆದರೆ ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎಫ್‌ಐಆರ್ ದಾಖಲಿಸಲಿಲ್ಲ, ಬದಲಿಗೆ ಪೊಲೀಸ್ ತನಿಖೆಗೆ ಮಾತ್ರ ಆದೇಶಿಸಿತು. ಇದರ ವಿರುದ್ಧ ಸಪ್ನಾ ಗಿಲ್ ಏಪ್ರಿಲ್ 2024 ರಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು.
ಇದಾದ ನಂತರ, ಸೆಷನ್ಸ್ ನ್ಯಾಯಾಲಯವು ಪೃಥ್ವಿ ಶಾ ಅವರಿಗೆ ಸಪ್ನಾ ಅವರ ಆರೋಪಗಳಿಗೆ ಉತ್ತರ ಸಲ್ಲಿಸುವಂತೆ ಹಲವಾರು ಬಾರಿ ಕೇಳಿತು, ಆದರೆ ಪೃಥ್ವಿ ಅದನ್ನು ಮುಂದೂಡುತ್ತಲೇ ಇದ್ದರು. ಇದೀಗ ಸೆಪ್ಟೆಂಬರ್ 9 ರಂದು ನಡೆದ ವಿಚಾರಣೆಯಲ್ಲೂ ಪೃಥ್ವಿ ಅವರಿಂದ ಉತ್ತರ ಬಂದಿಲ್ಲ ಎಂಬುದನ್ನು ತಿಳಿದು ಕೋಪಗೊಂಡ ನ್ಯಾಯಾಧೀಶರು ‘ಪೃಥ್ವಿಗೆ 100 ರೂ ದಂಡ ವಿಧಿಸುವುದರೊಂದಿಗೆ ಉತ್ತರ ನೀಡುವುದಕ್ಕೆ ಕೊನೆಯ ಅವಕಾಶ ನೀಡಿ ಎಚ್ಚರಿಕೆ ನೀಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 16 ಕ್ಕೆ ನಿಗದಿಪಡಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
