
ಇತ್ತೀಚೆಗೆ ಭಾರತದ ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಭಾರತದ ಮತ್ತೊಬ್ಬ ಸ್ಟಾರ್ ಆಟಗಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದೇಶೀ ಕ್ರಿಕೆಟ್‌ನಲ್ಲಿ 14 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದ ಪ್ರಿಯಾಂಕ್ ಪಾಂಚಾಲ್ (Priyank Panchal) ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ.
ಅನುಭವಿ ದೇಶೀಯ ಕ್ರಿಕೆಟಿಗ ಪ್ರಿಯಾಂಕ್ ಪಾಂಚಾಲ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಿಯಾಂಕ್ ಪಾಂಚಾಲ್ ದೇಶೀಯ ಕ್ರಿಕೆಟ್‌ನಲ್ಲಿ ಗುಜರಾತ್ ಪರ ಆಡುತ್ತಿದ್ದರು. ತಂಡದ ಪರ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ ಪ್ರಿಯಾಂಕ್, ಅನೇಕ ಸಂದರ್ಭಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಅವರ ತಂತ್ರ, ತಾಳ್ಮೆ ಮತ್ತು ಸ್ಥಿರತೆ ಅವರನ್ನು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ವಿಶ್ವಾಸಾರ್ಹ ಹೆಸರನ್ನಾಗಿ ಮಾಡಿತು. ಭಾರತ-ಎ ಪರ ಅದ್ಭುತ ಪ್ರದರ್ಶನ ನೀಡಿದ್ದ ಪ್ರಿಯಾಂಕ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಏನೋ ಸಿಕ್ಕಿತು. ಆದರೆ ಎಂದಿಗೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ.
ತಮ್ಮ ನಿವೃತ್ತಿಯ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಪಾಂಚಾಲ್, ‘ಬೆಳೆಯುತ್ತಿರುವಾಗ ಎಲ್ಲರೂ ತಮ್ಮ ತಂದೆಯನ್ನೇ ಆದರ್ಶವಾಗಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಕೂಡ ಇದರಿಂದ ಭಿನ್ನವಾಗಿರಲಿಲ್ಲ. ನಾನು ನನ್ನ ತಂದೆಯನ್ನು ಆರಾಧಿಸುತ್ತಾನೆ, ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ನನ್ನ ತಂದೆ ನನಗೆ ದೀರ್ಘಕಾಲೀನ ಶಕ್ತಿಯ ಮೂಲವಾಗಿದ್ದರು. ಅವರು ನನಗೆ ನೀಡಿದ ಶಕ್ತಿ, ನನ್ನ ಕನಸುಗಳನ್ನು ಅನುಸರಿಸಲು ಅವರು ನನ್ನನ್ನು ಪ್ರೋತ್ಸಾಹಿಸಿದ ರೀತಿ, ತುಲನಾತ್ಮಕವಾಗಿ ಸಣ್ಣ ಪಟ್ಟಣದಿಂದ ಎದ್ದು ಒಂದು ದಿನ ಭಾರತದ ಕ್ಯಾಪ್ ಧರಿಸಲು ಆಶಿಸುವ ಧೈರ್ಯವನ್ನು ಹೊಂದಲು ನಾನು ಪ್ರಭಾವಿತನಾಗಿದ್ದೆ. ಪ್ರಿಯಾಂಕ್ ಪಾಂಚಾಲ್ ಎಂಬ ನಾನು, ತಕ್ಷಣದಿಂದ ಜಾರಿಗೆ ಬರುವಂತೆ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
IPL 2025: ಮುಂಬೈ-ಪಂಜಾಬ್ ಪಂದ್ಯ ರದ್ದಾದರೆ ಯಾವೆರಡು ತಂಡಗಳಿಗೆ ಟಾಪ್ 2 ಸ್ಥಾನ?
ಪ್ರಿಯಾಂಕ್ ಪಾಂಚಾಲ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 127 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 45.18 ರ ಸರಾಸರಿಯಲ್ಲಿ 8856 ರನ್ ಕಲೆಹಾಕಿದ್ದರು. ಇದರಲ್ಲಿ 34 ಅರ್ಧಶತಕ ಮತ್ತು 29 ಶತಕಗಳು ಸೇರಿವೆ. ಬೌಲಿಂಗ್ನಲ್ಲೂ ಮಿಂಚಿರುವ ಪ್ರಿಯಾಂಕ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್ ಎ ನಲ್ಲಿ 97 ಪಂದ್ಯಗಳನ್ನಾಡಿರುವ ಪ್ರಿಯಾಂಕ್ 3672 ರನ್ ಮತ್ತು ಟಿ20 ಯಲ್ಲಿ 1522 ರನ್ ಗಳಿಸಿದ್ದಾರೆ. ಅಂದರೆ ಅವರು ತಮ್ಮ ದೇಶೀಯ ವೃತ್ತಿಜೀವನದಲ್ಲಿ 14000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 2021 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೀಂ ಇಂಡಿಯಾಗೆ ಆಯ್ಕೆಯಾದರು. ರೋಹಿತ್ ಶರ್ಮಾ ಗಾಯಗೊಂಡ ನಂತರ ಅವರನ್ನು ತಂಡಕ್ಕೆ ಸೇರಿಸಲಾಯಿತು. ಆದರೆ ಅವರಿಗೆ ಚೊಚ್ಚಲ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Mon, 26 May 25