PSL: ಒಬ್ಬ ಬೌಲರ್, 2 ಓವರ್, 54 ರನ್; ಕೇವಲ 24 ಗಂಟೆಯೊಳಗೆ ವೇಗದ ಶತಕದ ದಾಖಲೆ ಉಡೀಸ್
PSL 2023: ಎದುರಾಳಿ ತಂಡದ ಬೌಲರ್ ಕೈಸ್ ಅಹ್ಮದ್ ಅವರನ್ನು ಗುರಿಯಾಗಿಸಿಕೊಂಡ ಉಸ್ಮಾನ್ ಮೊದಲ ಓವರ್ನಲ್ಲಿ 27 ರನ್ ಬಾರಿಸಿದರೆ, ಈ ಬೌಲರ್ನ ಎರಡನೇ ಓವರ್ನಲ್ಲಿ ಮತ್ತೆ 27 ರನ್ ಚಚ್ಚಿದರು.
ಪಾಕಿಸ್ತಾನ್ ಸೂಪರ್ ಲೀಗ್ (Pakistan Super League) ಬೌಲರ್ಗಳ ಲೀಗ್ ಎಂದು ಹೇಳಿಕೊಳ್ಳುತ್ತ ಐಪಿಎಲ್ (IPL) ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದ ಪಾಕ್ ಮಾಜಿ ಆಟಗಾರರಿಗೆ ಮುಖಭಂಗ ಎದುರಾಗಿದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಈ ಬಾರಿ ಬ್ಯಾಟರ್ಗಳು ಅಬ್ಬರಿಸುತ್ತಿದ್ದಾರೆ. ವಿಶೇಷವಾಗಿ ರಾವಲ್ಪಿಂಡಿ ಮೈದಾನದಲ್ಲಿ (Rawalpindi ground) ಬ್ಯಾಟ್ಸ್‌ಮನ್‌ಗಳನ್ನು ಎದುರಿಸುತ್ತಿರುವ ಬೌಲರ್‌ಗಳಿಗೆ ಬೌಂಡರಿ, ಸಿಕ್ಸರ್‌ಗಳನ್ನು ಬಿಟ್ಟರೆ ವಿಕೆಟ್ ಬೀಳುವುದು ತೀರ ಕಡಿಮೆಯಾಗಿದೆ. ಇದೇ ಮೈದಾನದಲ್ಲಿ ಕಳೆದ ಕೆಲವು ದಿನಗಳಿಂದ ರನ್ ಮಳೆ ಸುರಿಯುತ್ತಿದ್ದು ಜೇಸನ್ ರಾಯ್, ಬಾಬರ್ ಅಜಮ್,(Jason Roy, Babar Azam) ರಿಲೆ ರುಸ್ಸೋ ಸೇರಿದಂತೆ ಹಲವು ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಇವರ ಪಟ್ಟಿಗೆ ಮತ್ತೊಬ್ಬ ಆಟಗಾರ ಉಸ್ಮಾನ್ ಖಾನ್ (Usman Khan) ಸೇರ್ಪಡೆಗೊಂಡಿದ್ದು, ಈ ಹಿಂದೆ ಈ ಟೂರ್ನಿಯಲ್ಲಿ ನಿರ್ಮಾಣಗೊಂಡಿದ್ದ ವಿಶ್ವ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಕಳೆದ ಶುಕ್ರವಾರ, ಅಂದರೆ ಮಾರ್ಚ್ 10 ರಂದು ಇದೇ ಪಿಎಸ್ಎಲ್ನಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡದ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಿಲೆ ರುಸ್ಸೊ ಕೇವಲ 41 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ತಮ್ಮದೇ ಆದ 43 ಎಸೆತಗಳ ಶತಕದ ದಾಖಲೆಯನ್ನು ಮುರಿದಿದ್ದರು. ಈ ದಾಖಲೆಯನ್ನು ಮುರಿಯಲು ರುಸ್ಸೊ ಬರೋಬ್ಬರಿ 3 ವರ್ಷಗಳನ್ನು ತೆಗೆದುಕೊಂಡಿದ್ದರು. ಆದಾಗ್ಯೂ, ಅವರ ಈ ಹೊಸ ದಾಖಲೆಯನ್ನು ಕೇವಲ 24 ಗಂಟೆಗಳಲ್ಲಿ ಅವರದೇ ತಂಡದ ಆಟಗಾರ ಉಸ್ಮಾನ್ ಖಾನ್ ಮುರಿದ್ದಾರೆ. 27ರ ಹರೆಯದ ಈ ಆರಂಭಿಕ ಆಟಗಾರ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
PSL: 515 ರನ್, 45 ಬೌಂಡರಿ, 33 ಸಿಕ್ಸರ್; ಟಿ20 ಕ್ರಿಕೆಟ್‌ನ ಎಲ್ಲಾ ದಾಖಲೆಗಳು ಉಡೀಸ್..!
36 ಎಸೆತಗಳಲ್ಲಿ ಇತಿಹಾಸ ಸೃಷ್ಟಿ
ಸುಮಾರು ಒಂದು ತಿಂಗಳ ಹಿಂದೆ ಪಿಎಸ್ಎಲ್ನಲ್ಲಿ ಏಕೈಕ ಪಂದ್ಯವನ್ನಾಡಿದ್ದ ಉಸ್ಮಾನ್, ಈಗ ಭರ್ಜರಿ ಶತಕದೊಂದಿಗೆ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿದ್ದಾರೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಉಸ್ಮಾನ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ನಂತರ ಮತ್ತಷ್ಟು ಅಬ್ಬರಿಸಿದ ಉಸ್ಮಾನ್, ಮುಂದಿನ 14 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಮೂಲಕ ಉಸ್ಮಾನ್ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿ ಪಿಎಸ್ಎಲ್ನಲ್ಲಿ ಅತಿ ವೇಗದ ಶತಕ ದಾಖಲಿಸಿದ ದಾಖಲೆ ಬರೆದರು.
ZORDAR, TEZ-RAFTAAR, DHUWAANDAAR ?? #HBLPSL8 | #SabSitarayHumaray | #QGvMS pic.twitter.com/qLqdW7Ww22
— PakistanSuperLeague (@thePSLt20) March 11, 2023
ಒಬ್ಬ ಬೌಲರ್, 2 ಓವರ್, 54 ರನ್
ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ 11 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಅಂದರೆ ಕೇವಲ ಬೌಂಡರಿಗಳಿಂದಲೇ ಉಸ್ಮಾನ್ 86 ರನ್ ಕಲೆಹಾಕಿದರು. ಅದರಲ್ಲೂ ಎದುರಾಳಿ ತಂಡದ ಬೌಲರ್ ಕೈಸ್ ಅಹ್ಮದ್ ಅವರನ್ನು ಗುರಿಯಾಗಿಸಿಕೊಂಡ ಉಸ್ಮಾನ್ ಮೊದಲ ಓವರ್ನಲ್ಲಿ 27 ರನ್ ಬಾರಿಸಿದರೆ, ಈ ಬೌಲರ್ನ ಎರಡನೇ ಓವರ್ನಲ್ಲಿ ಮತ್ತೆ 27 ರನ್ ಚಚ್ಚಿದರು. ಹೀಗಾಗಿ ಉಸ್ಮಾನ್ ಕೇವಲ 2 ಓವರ್‌ಗಳಲ್ಲಿಯೇ 54 ರನ್ ಕಲೆ ಹಾಕಿದರು.
ಉಸ್ಮಾನ್ ಅವರ ಈ ಸ್ಫೋಟಕ ಇನ್ನಿಂಗ್ಸ್ ಆಧಾರದ ಮೇಲೆ, ಮುಲ್ತಾನ್ ತಂಡ ಕೇವಲ 10 ಓವರ್‌ಗಳಲ್ಲಿ 156 ರನ್ ಗಳಿಸಿತು. ಅಂತಿಮವಾಗಿ, 11ನೇ ಓವರ್‌ನ ಮೊದಲ ಎಸೆತದಲ್ಲಿ ಉಸ್ಮಾನ್ ಸ್ಟಂಪ್ ಔಟ್ ಆಗುವ ಮೂಲಕ ತಮ್ಮ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಉಸ್ಮಾನ್ ತಮ್ಮ 43 ಎಸೆತಗಳ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಒಳಗೊಂಡಂತೆ 120 ರನ್ ಸಿಡಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Sun, 12 March 23