Punjab Floods: ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ; ಕೊಟ್ಟಿದ್ದು ಎಷ್ಟು ಹಣ?
Punjab Kings' Flood Relief: ಪಂಜಾಬ್‌ನಲ್ಲಿನ ಭೀಕರ ಪ್ರವಾಹದಿಂದಾಗಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಐಪಿಎಲ್ ತಂಡವಾದ ಪಂಜಾಬ್ ಕಿಂಗ್ಸ್ 34 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿ ಮತ್ತು ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಆರಂಭಿಸಿ ಸಹಾಯ ಮಾಡಿದೆ. ಈ ಹಣವನ್ನು ಪರಿಹಾರ ಕಾರ್ಯಾಚರಣೆಗಳು, ರಕ್ಷಣಾ ದೋಣಿಗಳು ಮತ್ತು ಪೀಡಿತರಿಗೆ ಅಗತ್ಯ ವಸ್ತುಗಳ ಒದಗಿಸಲು ಬಳಸಲಾಗುವುದು. ಪಂಜಾಬ್ ಕಿಂಗ್ಸ್ ತಮ್ಮ ಅಭಿಮಾನಿಗಳನ್ನು ಮತ್ತು ಸಾರ್ವಜನಿಕರನ್ನು ದೇಣಿಗೆ ನೀಡುವಂತೆ ಕರೆ ನೀಡಿದೆ.

ಉತ್ತರ ಭಾರತದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳು (Punjab floods) ತೀವ್ರ ಮಾನ್ಸೂನ್ ಹೊಡೆತಕ್ಕೆ ಸಾಕ್ಷಿಯಾಗಿವೆ. ಪಂಜಾಬ್‌ನಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ವಿವಿಧ ನದಿಗಳ ಪ್ರವಾಹದಿಂದಾಗಿ ಅನೇಕ ಗ್ರಾಮಗಳು ಮುಳುಗಿಹೋಗಿವೆ. ಹೀಗಾಗಿ ಪ್ರವಾಹದಿಂದ ತತ್ತರಿಸುವ ಪಂಜಾಬ್ ನಾಗರೀಕರ ನೆರವಿಗಾಗಿ ಮನವಿ ಮಾಡಲಾಗುತ್ತಿದೆ. ಅದರಂತೆ ಈಗ ಐಪಿಎಲ್ (IPL) ತಂಡ ಪಂಜಾಬ್ ಕಿಂಗ್ಸ್ (Punjab Kings) ಫ್ರಾಂಚೈಸಿ ಪಂಜಾಬ್ ರಾಜ್ಯಕ್ಕೆ ಸಹಾಯ ಹಸ್ತ ಚಾಚಿದೆ. ಪಂಜಾಬ್ ಕಿಂಗ್ಸ್ ಗುರುವಾರ ಹೇಳಿಕೆ ನೀಡಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಸುಮಾರು 34 ಲಕ್ಷ ರೂ.ಗಳ ಸಹಾಯವನ್ನು ಘೋಷಿಸಿದೆ. ಇದರೊಂದಿಗೆ, ಕ್ರೌಡ್ ಫಂಡಿಂಗ್ ಮೂಲಕ ಹಣವನ್ನು ಸಂಗ್ರಹಿಸುವ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ.
ಪಂಜಾಬ್ ಕಿಂಗ್ಸ್ ದೇಣಿಗೆ
ಪಂಜಾಬ್ ಕಿಂಗ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿ, ‘ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಪ್ರಸಿದ್ಧ ಹೇಮಕುಂಡ್ ಫೌಂಡೇಶನ್ ಮತ್ತು ಆರ್‌ಟಿಐ ಜೊತೆ ಕೈಜೋಡಿಸುತ್ತಿದ್ದೇವೆ. ಸಾಧ್ಯವಾದಷ್ಟು ಪರಿಹಾರ ಕಾರ್ಯಗಳನ್ನು ವಿಸ್ತರಿಸಲು, ಈ ಎರಡೂ ಸಂಸ್ಥೆಗಳ ಸಹಯೋಗದೊಂದಿಗೆ ‘ಟುಗೆದರ್ ಫಾರ್ ಪಂಜಾಬ್’ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ, ಪಂಜಾಬ್ ಕಿಂಗ್ಸ್ ಸ್ವತಃ ಈ ಸಂಸ್ಥೆಗಳಿಗೆ 33.8 ಲಕ್ಷ ರೂ.ಗಳನ್ನು ದೇಣಿಗೆ ನೀಡುತ್ತಿದೆ ಎಂದು ತಿಳಿಸಿದೆ.
Together for Punjab! ♥️#PunjabKings pic.twitter.com/yb0ZwtC9DF
— Punjab Kings (@PunjabKingsIPL) September 4, 2025
ಪಂಜಾಬ್‌ನ ಅನೇಕ ಹಳ್ಳಿಗಳು ಮತ್ತು ನಗರಗಳಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಂತ್ರಸ್ತರು ತಮ್ಮ ಜಾನುವಾರುಗಳನ್ನು ಮತ್ತು ಕುಟುಂಬಗಳನ್ನು ಪ್ರವಾಹದಿಂದ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಾವಿರಾರು ಎಕರೆ ಕೃಷಿಭೂಮಿ ಕೂಡ ಪ್ರವಾಹದಿಂದ ಸರ್ವನಾಶವಾಗಿದೆ. ಅಂತಹ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ನಿಧಿಯ ಮೂಲಕ ರಕ್ಷಣಾ ದೋಣಿಗಳನ್ನು ಖರೀದಿಸಲಾಗುವುದು ಎಂದು ಫ್ರಾಂಚೈಸ್ ಹೇಳಿದೆ. ಅಲ್ಲದೆ ಈ ದೋಣಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಬಳಸಲಾಗುತ್ತದೆ. ಇದರ ಜೊತೆಗೆ, ಈ ನಿಧಿಯನ್ನು ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳು ಮತ್ತು ಶುದ್ಧ ನೀರನ್ನು ಒದಗಿಸಲು ಬಳಸಲಾಗುತ್ತದೆ.
ಪಂಜಾಬ್ ಭೀಕರ ಪ್ರವಾಹ: ಜನರ ರಕ್ಷಿಸಿದ ಕೆಲವೇ ಕ್ಷಣಗಳಲ್ಲಿ ಕೊಚ್ಚಿ ಹೋದ ಕಟ್ಟಡ, ಭೀಕರ ವಿಡಿಯೋ ಇಲ್ಲಿದೆ
ಕ್ರೌಡ್ ಫಂಡಿಂಗ್‌ನಿಂದಲ್ಲೂ ಸಹಾಯ
ಇದಲ್ಲದೆ, ಪಂಜಾಬ್ ಕಿಂಗ್ಸ್ ಆನ್‌ಲೈನ್ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಸಹ ಪ್ರಾರಂಭಿಸಿದೆ, ಇದರ ಮೂಲಕ ಫ್ರಾಂಚೈಸಿ ಸೆಪ್ಟೆಂಬರ್ 15 ರೊಳಗೆ 2 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ನಿಧಿಯನ್ನು ‘ಗ್ಲೋಬಲ್ ಸಿಖ್ ಚಾರಿಟಿ’ಗೆ ನೀಡಲಾಗುವುದು ಎಂದು ಫ್ರಾಂಚೈಸಿ ತಿಳಿಸಿದೆ. ಅಲ್ಲದೆ ಈ ವಿಪತ್ತಿನ ಪರಿಸ್ಥಿತಿಯಲ್ಲಿ ರಾಜ್ಯದ ಜನರಿಗೆ ಗರಿಷ್ಠ ಸಹಾಯವನ್ನು ಒದಗಿಸಲು ಪಂಜಾಬ್ ಕಿಂಗ್ಸ್ ತನ್ನ ಅಭಿಮಾನಿಗಳು ಮತ್ತು ಸಾಮಾನ್ಯ ಜನರು ಈ ಆನ್‌ಲೈನ್ ನಿಧಿಯಲ್ಲಿ ದೇಣಿಗೆ ನೀಡುವಂತೆ ಮನವಿ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
