IPL 2025: 18 ಆವೃತ್ತಿಗಳಲ್ಲಿ 17 ನಾಯಕರ ಬದಲಾವಣೆ; ಶ್ರೇಯಸ್ ಅಯ್ಯರ್ ನಾಯಕತ್ವ ಎಷ್ಟು ದಿನ?
Shreyas Iyer's Punjab Kings Captaincy: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2025 ರ ಸೀಸನ್‌ಗಾಗಿ ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಇದೀಗ ಅವರನ್ನು ತಂಡದ ನಾಯಕರಾಗಿ ನೇಮಿಸಿದೆ. ಆದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದ ಇತಿಹಾಸವನ್ನು ಗಮನಿಸಿದರೆ, ಯಾವುದೇ ನಾಯಕನು ದೀರ್ಘಕಾಲ ಉಳಿಯಲಿಲ್ಲ. ಹೀಗಾಗಿ, ಶ್ರೇಯಸ್ ಅಯ್ಯರ್ ಎಷ್ಟು ಕಾಲ ನಾಯಕರಾಗಿ ಉಳಿಯುತ್ತಾರೆ ಎಂಬುದು ಕುತೂಹಲಕಾರಿ.
ಚೊಚ್ಚಲ ಐಪಿಎಲ್ ಪ್ರಶಸ್ತಿಯ ಹುಡುಕಾಟದಲ್ಲಿರುವ ಪಂಜಾಬ್ ಕಿಂಗ್ಸ್ 18ನೇ ಆವೃತ್ತಿಯ ಐಪಿಎಲ್ಗೆ ತಯಾರಿ ಆರಂಭಿಸಿದ್ದು, ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಿದೆ. ಮೆಗಾ ಹರಾಜಿನಲ್ಲಿ ಬರೋಬ್ಬರಿ 26.75 ಕೋಟಿ ರೂ.ಗಳಿಗೆ ತಂಡ ಸೇರಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಶ್ರೇಯಸ್ ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರಾಗಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಹೀಗಾಗಿ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಪಂಜಾಬ್ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದೆ.
ಶ್ರೇಯಸ್ ಅವಧಿ ಎಷ್ಟು ದಿನ?
ಆದರೆ ಈಗ ಪ್ರಶ್ನೆಯೆಂದರೆ ದಾಖಲೆ ಮೊತ್ತ ಪಡೆದು ಪಂಜಾಬ್ ತಂಡವನ್ನು ಸೇರಿಕೊಂಡಿರುವ ಶ್ರೇಯಸ್ ಅಯ್ಯರ್ ಎಷ್ಟು ದಿನ ಈ ತಂಡದಲ್ಲಿ ನಾಯಕನಾಗಿ ಉಳಿಯುತ್ತಾರೆ ಎಂಬುದು. ಏಕೆಂದರೆ ಮೊದಲ ಆವೃತ್ತಿಯಿಂದಲೂ ಐಪಿಎಲ್ನಲ್ಲಿ ಆಡುತ್ತಿರುವ ಪಂಜಾಬ್ ತಂಡ ಒಂದೊಂದು ಆವೃತ್ತಿಗೂ ನಾಯಕರನ್ನು ಬದಲಿಸುವ ಸಂಸ್ಕೃತಿಯನ್ನು ನಡೆಸುಕೊಂಡು ಬರುತ್ತಿದೆ. ಒಂದು ವೇಳೆ ಅಯ್ಯರ್ ಅವರ ನಾಯಕತ್ವದಲ್ಲೂ ಪಂಜಾಬ್ ತಂಡದ ಪ್ರದರ್ಶನ ಉತ್ತಮವಾಗಲಿಲ್ಲ ಎಂದರೆ ಅವರ ನಾಯಕತ್ವಕ್ಕೂ ಕುತ್ತು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಧಿಕ ನಾಯಕರ ಬದಲಾವಣೆ
ಪಂಜಾಬ್ ತಂಡದ ನಾಯಕತ್ವ ಬದಲಾವಣೆಯ ಇತಿಹಾಸವನ್ನು ಕೆದುಕುತ್ತಾ ಹೋದರೆ, ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಈ ತಂಡದ ನಾಯಕತ್ವವನ್ನು ಯಾರಿಗೂ ವಹಿಸಲು ಸಾಧ್ಯವಾಗಲಿಲ್ಲ. ಐಪಿಎಲ್ನ ಮೊದಲ ಸೀಸನ್ನಲ್ಲಿ ಯುವರಾಜ್ ಸಿಂಗ್ ಪಂಜಾಬ್ ತಂಡದ ನಾಯಕರಾದರು, ಆದರೆ 2010 ರ ಸೀಸನ್ಗೂ ಮೊದಲು ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. 2010ರಲ್ಲಿ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ತಂಡದ ನಾಯಕರಾಗಿದ್ದರು. ಆಡಮ್ ಗಿಲ್‌ಕ್ರಿಸ್ಟ್ ಮಾತ್ರ ಪಂಜಾಬ್ ತಂಡವನ್ನು ಅತಿ ಹೆಚ್ಚು ಕಾಲ ಕಮಾಂಡರ್ ಮಾಡಿದ್ದು, ಅವರು 2011-2013ರ ಅವಧಿಯಲ್ಲಿ ಪಂಜಾಬ್ ತಂಡದ ನಾಯಕರಾಗಿದ್ದರು. ಇದೀಗ ಅಧಿಕ ಬೆಲೆ ಪಡೆದು ಪಂಜಾಬ್ ತಂಡವನ್ನು ಮುನ್ನಡೆಸುವ ಜವಬ್ದಾರಿ ಹೊತ್ತಿರುವ ಶ್ರೇಯಸ್ ಅಯ್ಯರ್ ಹೇಗೆ ತಂಡವನ್ನು ಮುನ್ನಡೆಸುತ್ತಾರೆ? ಇದರ ಜೊತೆಗೆ ತಮ್ಮ ನಾಯಕತ್ವವನ್ನು ಎಷ್ಟು ದಿನ ಉಳಿಸಿಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕರ ಪಟ್ಟಿ
- ಯುವರಾಜ್ ಸಿಂಗ್ (2008-2009)
- ಕುಮಾರ ಸಂಗಕ್ಕಾರ (2010-2010)
- ಮಹೇಲಾ ಜಯವರ್ಧನೆ (2010-2010)
- ಆಡಂ ಗಿಲ್‌ಕ್ರಿಸ್ಟ್ (2011-2013)
- ಮೈಕಲ್ ಹಸ್ಸಿ (2012-2013)
- ಜಾರ್ಜ್ ಬೈಲಿ (2014-2015)
- ವಿರೇಂದ್ರ ಸೆಹ್ವಾಗ್ (2015 )
- ಡೇವಿಡ್ ಮಿಲ್ಲರ್ (2016)
- ಮುರುಳಿ ವಿಜಯ್ (2016)
- ಗ್ಲೆನ್ ಮ್ಯಾಕ್ಸ್‌ವೆಲ್ (2017)
- ಆರ್ ಅಶ್ವಿನ್ (2018-2019)
- ಕೆಎಲ್ ರಾಹುಲ್ (2020-2021)
- ಮಯಾಂಕ್ ಅಗರ್ವಾಲ್ (2021-2022)
- ಶಿಖರ್ ಧವನ್ (2022-2024)
- ಸ್ಯಾಮ್ ಕರನ್ (2023-2024)
- ಜಿತೇಶ್ ಶರ್ಮಾ (2024)
- ಶ್ರೇಯಸ್ ಅಯ್ಯರ್ (2025)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ