Asia Cup 2025: ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಸೇರಿದ ಶಾಸಕರ ಅಳಿಯ
Asia Cup 2025: ಭಾರತ ಕ್ರಿಕೆಟ್ ತಂಡದ ಏಷ್ಯಾಕಪ್ 2025 ಅಭಿಯಾನಕ್ಕಾಗಿ ಪಿವಿಆರ್ ಪ್ರಶಾಂತ್ ಅವರನ್ನು ಹೊಸ ಮ್ಯಾನೇಜರ್ ಆಗಿ ನೇಮಿಸಲಾಗಿದೆ. ಅವರು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿದ್ದರು. ತಂಡವು ಸೆಪ್ಟೆಂಬರ್ 4 ರಂದು ಯುಎಇಗೆ ಪ್ರಯಾಣಿಸಲಿದೆ ಮತ್ತು ಸೆಪ್ಟೆಂಬರ್ 10 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.

2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿದ್ದು, ಭಾರತ ತಂಡ ಸೆಪ್ಟೆಂಬರ್ 10 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಸೂರ್ಯಕುಮಾರ್ ಪಡೆ ಸೆಪ್ಟೆಂಬರ್ 4 ರಂದು ಪ್ರಯಾಣ ಬೆಳೆಸಲಿದೆ. ಇಡೀ ತಂಡ ಯುಎಇಗೆ ತೆರಳುವ ಮೊದಲು, ತಂಡಕ್ಕೆ ಮತ್ತೊಬ್ಬ ಹೊಸ ಸದಸ್ಯರನ್ನು ಸೇರಿಸಲಾಗಿದ್ದು, ಅವರು ಏಷ್ಯಾಕಪ್‌ನಲ್ಲಿ ತಂಡದಲ್ಲಿ ದೊಡ್ಡ ಪಾತ್ರ ವಹಿಸಲಿದ್ದಾರೆ. ವಾಸ್ತವವಾಗಿ ಬಿಸಿಸಿಐ, ಏಷ್ಯಾಕಪ್‌ಗಾಗಿ ಭಾರತ ತಂಡಕ್ಕೆ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿದ್ದ ಪಿವಿಆರ್ ಪ್ರಶಾಂತ್ ಅವರನ್ನು ನೂತನ ಮ್ಯಾನೇಜರ್ ಆಗಿ ನೇಮಿಸಿದೆ.
ಪಿವಿಆರ್ ಪ್ರಶಾಂತ್ ಯಾರು?
ಟೀಂ ಇಂಡಿಯಾದ ಹೊಸ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಪಿವಿಆರ್ ಪ್ರಶಾಂತ್ ಬಗ್ಗೆ ಕುತೂಹಲಕಾರಿ ವಿಷಯವೆಂದರೆ ಅವರು ಶಾಸಕರ ಕುಟುಂಬಕ್ಕೆ ಸೇರಿದವರು. ಅವರ ತಂದೆ ಶಾಸಕರಾಗಿದ್ದು, ಅವರ ಮಾವ ಕೂಡ ಶಾಸಕರಾಗಿದ್ದಾರೆ. ಪ್ರಶಾಂತ್ ಅವರ ತಂದೆ ಪುಲ್ಪರ್ತಿ ರಾಮಾಂಜನೇಯುಲು ಅವರು 2009 ರಿಂದ 2014 ರವರೆಗೆ ಶಾಸಕರಾಗಿದ್ದರು. ಆ ಬಳಿಕ ಅವರು ಮಾರ್ಚ್ 2024 ರಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವನ್ನು ಸೇರಿದರು. ಇತ್ತ ಪ್ರಶಾಂತ್ ಅವರ ಮಾವ ಜಿ. ಶ್ರೀನಿವಾಸ್ ರಾವ್ ಅವರು ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ನಾಯಕರಾಗಿದ್ದು, 2024 ರಲ್ಲಿ ಭೀಮ್ಲಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರೂ ಆಗಿದ್ದಾರೆ.
ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಉಪಾಧ್ಯಕ್ಷ
ಪಿವಿಆರ್ ಪ್ರಶಾಂತ್ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಓಲ್ಡ್ ವೆಸ್ಟ್ ಗೋದಾವರಿ ತಂಡದಿಂದ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದು, ಈ ಹಿಂದೆ ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
Asia Cup 2025: ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಬದಲಾವಣೆ; ತಡವಾಗಿ ಆರಂಭವಾಗಲಿವೆ ಪಂದ್ಯಗಳು
ಮ್ಯಾನೇಜರ್ ಕೆಲಸವೇನು?
ತಂಡದ ನೂತನ ಮ್ಯಾನೇಜರ್ ಆಗಿ ಆಯ್ಕೆಯಾಗಿರುವ ಪ್ರಶಾಂತ್ ಅವರು ಏಷ್ಯಾ ಕಪ್ ಸಮಯದಲ್ಲಿ ಆಟಗಾರರ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳುತ್ತಾರೆ. ಅಲ್ಲದೆ ಅವರು ಬಿಸಿಸಿಐ ಮತ್ತು ತಂಡದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಏಷ್ಯಾಕಪ್‌ನಲ್ಲಿ ಭಾರತ ತಂಡದ ಅಭಿಯಾನ ಸೆಪ್ಟೆಂಬರ್ 10 ರಿಂದ ಆರಂಭವಾಗುತ್ತಿದೆ. ಯುಎಇ ವಿರುದ್ಧ ಮೊದಲ ಪಂದ್ಯವನ್ನು ಆಡಿದ ನಂತರ, ಭಾರತ ತಂಡ ಸೆಪ್ಟೆಂಬರ್ 14 ರಂದು ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Wed, 3 September 25
