LSG vs DC: ಸಿಕ್ಸ್​ ಸಿಡಿಸಿ ಲಖನೌಗೆ ರೋಚಕ ಜಯ ತಂದುಕೊಟ್ಟ ಜೂನಿಯರ್ ಎಬಿಡಿ ಬದೋನಿ

| Updated By: Vinay Bhat

Updated on: Apr 08, 2022 | 7:39 AM

Quinton de Kock: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೇ ಓವರ್ ವರೆಗೂ ನಡೆದ ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಜೂನಿಯನ್ ಎಬಿಡಿ ಎಂದೇ ಖ್ಯಾತಿ ಪಡೆದಿರುವ ಆಯುಷ್ ಬದೋನಿ 20ನೇ ಓವರ್​​ನಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದಿಟ್ಟರು.

LSG vs DC: ಸಿಕ್ಸ್​ ಸಿಡಿಸಿ ಲಖನೌಗೆ ರೋಚಕ ಜಯ ತಂದುಕೊಟ್ಟ ಜೂನಿಯರ್ ಎಬಿಡಿ ಬದೋನಿ
Quinton de Kock and Ayush Badoni
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುರುವಾರ ನಡೆದ 15ನೇ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (LSG vs DC) ತಂಡ ಭರ್ಜರಿ ಗೆಲುವು ಸಾಧಿಸಿತು. ಕೊನೇ ಓವರ್ ವರೆಗೂ ನಡೆದ ರೋಚಕ ಪಂದ್ಯದಲ್ಲಿ ಎಲ್​ಎಸ್​​ಜಿ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಜೂನಿಯನ್ ಎಬಿಡಿ ಎಂದೇ ಖ್ಯಾತಿ ಪಡೆದಿರುವ ಆಯುಷ್ ಬದೋನಿ (Ayush Badoni) 20ನೇ ಓವರ್​​ನ 4ನೇ ಎಸೆತದಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದಿಟ್ಟರು. ಕ್ವಿಂಟನ್ ಡಿಕಾಕ್ (Quinton de Kock) ಕೂಡ 52 ಎಸೆತಗಳಲ್ಲಿ 80 ರನ್ ಚಚ್ಚಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಈ ಜಯದೊಂದಿಗೆ ಲಖನೌ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು 6 ಅಂಕ ಸಂಪಾದಿಸಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನೌ ತಂಡ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಪೃಥ್ವಿ ಶಾ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಗೌರವಯುತ ಮೊತ್ತ ಕಲೆಹಾಕಿತ್ತು. ಲಖನೌ ತಂಡದ ಬೌಲರ್‌ಗಳ ಶಿಸ್ತಿನ ದಾಳಿಯಲ್ಲಿ ವಿಕೆಟ್‌ಗಳನ್ನು ರಕ್ಷಿಸಿಕೊಳ್ಳಲು ಡೆಲ್ಲಿ ಬ್ಯಾಟರ್‌ಗಳು ಅಬ್ಬರದ ಆಟದ ಬದಲು ಎಚ್ಚರಿಕೆಯಿಂದ ಆಡಿದರು. ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಉತ್ತಮ ಅಡಿಪಾಯ ಹಾಕಿದರು. ಆದರೆ, ಇದರಲ್ಲಿ ಪೃಥ್ವಿ(61; 34ಎ) ಅವರದ್ದೇ ಸಿಂಹಪಾಲು. ತಂಡವು ಅವರಿಂದಾಗಿ ಏಳು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 60 ರನ್‌ಗಳ ಗಡಿ ಮುಟ್ಟಿತು. ಇನ್ನೊಂದು ಬದಿಯಲ್ಲಿದ್ದ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ವಾರ್ನರ್ 12 ಎಸೆತಗಳನ್ನು ಆಡಿ ನಾಲ್ಕು ರನ್ ಮಾತ್ರ ಗಳಿಸಿದರು.

ವಾರ್ನರ್-ಶಾ ವಿಕೆಟ್ ಉರುಳಿದ ಬಳಿಕ ಕೂಡ ಡೆಲ್ಲಿ ತನ್ನ ನಿಧಾನಗತಿಯ ಆಟವನ್ನೇ ಮುಂದುವರೆಸಿತು. ನಾಯಕ ರಿಷಭ್ ಪಂತ್ (ಔಟಾಗದೆ 39; 36ಎ) ಮತ್ತು ಸರ್ಫರಾಜ್ ಖಾನ್ (ಔಟಾಗದೆ 36; 28ಎ) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 73 ರನ್‌ಗಳನ್ನು ಸೇರಿಸಿದರು. ಗೌತಮ್ ನಾಲ್ಕು ಓವರ್‌ಗಳಲ್ಲಿ 23 ರನ್ ಮತ್ತು ರವಿ 22 ರನ್‌ಗಳನ್ನು ಮಾತ್ರ ಕೊಟ್ಟರು. ಆವೇಶ್ ಖಾನ್ ಮೂರು ಓವರ್‌ಗಳಲ್ಲಿ 31 ರನ್ ಕೊಟ್ಟು ತುಟ್ಟಿಯಾದರು. ಪರಿಣಾಮ ಡೆಲ್ಲಿ 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್​ಗಳನ್ನಷ್ಟೆ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಲಖನೌ ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿತು. ನಾಯಕ ಕೆಎಲ್‌. ರಾಹುಲ್‌-ಕ್ವಿಂಟನ್‌ ಡಿ ಕಾಕ್‌ 8.4 ಓವರ್‌ಗಳಿಂದ ಮೊದಲ ವಿಕೆಟಿಗೆ 73 ರನ್‌ ಪೇರಿಸಿದರು. ಕೆಲವು ಓವರ್‌ ಬಾಕಿ ಇರುವಾಗಲೇ ಲಕ್ನೋ ಗೆದ್ದು ಬರಲಿದೆ ಎಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಡೆಲ್ಲಿ ಬೌಲರ್ ಕೂಡ ಬಿಗಿ ದಾಳಿ ಸಂಘಟಿಸತೊಡಗಿದರು. ಹೀಗಾಗಿ ಪಂದ್ಯ ಕೊನೆಯ ಓವರ್‌ ತನಕ ಸಾಗಿತು. ಕ್ವಿಂಟನ್‌ ಡಿ ಕಾಕ್‌ 80 ರನ್‌ ಬಾರಿಸಿ ಲಕ್ನೋ ದಾರಿಯನ್ನು ಸುಗಮಗೊಳಿಸಿದರು (52 ಎಸೆತ, 9 ಫೋರ್‌, 2 ಸಿಕ್ಸರ್‌). ರಾಹುಲ್‌ 24 ರನ್‌ ಮಾಡಿದರು.

ಅಂತಿಮ ಓವರ್‌ನಲ್ಲಿ ಲಖನೌಗೆ ಗೆಲ್ಲಲು 5 ರನ್‌ ಅಗತ್ಯವಿತ್ತು. ಠಾಕೂರ್‌ ಅವರ ಮೊದಲ ಎಸೆತದಲ್ಲೇ ಹೂಡಾ ಔಟಾದರು. ಕೊನೆಯಲ್ಲಿ ಈ ವರ್ಷದ ಐಪಿಎಲ್‌ ತಾರೆ ಆಯುಷ್‌ ಬದೋನಿ ಸತತ ಬೌಂಡರಿ, ಸಿಕ್ಸರ್‌ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದಿಟ್ಟರು. ಇದರಿಂದ ಲಖನೌ 19.4 ಓವರ್​ನಲ್ಲಿ 4 ವಿಕಟ್ ನಷ್ಟಕ್ಕೆ 155 ರನ್ ಸಿಡಿಸಿ 6 ವಿಕೆಟ್​​​ಗಳ ಜಯ ಸಾಧಿಸಿತು. ಡೆಲ್ಲಿ ಪರ ಕುಲ್ದೀಪ್ ಯಾದವ್ ದುಬಾರಿಯಾದರೂ 2 ವಿಕೆಟ್ ಪಡೆದರು.

IPL 2022: ಸೆಹ್ವಾಗ್ ಪಾಲಿಗೆ ಬಿಸಿಯಾದ ವಡ ಪಾವ್: ರೋಹಿತ್ ಶರ್ಮಾ ಫ್ಯಾನ್ಸ್ ಆಕ್ರೋಶ