ಅಕ್ಟೋಬರ್ 11 ರಿಂದ ಶುರುವಾಗಲಿರುವ ರಣಜಿ ಟ್ರೋಫಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಂಭವನೀಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. 37 ಸದಸ್ಯರನ್ನು ಒಳಗೊಂಡಿರುವ ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ದ್ರಾವಿಡ್ ಕೂಡ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ಕೃಷ್ಣಪ್ಪ ಗೌತಮ್, ರೋನಿತ್ ಮೋರೆ ಸೇರಿದಂತೆ ಕೆಲ ಅನುಭವಿ ಆಟಗಾರರು ರಣಜಿ ತಂಡದ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಹಾಗೆಯೇ ಈ ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ವೈಶಾಖ್ ವಿಜಯಕುಮಾರ್, ಶ್ರೇಯಸ್ ಗೋಪಾಲ್ ಸೇರಿದಂತೆ ಹಲವು ಅನುಭವಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಬಿಸಿಸಿಐ ವಯೋಮಿತಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಮಿತ್ ದ್ರಾವಿಡ್, ಸಮರ್ಥ್ ನಾಗರಾಜ್, ಸ್ಮರಣ್ ಆರ್, ಕೃತಿಕ್ ಕೃಷ್ಣ, ಜಾಸ್ಪರ್ ಇ.ಜೆ ಸೇರಿದಂತೆ ಹಲವು ಯುವ ಆಟಗಾರರಿಗೆ ಈ ಬಾರಿ ಮಣೆ ಹಾಕಲಾಗಿದೆ.
ಇನ್ನು ಸಂಭವನೀಯ ತಂಡದಲ್ಲಿ ವಿಕೆಟ್ ಕೀಪರ್ಗಳಾಗಿ ನಾಲ್ವರು ಕಾಣಿಸಿಕೊಂಡಿದ್ದಾರೆ. ಅವರೆಂದರೆ ಲವ್ನೀತ್ ಸಿಸೋಡಿಯಾ, ಶ್ರೀಜಿತ್ ಕೆಎಲ್, ಸುಜಯ್ ಎಸ್ ಹಾಗೂ ಕೃತಿಕ್ ಕೃಷ್ಣ. ಈ ನಾಲ್ವರಲ್ಲಿ ಇಬ್ಬರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಬಹುದು.
ಸಂಭವನೀಯ ತಂಡದಲ್ಲಿ ಒಟ್ಟು 37 ಆಟಗಾರರ ಹೆಸರಿದ್ದರೂ, ಇವರಲ್ಲಿ ಕೇವಲ 15 ಆಟಗಾರರು ಮಾತ್ರ ರಣಜಿ ಟೂರ್ನಿಗೆ ಆಯ್ಕೆಯಾಗಲಿದ್ದಾರೆ. ಈ ಬಾರಿ ಕಿರಿಯ ಆಟಗಾರರಿಗೆ ಹೆಚ್ಚಿನ ಮಣೆ ಹಾಕಿರುವುದರಿಂದ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡ ಕರ್ನಾಟಕ ತಂಡವನ್ನು ನಿರೀಕ್ಷಿಸಬಹುದು. ಅದರಂತೆ ಈ ಬಾರಿ ಕರ್ನಾಟಕ ಪರ ರಣಜಿ ಆಡಲಿರುವ ಆಟಗಾರರು ಯಾರೆಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
ರಣಜಿ ಟೂರ್ನಿಗೆ 15 ಸದಸ್ಯರು ಆಯ್ಕೆಯಾದರೂ, ಸಂಭವನೀಯ ಆಟಗಾರರ ಪಟ್ಟಿಯಿಂದ ಕೆಲ ಆಟಗಾರರಿಗೆ ಮತ್ತೆ ಅವಕಾಶ ಸಿಗಬಹುದು. ಅಂದರೆ ಟೂರ್ನಿಯ ವೇಳೆ ಯಾವುದಾದರು ಆಟಗಾರರು ಗಾಯಗೊಂಡರೆ ಅಥವಾ ಇನ್ನಿತರ ಕಾರಣಗಳಿಂದ ಹೊರಗುಳಿದರೆ ಸಂಭವನೀಯ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಆಟಗಾರರನ್ನೇ ಬದಲಿಯಾಗಿ ಆಯ್ಕೆ ಮಾಡಲಿದ್ದಾರೆ.
ಇದನ್ನೂ ಓದಿ: IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!
ಕರ್ನಾಟಕ ರಣಜಿ ತಂಡದ ಸಂಭವನೀಯ ಆಟಗಾರರ ಪಟ್ಟಿ: ಮಯಾಂಕ್ ಅಗರ್‌ವಾಲ್, ಕೆ.ಎಲ್ ರಾಹುಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯ್‌ಕುಮಾರ್, ನಿಕಿನ್ ಜೋಸ್, ಸ್ಮರಣ್ ಆರ್, ಕಿಶನ್ ಬೆಡಾರೆ, ಅನೀಶ್ ಕೆ.ವಿ, ಶರತ್ ಶ್ರೀನಿವಾಸ್, ಸುಜಯ್ ಸತೇರಿ, ಕೃತಿಕ್ ಕೃಷ್ಣ, ವಾಸುಕಿ ಕೌಶಿಕ್, ಅಭಿಲಾಷ್ ಶೆಟ್ಟಿ, ವೆಂಕಟೇಶ್ ಎಂ, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಶುಭಾಂಗ್ ಹೆಗಡೆ, ರೋಹಿತ್ ಕುಮಾರ್, ಧೀರಜ್ ಗೌಡ, ಮೊಹ್ಸಿನ್ ಖಾನ್, ಶಶಿಕುಮಾರ್ ಕೆ, ಅಧೋಕ್ಷ್ ಹೆಗ್ಡೆ, ಶಿಖರ್ ಶೆಟ್ಟಿ, ಯಶೋವರ್ಧನ್, ವಿಶಾಲ್ ಓನತ್, ಜಾಸ್ಪರ್ ಇ.ಜೆ, ಸಮಿತ್ ದ್ರಾವಿಡ್, ಕಾರ್ತಿಕೇಯ ಕೆ.ಪಿ, ಸಮರ್ಥ್ ನಾಗರಾಜ್, ಲವ್ನೀತ್ ಸಿಸೋಡಿಯಾ, ಚೇತನ್ ಎಲ್.ಆರ್, ಅಭಿನವ್ ಮನೋಹರ್, ಧನುಷ್ ಗೌಡ.
Published On - 8:28 am, Wed, 18 September 24