Ranji Trophy 2024: ಕುತೂಹಲಘಟ್ಟದಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
Ranji Trophy 2024: ರಣಜಿ ಟ್ರೋಫಿಯ ಫೈನಲ್ ಪಂದ್ಯವು ಐದನೇ ದಿನದಾಟದತ್ತ ಸಾಗಿದೆ. ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ವಿದರ್ಭ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡಿದೆ. ಈ ಗುರಿಯನ್ನು ಬೆನ್ನತ್ತಿರುವ ವಿದರ್ಭ ತಂಡಕ್ಕೆ ಗೆಲ್ಲಲು ಕೊನೆಯ ದಿನದಾಟದಲ್ಲಿ 290 ರನ್ಗಳ ಅವಶ್ಯಕತೆಯಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಮತ್ತು ವಿದರ್ಭ ನಡುವಣ ರಣಜಿ ಟ್ರೋಫಿ (Ranji Trophy 2024) ಫೈನಲ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈಗಾಗಲೇ 4 ದಿನದಾಟಗಳು ಮುಗಿದಿದ್ದು, ಪಂದ್ಯದ ಮೇಲೆ ಉಭಯ ತಂಡಗಳು ಕೂಡ ಹಿಡಿತ ಸಾಧಿಸಿದೆ. ಹೀಗಾಗಿ ಐದನೇ ದಿನದಾಟದಲ್ಲಿ ಫಲಿತಾಂಶ ಯಾರ ಪರ ವಾಲಲಿದೆ ಎಂಬುದೇ ಈಗ ಕುತೂಹಲ.
ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಮೊದಲ ಇನಿಂಗ್ಸ್ನಲ್ಲಿ 224 ರನ್ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ವಿದರ್ಭ ತಂಡವು ಕೇವಲ 105 ರನ್ಗಳಿಗೆ ಸರ್ವಪತನ ಕಂಡಿತು. ಮುಂಬೈ ಪರ ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ಮತ್ತು ಧವಳ್ ಕುಲ್ಕರ್ಣಿ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಮುಂಬೈ ಪರ ಯುವ ದಾಂಡಿಗ ಮುಶೀರ್ ಖಾನ್ (136) ಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ 95 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಶಮ್ಸ್ ಮುಲಾನಿ 50 ರನ್ ಬಾರಿಸಿ ಮಿಂಚಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 418 ರನ್ ಕಲೆಹಾಕಿತು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 538 ರನ್ಗಳ ಗುರಿ ಪಡೆದಿರುವ ವಿದರ್ಭ ತಂಡಕ್ಕೆ ಈ ಬಾರಿ ಕರುಣ್ ನಾಯರ್ ಆಸರೆಯಾದರು. 74 ರನ್ಗಳನ್ನು ಬಾರಿಸುವ ಮೂಲಕ ಕರುಣ್ ನಾಲ್ಕನೇ ದಿನದಾಟದ ವೇಳೆ ವಿದರ್ಭ ತಂಡದ ಸ್ಕೋರ್ ಅನ್ನು 200 ರ ಗಡಿದಾಟಿಸಿ ವಿಕೆಟ್ ಒಪ್ಪಿಸಿದರು.
ಅದರಂತೆ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ವಿದರ್ಭ ತಂಡವು 5 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ಅಕ್ಷಯ್ ವಾಡ್ಕರ್ (56) ಹಾಗೂ ಹರ್ಷ್ ದುಬೆ (11) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದೀಗ 5ನೇ ದಿನದಾಟದಲ್ಲಿ ವಿದರ್ಭ ತಂಡವು 290 ರನ್ ಕಲೆಹಾಕಬೇಕಿದೆ. ಅತ್ತ ಮುಂಬೈ ತಂಡ ಗೆಲ್ಲಲು 5 ವಿಕೆಟ್ಗಳ ಅವಶ್ಯಕತೆಯಿದೆ. ಹೀಗಾಗಿ ಕೊನೆಯ ದಿನದಾಟದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬುದೇ ಈಗ ಕುತೂಹಲ.
ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಭೂಪೇನ್ ಲಾಲ್ವಾನಿ , ಮುಶೀರ್ ಖಾನ್ , ಅಜಿಂಕ್ಯ ರಹಾನೆ (ನಾಯಕ) , ಶ್ರೇಯಸ್ ಅಯ್ಯರ್ , ಹಾರ್ದಿಕ್ ತಮೋರ್ (ವಿಕೆಟ್ ಕೀಪರ್) , ಶಮ್ಸ್ ಮುಲಾನಿ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ತುಷಾರ್ ದೇಶಪಾಂಡೆ , ಧವಲ್ ಕುಲಕರ್ಣಿ.
ಇದನ್ನೂ ಓದಿ: Musheer Khan: ಭರ್ಜರಿ ಶತಕದೊಂದಿಗೆ ಸಚಿನ್ ದಾಖಲೆ ಮುರಿದ ಮುಶೀರ್ ಖಾನ್
ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಧ್ರುವ ಶೋರೆ , ಅಮನ್ ಮೊಖಡೆ , ಕರುಣ್ ನಾಯರ್ , ಯಶ್ ರಾಥೋಡ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಉಮೇಶ್ ಯಾದವ್ , ಹರ್ಷ ದುಬೆ , ಯಶ್ ಠಾಕೂರ್ , ಆದಿತ್ಯ ಠಾಕ್ರೆ.
Published On - 9:40 am, Thu, 14 March 24