- Kannada News Photo gallery Cricket photos Musheer Khan becomes youngest Mumbai batter to hit Ranji Trophy final Century
Musheer Khan: ಭರ್ಜರಿ ಶತಕದೊಂದಿಗೆ ಸಚಿನ್ ದಾಖಲೆ ಮುರಿದ ಮುಶೀರ್ ಖಾನ್
Musheer Khan: ರಣಜಿ ಟೂರ್ನಿಯಲ್ಲಿ ಸರ್ಫರಾಝ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್ ಅವರ ಅಬ್ಬರ ಮುಂದುವರೆದಿದೆ. ಕ್ವಾರ್ಟರ್ ಫೈನಲ್ನಲ್ಲಿ ದ್ವಿಶತಕ ಸಿಡಿಸುವ ಮೂಲಕ ಮುಂಬೈ ತಂಡದ ಗೆಲುವಿಗೆ ಕಾರಣರಾಗಿದ್ದ ಮುಶೀರ್ ಇದೀಗ ಫೈನಲ್ ಪಂದ್ಯದಲ್ಲಿ ಆಕರ್ಷಕ ಸೆಂಚುರಿ ಸಿಡಿಸಿದ್ದಾರೆ. ಈ ಶತಕದೊಂದಿಗೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
Updated on: Mar 12, 2024 | 2:22 PM

ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ಯುವ ಬ್ಯಾಟರ್ ಮುಶೀರ್ ಖಾನ್ (Musheer Khan) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ವಿದರ್ಭ ವಿರುದ್ಧದ ಈ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಶೀರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ಮುಶೀರ್ ಖಾನ್ 255 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನೂ ಕೂಡ ಯುವ ದಾಂಡಿಗ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. 1994-95 ರಲ್ಲಿ ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ 21 ವರ್ಷ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿ ದಾಖಲೆ ಬರೆದಿದ್ದರು.

ಇದೀಗ 19 ವರ್ಷದ ಮುಶೀರ್ ಖಾನ್ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 30 ವರ್ಷಗಳ ಹಳೆಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದ ದ್ವಿತೀಯ ಇನಿಂಗ್ಸ್ನ 102ನೇ ಓವರ್ ವೇಳೆ ಮುಕ್ತಾಯದ ವೇಳೆಗೆ ಮುಂಬೈ ತಂಡವು 4 ವಿಕೆಟ್ ಕಳೆದುಕೊಂಡು 332 ರನ್ ಕಲೆಹಾಕಿದೆ. 129 ರನ್ ಬಾರಿಸಿರುವ ಮುಶೀರ್ ಖಾನ್ ಹಾಗೂ ಹಾರ್ದಿಕ್ ತಾಮೋರೆ ಬ್ಯಾಟಿಂಗ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವಿಶೇಷ ಎಂದರೆ ಈ ಬಾರಿಯ ರಣಜಿ ಟೂರ್ನಿಗೆ ಮುಶೀರ್ ಖಾನ್ ಆಯ್ಕೆಯಾಗಿರಲಿಲ್ಲ. ಆದರೆ ಮುಂಬೈ ಆಟಗಾರ ಶಿವಂ ದುಬೆ ಗಾಯಗೊಂಡಿದ್ದ ಕಾರಣ ಅವರನ್ನು ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿತ್ತು. ಹೀಗೆ ಸಿಕ್ಕ ಅವಕಾಶದಲ್ಲಿ ಮುಶೀರ್ ಖಾನ್ ಅಬ್ಬರಿಸಿದ್ದಾರೆ.

ಕ್ವಾರ್ಟರ್ ಫೈನಲ್ನಲ್ಲಿ ದ್ವಿಶತಕ ಬಾರಿಸಿದ್ದ ಮುಶೀರ್, ಸೆಮಿಫೈನಲ್ನಲ್ಲಿ ಅರ್ಧಶತಕದ ಕೊಡುಗೆ ನೀಡಿದ್ದರು. ಇದೀಗ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ 19ರ ಹರೆಯದ ಯುವ ದಾಂಡಿಗ ಹೊಸ ಇತಿಹಾಸ ಬರೆದಿದ್ದಾರೆ.

ಅಂದಹಾಗೆ ಮುಶೀರ್ ಖಾನ್ ಟೀಮ್ ಇಂಡಿಯಾ ಆಟಗಾರ ಸರ್ಫರಾಝ್ ಖಾನ್ ಅವರ ಸಹೋದರ. ಅಣ್ಣ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದರೆ, ತಮ್ಮ ರಣಜಿ ಟೂರ್ನಿಯಲ್ಲಿ ದ್ವಿಶತಕ,ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ.
