ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ಪ್ಲೇಆಫ್ಗೆ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್ (MI) ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ಎಲ್ಲಿಸ್ ಪೆರ್ರಿ ಅವರ ಮಾರಕ ದಾಳಿಗೆ ತತ್ತರಿಸಿತು. ಲಯ ಬದ್ಧ ಬೌಲಿಂಗ್ ದಾಳಿ ಸಂಘಟಿಸಿದ ಪೆರ್ರಿ ಕೇವಲ 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 6 ವಿಕೆಟ್ ಕಬಳಿಸಿದರು. ಪರಿಣಾಮ 19 ಓವರ್ಗಳಲ್ಲಿ 113 ರನ್ಗಳಿಸಿ ಮುಂಬೈ ಇಂಡಿಯನ್ಸ್ ಆಲೌಟ್ ಆಯಿತು.
114 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆರ್ಸಿಬಿ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಸ್ಮೃತಿ ಮಂಧಾನ 13 ರನ್ಗಳಿಸಿ ಔಟಾದರೆ, ಸೋಫಿ ಮೊಲಿನೆಕ್ಸ್ 9 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸೋಫಿ ಡಿವೈಲ್ (4) ಕೂಡ ಬೌಲ್ಡ್ ಆದರು. ಈ ಹಂತದಲ್ಲಿ ಆರ್ಸಿಬಿ ತಂಡಕ್ಕೆ ಆಸರೆಯಾಗಿದ್ದು ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್.
4ನೇ ವಿಕೆಟ್ಗೆ ಜೊತೆಗೂಡಿದ ಪೆರ್ರಿ-ರಿಚಾ ಜೋಡಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 74 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ಎಲ್ಲಿಸ್ ಪೆರ್ರಿ (40) ಹಾಗೂ ರಿಚಾ ಘೋಷ್ (36) ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆರ್ಸಿಬಿ ತಂಡ 7 ವಿಕೆಟ್ಗಳ ಜಯ ಸಾಧಿಸಿ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ.
ಲೀಗ್ ಹಂತದಲ್ಲಿ ಆಡಿರುವ 4 ಜಯ ಸಾಧಿಸಿದ್ದು, ಈ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಅತ್ತ ನಾಲ್ಕನೇ ಮತ್ತು ಐದನೇ ಸ್ಥಾನಗಳಲ್ಲಿದ್ದ ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ತಂಡಗಳು ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದೆ. ಇತ್ತ ಪ್ಲೇಆಫ್ ಪ್ರವೇಶಿಸಿರುವ ಆರ್ಸಿಬಿ ತಂಡವು ಶುಕ್ರವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
Published On - 6:30 am, Wed, 13 March 24