ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಬ್ಯಾಟರ್ ರಜತ್ ಪಾಟಿದಾರ್ (Rajat Patidar) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಎರಡು ದಿನಗಳ ಈ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಯನ್ಸ್ ಪರ ಡಾನ್ ಮೌಸ್ಲಿ (60) ಅರ್ಧಶತಕ ಬಾರಿಸಿದರು.
ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಲಯನ್ಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 233 ರನ್ಗಳಿಸಿ ಆಲೌಟ್ ಆಯಿತು. ಭಾರತ ಎ ಪರ ಮಾನವ್ ಸುತಾರ್ 3 ವಿಕೆಟ್ ಕಬಳಿಸಿದರೆ, ಆಕಾಶ್ ದೀಪ್ 2 ವಿಕೆಟ್ ಪಡೆದರು. ಇನ್ನು ವಿಧ್ವತ್ ಕಾವೇರಪ್ಪ, ತುಷಾರ್ ದೇಶಪಾಂಡೆ, ಪುಲ್ಕಿತ್ ನಾರಂಗ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 73 ರನ್ ಪೇರಿಸಿ ಅಭಿಮನ್ಯು ಈಶ್ವರನ್ (32) ಔಟಾದರು. ಮತ್ತೊಂದೆಡೆ ಅದ್ಭುತ ಇನಿಂಗ್ಸ್ ಆಡಿದ ರಜತ್ ಪಾಟಿದಾರ್ ಇಂಗ್ಲೆಂಡ್ ಲಯನ್ಸ್ ಬೌಲರ್ಗಳ ಬೆಂಡೆತ್ತಿದರು. ಅಲ್ಲದೆ 131 ಎಸೆತಗಳಲ್ಲಿ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ರಜತ್ ಪಾಟಿದಾರ್ 141 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 111 ರನ್ ಬಾರಿಸಿ ಔಟಾದರು.
ರಜತ್ ಪಾಟಿದಾರ್ ಅವರ ಈ ಭರ್ಜರಿ ಶತಕದ ನೆರವಿನಿಂದ ಭಾರತ ಎ ತಂಡವು 54 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಸರ್ಫರಾಝ್ ಖಾನ್ (71) ಹಾಗೂ ಕೆಎಸ್ ಭರತ್ (25) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ ಎ ತಂಡ: ಅಭಿಮನ್ಯು ಈಶ್ವರನ್ (ನಾಯಕ) , ಸಾಯಿ ಸುದರ್ಶನ್ , ರಜತ್ ಪಾಟಿದಾರ್ , ಪ್ರದೋಶ್ ಪಾಲ್ , ಸರ್ಫರಾಜ್ ಖಾನ್ , ಶ್ರೀಕರ್ ಭರತ್ , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ತುಷಾರ್ ದೇಶಪಾಂಡೆ , ನವದೀಪ್ ಸೈನಿ , ಆಕಾಶ್ ದೀಪ್ , ಪುಲ್ಕಿತ್ ನಾರಂಗ್ , ವಿಧ್ವತ್ ಕಾವೇರಪ್ಪ.
ಇದನ್ನೂ ಓದಿ: Babar Azam: ಬಾಬರ್ ಅಬ್ಬರಕ್ಕೆ ರೋಹಿತ್ ಶರ್ಮಾರ ದಾಖಲೆ ಬ್ರೇಕ್
ಇಂಗ್ಲೆಂಡ್ ಲಯನ್ಸ್ ತಂಡ: ಕೀಟನ್ ಜೆನ್ನಿಂಗ್ಸ್ , ಅಲೆಕ್ಸ್ ಲೀಸ್ , ಜೋಶ್ ಬೊಹಾನನ್ (ನಾಯಕ) , ಡ್ಯಾನ್ ಮೌಸ್ಲಿ , ಆಲಿವರ್ ಪ್ರೈಸ್ , ಜೇಮ್ಸ್ ರೆವ್ (ವಿಕೆಟ್ ಕೀಪರ್) , ಕೇಸಿ ಆಲ್ಡ್ರಿಡ್ಜ್ , ಟಾಮ್ ಲಾವ್ಸ್ , ಬ್ರೈಡನ್ ಕಾರ್ಸೆ , ಜೇಮ್ಸ್ ಕೋಲ್ಸ್ , ಜ್ಯಾಕ್ ಕಾರ್ಸನ್ , ಮ್ಯಾಥ್ಯೂ ಫಿಶರ್ , ಕ್ಯಾಲಮ್ ಪಾರ್ಕಿನ್ಸನ್, ಮ್ಯಾಥ್ಯೂ ಪೊಟ್ಸ್, ಒಲಿವರ್ ರಾಬಿನ್ಸನ್.