Rajat Patidar: ಪವರ್ಫುಲ್ ದಾಖಲೆ ಬರೆದ ರಜತ್ ಪಾಟಿದಾರ್
Rajat Patidar Record: ಭರ್ಜರಿ ಶತಕದೊಂದಿಗೆ ಹಲವು ದಾಖಲೆ ಬರೆದಿದ್ದ ರಜತ್ ಪಾಟಿದಾರ್ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ದ ಅರ್ಧಶತಕ ಸಿಡಿಸುವ ಮೂಲಕ ಮತ್ತಷ್ಟು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
IPL 2022: ಐಪಿಎಲ್ ಸೀಸನ್ 15ರ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಹಲವು ದಾಖಲೆ ಬರೆದಿದ್ದ ರಜತ್ ಪಾಟಿದಾರ್ (Rajat Patidar), ಇದೀಗ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ (RCB) ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 7 ರನ್ಗಳಿಸಿ ವಿರಾಟ್ ಕೊಹ್ಲಿ (Virat Kohli) ಔಟಾದರೆ, ಫಾಫ್ ಡುಪ್ಲೆಸಿಸ್ 25 ರನ್ಗೆ ಇನಿಂಗ್ಸ್ ಅಂತ್ಯಗೊಳಿಸಿದರು.
ಇತ್ತ ಆರ್ಸಿಬಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಮತ್ತೊಮ್ಮೆ ನೆರವಾದ ರಜತ್ ಪಾಟಿದಾರ್ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಅದರಂತೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಪಾಟಿದಾರ್ 3 ಸಿಕ್ಸ್ ಹಾಗೂ 4 ಫೋರ್ಗಳನ್ನು ಬಾರಿಸಿದರು. ಈ ಮೂಲಕ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಈ ಅರ್ಧಶತಕದೊಂದಿಗೆ ಪ್ಲೇಆಫ್ ಪಂದ್ಯದಲ್ಲಿ 2 ಬಾರಿ 50+ ಬಾರಿಸಿದ 2ನೇ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ 2021 ರಲ್ಲಿ ವೆಂಕಟೇಶ್ ಅಯ್ಯರ್ ಪ್ಲೇಆಫ್ ಪಂದ್ಯಗಳಲ್ಲಿ 2 ಅರ್ಧಶತಕ ಬಾರಿಸಿ ಮಿಂಚಿದ್ದರು. ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ರಜತ್ ಪಾಟಿದಾರ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅಷ್ಟೇ ಅಲ್ಲದೆ ಆರ್ಸಿಬಿ ಪರ ಪ್ಲೇಆಫ್ ಪಂದ್ಯಗಳಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿದ ಮೊದಲ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆಗೂ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.
ಇದಲ್ಲದೆ ಆರ್ಸಿಬಿ ಪರ ಪ್ಲೇಆಫ್ ಪಂದ್ಯಗಳಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಪಾಟಿದಾರ್ ಪಾಲಾಗಿದೆ. ಈ ಬಾರಿ ಎರಡು ಪಂದ್ಯಗಳಿಂದ ರಜತ್ ಪಾಟಿದಾರ್ 170 ರನ್ ಬಾರಿಸುವ ಮೂಲಕ ಈ ವಿಶೇಷ ದಾಖಲೆ ಬರೆದಿದ್ದಾರೆ.
ಹಾಗೆಯೇ ಪ್ಲೇಆಫ್ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆ ಪಟ್ಟಿಯಲ್ಲೂ ರಜತ್ ಪಾಟಿದಾರ್ಗೆ ಸ್ಥಾನ ಸಿಕ್ಕಿದೆ. 2016 ರಲ್ಲಿ ಡೇವಿಡ್ ವಾರ್ನರ್ ಪ್ಲೇಆಫ್ ಪಂದ್ಯಗಳಲ್ಲಿ 190 ರನ್ ಬಾರಿಸುವ ಮೂಲಕ ಭರ್ಜರಿ ದಾಖಲೆ ಬರೆದಿದ್ದರು. ಇದೀಗ ಈ ಪಟ್ಟಿಯಲ್ಲಿ ಪಾಟಿದಾರ್ 2ನೇ ಸ್ಥಾನ ಅಲಂಕರಿಸಿದ್ದಾರೆ.
ಒಟ್ಟಿನಲ್ಲಿ ಭರ್ಜರಿ ಶತಕದೊಂದಿಗೆ ಹಲವು ದಾಖಲೆ ಬರೆದಿದ್ದ ರಜತ್ ಪಾಟಿದಾರ್ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ದ ಅರ್ಧಶತಕ ಸಿಡಿಸುವ ಮೂಲಕ ಮತ್ತಷ್ಟು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.