Ranji Trophy: ಕಳಪೆ ಫಾರ್ಮ್‌ನಿಂದ ಹೊರ ಬಂದ ರಹಾನೆ; ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿದ ಅಜಿಂಕ್ಯ
Ajinkya Rahane: ಈ ಶತಕದೊಂದಿಗೆ ರಹಾನೆ ಅವರು ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಸರಣಿಗೆ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಭಾರತ ತಂಡದ ಆಡಳಿತ ಮತ್ತು ಹಿರಿಯ ಆಯ್ಕೆ ಸಮಿತಿಗೆ ಸಂದೇಶವನ್ನೂ ರವಾನಿಸಿದ್ದಾರೆ.
ಭಾರತೀಯ ದೇಶೀಯ ಕ್ರಿಕೆಟ್‌ನ ಅತಿದೊಡ್ಡ ಪಂದ್ಯಾವಳಿಯಾದ ರಣಜಿ ಟ್ರೋಫಿ 2022 ( Ranji Trophy 2022) ಪ್ರಾರಂಭವಾಗಿದೆ. ಫೆಬ್ರವರಿ 17 ರ ಗುರುವಾರದಿಂದ, ಸುಮಾರು ಎರಡು ವರ್ಷಗಳ ನಂತರ 38 ದೇಶೀಯ ತಂಡಗಳು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿವೆ. ಇದರೊಂದಿಗೆ ದೇಶಿ ಕ್ರಿಕೆಟಿಗರಿಗೂ ಬಿಗ್ ರಿಲೀಫ್ ಸಿಕ್ಕಿದೆ. ಈ ರಣಜಿ ಸೀಸನ್ ದೇಶೀಯ ಕ್ರಿಕೆಟಿಗರಿಗೆ ಎಷ್ಟು ಮುಖ್ಯವೋ, ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಆಡುತ್ತಿರುವ ಅಂತಹ ಅನೇಕ ಆಟಗಾರರಿಗೆ ಇದು ಅಷ್ಟೇ ಮುಖ್ಯವಾಗಿದೆ. ಅವರಲ್ಲಿ ದೊಡ್ಡ ಹೆಸರುಗಳೆಂದರೆ ಅಜಿಂಕ್ಯ ರಹಾನೆ (Ajinkya Rahane) ಮತ್ತು ಚೇತೇಶ್ವರ ಪೂಜಾರ (Cheteshwar Pujara), ಅವರು ಪರಸ್ಪರರ ವಿರುದ್ಧ ತಮ್ಮ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ದಿನ ರಹಾನೆ ಉತ್ತಮ ಶತಕದೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬುನಾದಿ ಹಾಕಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿದಿದೆ. ಆದರೆ, ತಂಡದ ಆರಂಭ ಕಳಪೆಯಾಗಿದ್ದು, ನಾಯಕ ಪೃಥ್ವಿ ಶಾ ಸೇರಿದಂತೆ ಅಗ್ರ 3 ಬ್ಯಾಟ್ಸ್‌ಮನ್‌ಗಳು ಕೇವಲ 44 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಇಂತಹ ಪರಿಸ್ಥಿತಿಯಲ್ಲಿ ಮುಂಬೈಗೆ ಉತ್ತಮ ಇನ್ನಿಂಗ್ಸ್ ಮತ್ತು ಜೊತೆಯಾಟದ ಅಗತ್ಯವಿತ್ತು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ನಿಂದ ಚೇತರಿಸಿಕೊಳ್ಳಲು ಸ್ವತಃ ದೊಡ್ಡ ಇನ್ನಿಂಗ್ಸ್‌ನ ಅಗತ್ಯವಿದ್ದ ಅಜಿಂಕ್ಯ ರಹಾನೆ ಈ ಕಾರ್ಯವನ್ನು ಪೂರ್ಣಗೊಳಿಸಲು ಬಂದರು.
36ನೇ ಶತಕದೊಂದಿಗೆ ಉತ್ತರಿಸಿದ ರಹಾನೆ
ಭಾರತ ತಂಡದ ಮಾಜಿ ನಾಯಕ ಹಾಗೂ ಮುಂಬೈನ ಲೆಜೆಂಡರಿ ಬ್ಯಾಟ್ಸ್‌ಮನ್ ರಹಾನೆ ತಮ್ಮ ಅನುಭವವನ್ನು ಸಂಪೂರ್ಣವಾಗಿ ಬಳಸಿಕೊಂಡು ಕ್ರೀಸ್‌ನಲ್ಲಿ ಬಹಳ ಸಮಯ ನಿಂತರು. ರಹಾನೆ ಸುದೀರ್ಘ ಇನ್ನಿಂಗ್ಸ್ ಆರಂಭಿಸಿ 100ಕ್ಕೂ ಹೆಚ್ಚು ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸಮಯದಲ್ಲಿ, ಅವರು ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಅವರಿಂದ ಉತ್ತಮ ಬೆಂಬಲವನ್ನು ಪಡೆದರು. ಇಬ್ಬರೂ ಜೊತೆಯಾಗಿ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಮೂರನೇ ಅವಧಿಯಲ್ಲಿ ರಹಾನೆ ತಮ್ಮ ಅತ್ಯುತ್ತಮ ಶತಕ ಪೂರೈಸಿದರು. ಭಾರತದ ಹಿರಿಯ ಬ್ಯಾಟ್ಸ್‌ಮನ್ 211 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 36 ನೇ ಶತಕವನ್ನು ಗಳಿಸಿದರು.
ಶ್ರೀಲಂಕಾ ಸರಣಿಗೆ ಸ್ಥಾನ ಪಡೆಯಲಿದ್ದಾರೆ
ಈ ಶತಕದೊಂದಿಗೆ ರಹಾನೆ ಅವರು ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾ ಸರಣಿಗೆ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಭಾರತ ತಂಡದ ಆಡಳಿತ ಮತ್ತು ಹಿರಿಯ ಆಯ್ಕೆ ಸಮಿತಿಗೆ ಸಂದೇಶವನ್ನೂ ರವಾನಿಸಿದ್ದಾರೆ. ಭಾರತ ತಂಡ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದ್ದು, ಮುಂದಿನ ವಾರ ತಂಡವನ್ನು ಪ್ರಕಟಿಸಲಾಗುವುದು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಕಳಪೆ ಪ್ರದರ್ಶನದಿಂದಾಗಿ ಆ ಸರಣಿಯಲ್ಲಿ ಪೂಜಾರ ಮತ್ತು ರಹಾನೆ ಆಯ್ಕೆ ಖಚಿತವಾಗಿಲ್ಲ. ಹೀಗಿರುವಾಗ ರಹಾನೆ ತಮ್ಮ ಹಕ್ಕು ಮಂಡಿಸಿದ್ದು, ಈ ಪಂದ್ಯದಲ್ಲಿ ರಹಾನೆ ನಂತರ ಪೂಜಾರ ಅವರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಇದನ್ನೂ ಓದಿ:IND vs SA: ಟೀಂ ಇಂಡಿಯಾದಿಂದ ಪೂಜಾರ- ರಹಾನೆಗೆ ಗೇಟ್ಪಾಸ್? ನಾಯಕ ಕೊಹ್ಲಿ ಹೇಳಿದ್ದೇನು ಗೊತ್ತಾ?