ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ (Ranji Trophy 2024) ಕ್ವಾರ್ಟರ್ ಫೈನಲ್ನ ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ ತಂಡ ಹಿನ್ನಡೆ ಅನುಭವಿಸಿದೆ. ವಿಧರ್ಭ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಮೊದಲು ಬೌಲಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ವಿದರ್ಭ ಪರ ಆರಂಭಿಕ ಆಟಗಾರ ಅಥರ್ವ ತೈಡೆ (109) ಭರ್ಜರಿ ಶತಕ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶ್ ರಾಥೋಡ್ (93) ಅರ್ಧಶತಕದ ಕೊಡುಗೆ ನೀಡಿದರು.
ಇನ್ನು ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಮಾಜಿ ಆಟಗಾರ ಕರುಣ್ ನಾಯರ್ 90 ರನ್ ಚಚ್ಚಿದರು. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ವಿದರ್ಭ ತಂಡವು 460 ರನ್ಗಳಿಸಿ ಆಲೌಟ್ ಆಯಿತು.
ಈ ಗುರಿಯನ್ನು ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ಔಟಾಗುವುದರೊಂದಿಗೆ ಆರಂಭಿಕ ಆಘಾತಕ್ಕೆ ಒಳಗಾಯಿತು. ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ (59) ಅರ್ಧಶತಕ ಬಾರಿಸಿ ಮಿಂಚಿದರು.
ಇನ್ನು ಅನೀಶ್ 34 ರನ್ಗಳಿಸಿದರೆ, ನಿಕಿನ್ ಜೋಸ್ 82 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅನುಭವಿ ಆಟಗಾರ ಮನೀಶ್ ಪಾಂಡೆ ಕೇವಲ 15 ರನ್ಗಳಿಸಿದರೆ, ಹಾರ್ದಿಕ್ ರಾಜ್ 23, ಎಸ್ ಶರತ್ 29 ರನ್ಗಳಿಸಿ ಔಟಾದರು.
ಅಂತಿಮವಾಗಿ 286 ರನ್ಗಳಿಗೆ ಸರ್ವಪತನ ಕಾಣುವ ಮೂಲಕ ಕರ್ನಾಟಕ ತಂಡವು 274 ರನ್ಗಳ ಹಿನ್ನಡೆ ಅನುಭವಿಸಿದೆ. ಅತ್ತ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಮುನ್ನಡೆ ಪಡೆದಿರುವ ವಿದರ್ಭ ತಂಡವು ಮೂರನೇ ದಿನದಾಟಕ್ಕೆ ವಿಕೆಟ್ ನಷ್ಟವಿಲ್ಲದೆ 50 ರನ್ ಕಲೆಹಾಕಿದೆ.
ಒಂದು ವೇಳೆ ಈ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡರೆ ವಿದರ್ಭ ತಂಡ ಸೆಮಿಫೈನಲ್ಗೇರಲಿದೆ. ಏಕೆಂದರೆ ನಾಕೌಟ್ ಹಂತದಲ್ಲಿ ಪಂದ್ಯವು ಡ್ರಾ ಆದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿರುವ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಹೀಗಾಗಿ ಕರ್ನಾಟಕ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿದೆ ಎಂದೇ ಹೇಳಬಹುದು.
ವಿದರ್ಭ ಪ್ಲೇಯಿಂಗ್ 11: ಧ್ರುವ ಶೋರೆ , ಅಥರ್ವ ತೈಡೆ , ಕರುಣ್ ನಾಯರ್ , ಅಕ್ಷಯ್ ವಾಡ್ಕರ್ (ನಾಯಕ) , ಮೋಹಿತ್ ಕಾಳೆ , ಯಶ್ ರಾಥೋಡ್ , ಆದಿತ್ಯ ಸರ್ವತೆ , ಯಶ್ ಠಾಕೂರ್ , ಹರ್ಷ ದುಬೆ , ಉಮೇಶ್ ಯಾದವ್ , ಆದಿತ್ಯ ಠಾಕರೆ.
ಇದನ್ನೂ ಓದಿ: IPL 2024: ಇಬ್ಬರು ಭಾರತೀಯರು: 10 ತಂಡಗಳ ಕೋಚ್ ಫೈನಲ್
ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ನಿಕಿನ್ ಜೋಸ್ , ಹಾರ್ದಿಕ್ ರಾಜ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಅನೀಶ್ ಕೆ ವಿ , ಧೀರಜ್ ಗೌಡ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್ , ವಿಧ್ವತ್ ಕಾವೇರಪ್ಪ.