Ranji Trophy Final 2022: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು (Madhya Pradesh vs Mumbai) ಮಣಿಸಿ ಮಧ್ಯ ಪ್ರದೇಶ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ 69 ವರ್ಷಗಳ ಬಳಿಕ ಮಧ್ಯ ಪ್ರದೇಶ ತಂಡವು ರಣಜಿ ಕಿರೀಟವನ್ನು ತನ್ನದಾಗಿಸಿಕೊಂಡು ಹೊಸ ಇತಿಹಾಸ ಬರೆದಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಸರ್ಫರಾಜ್ ಖಾನ್ (134) ಅವರ ಶತಕದ ನೆರವಿನಿಂದ 374 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮಧ್ಯ ಪ್ರದೇಶ ತಂಡದ ಪರ ಯಶ್ ದುಬೆ (133) ಶುಭಂ ಶರ್ಮಾ (116) ಹಾಗೂ ರಜತ್ ಪಾಟಿದಾರ್ (122) ಶತಕ ಸಿಡಿಸಿ ಅಬ್ಬರಿಸಿದ್ದರು. ಪರಿಣಾಮ ಮಧ್ಯ ಪ್ರದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 536 ರನ್ ಕಲೆಹಾಕಿತು.
162 ರನ್ಗಳ ಹಿನ್ನಡೆಯೊಂದಿಗೆ 4ನೇ ದಿನದಾಟದ ಅಂತ್ಯದಲ್ಲಿ 2ನೇ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ ಸ್ಪೋಟಕ ಆರಂಭ ಒದಗಿಸಿದ್ದರು. ಹಾರ್ದಿಕ್ ತಮೊರೆ ಜೊತೆಗೂಡಿ ಬ್ಯಾಟ್ ಬೀಸಿದ ಪೃಥ್ವಿ 10 ಓವರ್ಗಳಲ್ಲಿ ತಂಡದ ಮೊತ್ತವನ್ನು 60 ರ ಗಡಿದಾಟಿಸಿದರು. 25 ರನ್ಗಳಿಸಿ ತಮೊರೆ ಔಟಾದರೆ, ಇದರ ಬೆನ್ನಲ್ಲೇ 52 ಎಸೆತಗಳಲ್ಲಿ 44 ರನ್ಗಳಿಸಿದ್ದ ವೇಳೆ ಪೃಥ್ವಿ ಶಾ ಕೂಡ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಅರ್ಮಾನ್ ಜಾಫರ್ (37), ಸವೇದ್ ಪಾರ್ಕರ್ (51) ಹಾಗೂ ಸರ್ಫರಾಜ್ ಖಾನ್ (45) ಬಿರುಸಿನ ಇನಿಂಗ್ಸ್ ಆಡಿದ್ದರು. ಆದರೆ ಮತ್ತೊಂದೆಡೆ ಮುಂಬೈ ತಂಡವು ವಿಕೆಟ್ ಕೈಚೆಲ್ಲುತ್ತಾ ಹೋಯಿತು. ಪರಿಣಾಮ 5ನೇ ದಿನದಾಟದ ವೇಳೆ 269 ರನ್ಗಳಿಗೆ ಸರ್ವಪತನ ಕಂಡಿತು. ಅದರಂತೆ 2ನೇ ಇನಿಂಗ್ಸ್ನಲ್ಲಿ 108 ರನ್ಗಳ ಟಾರ್ಗೆಟ್ ಪಡೆದ ಮಧ್ಯ ಪ್ರದೇಶ ತಂಡಕ್ಕೆ ಧವಳ್ ಕುಲಕರ್ಣಿ 2ನೇ ಓವರ್ನಲ್ಲಿ ಯಶ್ ದುಬೆ (1) ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದ್ದರು. ಇದಾಗ್ಯೂ ಹಿಮಾಂಶು ಮಂತ್ರಿ ಹಾಗೂ ಶುಭಂ ಶರ್ಮಾ ಎಚ್ಚರಿಕೆಯ ಆಟವಾಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಅರ್ಧಶತಕಗಳ ಜೊತೆಯಾಟದ ಬಳಿಕ ಹಿಮಾಂಶು ಮಂತ್ರಿ (37) ಶಮ್ಸ್ ಮುಲಾನಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪಾರ್ಥ್ ಸಹಾನಿ (5) ಕೂಡ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಯಾದ ಶುಭಂ ಶರ್ಮಾ ಹಾಗೂ ರಜತ್ ಪಾಟಿದಾರ್ ತಂಡದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು. ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು 108 ರನ್ಗಳಿಸುವ ಮೂಲಕ ಮಧ್ಯ ಪ್ರದೇಶ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ 69 ವರ್ಷಗಳ ಬಳಿಕ ಮತ್ತೊಮ್ಮೆ ರಣಜಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.
ಈ ಹಿಂದೆ ಮಧ್ಯ ಪ್ರದೇಶ ತಂಡವು ರಣಜಿ ಟ್ರೋಫಿ ಗೆದ್ದಿರುವುದು 1953 ರಲ್ಲಿ. ಅಂದು ಹೋಲ್ಕರ್ (Holkar) ಕ್ರಿಕೆಟ್ ಟೀಮ್ ಹೆಸರಿನಲ್ಲಿ ಮಧ್ಯಪ್ರದೇಶದ ಆಟಗಾರರು ರಣಜಿ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದರು. ಅಂದರೆ ಮಧ್ಯ ಪ್ರದೇಶ ರಾಜ್ಯವಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ತಂಡವು ರಣಜಿ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಮೂಲಕ ಮಧ್ಯ ಪ್ರದೇಶ ಆಟಗಾರರು ಹೊಸ ಇತಿಹಾಸವನ್ನು ನಿರ್ಮಿಸಿದೆ.
ಮಧ್ಯ ಪ್ರದೇಶ ಪ್ಲೇಯಿಂಗ್ 11: ಯಶ್ ದುಬೆ , ಹಿಮಾಂಶು ಮಂತ್ರಿ (ವಿಕೆಟ್ ಕೀಪರ್) , ಶುಭಂ ಎಸ್ ಶರ್ಮಾ , ರಜತ್ ಪಾಟಿದಾರ್ , ಆದಿತ್ಯ ಶ್ರೀವಾಸ್ತವ (ನಾಯಕ) , ಅಕ್ಷತ್ ರಘುವಂಶಿ , ಪಾರ್ಥ್ ಸಹಾನಿ , ಸರನ್ಶ್ ಜೈನ್ , ಕುಮಾರ್ ಕಾರ್ತಿಕೇಯ , ಅನುಭವ್ ಅಗರ್ವಾಲ್ , ಗೌರವ್ ಯಾದವ್
ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ (ನಾಯಕ) , ಯಶಸ್ವಿ ಜೈಸ್ವಾಲ್ , ಅರ್ಮಾನ್ ಜಾಫರ್ , ಸುವೇದ್ ಪರ್ಕರ್ , ಸರ್ಫರಾಜ್ ಖಾನ್ , ಹಾರ್ದಿಕ್ ತಮೋರ್ ( ವಿಕೆಟ್ ಕೀಪರ್) , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಧವಲ್ ಕುಲಕರ್ಣಿ , ತುಷಾರ್ ದೇಶಪಾಂಡೆ , ಮೋಹಿತ್ ಅವಸ್ತಿ