19 ಬೌಂಡರಿ ಸಹಿತ 162 ರನ್ ಚಚ್ಚಿದ ಸರ್ಫರಾಜ್ ಖಾನ್! ಟೀಂ ಇಂಡಿಯಾಕ್ಕೆ ಯಾವಾಗ ಎಂಟ್ರಿ?
Ranji Trophy 2022: 25ರ ಹರೆಯದ ಸರ್ಫರಾಜ್ ತಮಿಳುನಾಡು ವಿರುದ್ಧ ಈ ಶತಕ ಸಿಡಿಸುವ ಮೂಲಕ ತನ್ನ 50ನೇ ಇನ್ನಿಂಗ್ಸ್‌ನಲ್ಲಿ 12ನೇ ಪ್ರಥಮ ದರ್ಜೆಯ ಶತಕವನ್ನು ಪೂರೈಸಿದ್ದಾರೆ.
ಟೀಂ ಇಂಡಿಯಾಕ್ಕೆ (Team India) ಎಂಟ್ರಿಕೊಡಲು ಕಾಯುತ್ತಿರುವ ಆಟಗಾರರ ಪಟ್ಟಿಯಲ್ಲಿ ಮುಂಬೈನ ಸ್ಟಾರ್ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ (Sarfaraz Khan) ಹೆಸರು ಬಹಳ ಸಮಯದಿಂದಲೇ ಅಗ್ರಸ್ಥಾನದಲ್ಲಿದೆ. ಆದರೆ ಅದ್ಯಾಕೋ ಸರ್ಫರಾಜ್ ಮೇಲೆ ಬಿಗ್ಬಾಸ್ಗಳು ಮಾತ್ರ ಕರುಣೆ ತೋರುತ್ತಿಲ್ಲ. ರಣಜಿ (Ranji Trophy) ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಈ ಆಟಗಾರನಿಗೆ ಟೀಂ ಇಂಡಿಯಾದಿಂದ ಕರೆ ಬಂದಿಲ್ಲ. ಆದರೆ ತನ್ನ ಎಂದಿನ ಫಾರ್ಮ್ ಮುಂದುವರೆಸುರಯವ ಸರ್ಫರಾಜ್, ರಣಜಿಯಲ್ಲಿ ತಮಿಳುನಾಡು ವಿರುದ್ಧದ ಗ್ರೂಪ್-ಬಿ ಪಂದ್ಯದಲ್ಲಿ 220 ಎಸೆತಗಳಲ್ಲಿ 19 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 162 ರನ್ ಬಾರಿಸಿದ್ದಾರೆ.
25ರ ಹರೆಯದ ಸರ್ಫರಾಜ್ ತಮಿಳುನಾಡು ವಿರುದ್ಧ ಈ ಶತಕ ಸಿಡಿಸುವ ಮೂಲಕ ತನ್ನ 50ನೇ ಇನ್ನಿಂಗ್ಸ್‌ನಲ್ಲಿ 12ನೇ ಪ್ರಥಮ ದರ್ಜೆಯ ಶತಕವನ್ನು ಪೂರೈಸಿದ್ದಾರೆ. ಆದರೆ ಮುಂಬೈ ಪರ ಆಡಿದ ಕೊನೆಯ 28 ಇನ್ನಿಂಗ್ಸ್‌ಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಇದು ಸರ್ಫರಾಜ್ ಅವರ 15 ನೇ ಬಿಗ್ ಇನ್ನಿಂಗ್ಸ್ ಆಗಿದೆ.
Ranji Trophy 2022: 14 ಬೌಂಡರಿ, 11 ಸಿಕ್ಸರ್; ರಣಜಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮನೀಶ್ ಪಾಂಡೆ..!
ಕಳೆದ 28 ಇನ್ನಿಂಗ್ಸ್‌ಗಳಲ್ಲಿ 15 ಬಿಗ್ ಇನ್ನಿಂಗ್ಸ್
ಮುಂಬೈ ಪರ ಕಳೆದ 28 ಇನ್ನಿಂಗ್ಸ್‌ಗಳಲ್ಲಿ ಸರ್ಫರಾಜ್ 9 ಶತಕ ಮತ್ತು 6 ಅರ್ಧ ಶತಕಗಳನ್ನು ಒಳಗೊಂಡಂತೆ ಒಟ್ಟು 15 ಬಿಗ್ ಇನ್ನಿಂಗ್ಸ್ ಆಡಿದ್ದಾರೆ. ಇನ್ನು ಸರ್ಫರಾಜ್ ಅವರ ಸಂಪೂರ್ಣ ಪ್ರಥಮ ದರ್ಜೆ ವೃತ್ತಿಜೀವನವನ್ನು ನೋಡಿದರೆ, ಇದುವರೆಗೆ 50 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳನ್ನು ಆಡಿರುವ ಸರ್ಫರಾಜ್, 12 ಶತಕ ಮತ್ತು 9 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಜೊತೆಗೆ 77 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 3000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಪ್ರಥಮ ದರ್ಜೆಯಲ್ಲಿ 12ನೇ ಶತಕ, ಮುಂಬೈಗೆ ಮುನ್ನಡೆ
ಸರ್ಫರಾಜ್ ಖಾನ್ ಅವರ ಶತಕದ ಇನಿಂಗ್ಸ್‌ನಿಂದಾಗಿ ಮುಂಬೈ ತಂಡ ತಮಿಳುನಾಡು ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 144 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಮುಂಬೈ ತಂಡ 9 ವಿಕೆಟ್ ನಷ್ಟಕ್ಕೆ 475 ರನ್ ಕಲೆಹಾಕಿದೆ.
ಟೀಂ ಇಂಡಿಯಾಕ್ಕೆ ಯಾವಾಗ ಎಂಟ್ರಿ?
ದೇಶೀಯ ಕ್ರಿಕೆಟ್‌ನಲ್ಲಿ ಸರ್ಫರಾಜ್ ಖಾನ್ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನವನ್ನೇನೋ ನೀಡುತ್ತಿದ್ದಾರೆ. ಆದರೆ ಈ ಆಟಗಾರನಿಗೆ ಟೀಂ ಇಂಡಿಯಾದ ಕದ ಮಾತ್ರ ತೆರೆದಿಲ್ಲ. ಕಳೆದ 3 ಇನ್ನಿಂಗ್ಸ್‌ಗಳಲ್ಲಿ ಸರ್ಫರಾಜ್ ಅವರ 2ನೇ ಶತಕ ಇದಾಗಿದೆ. ಅಲ್ಲದೆ ಕಳೆದ 28 ಇನ್ನಿಂಗ್ಸ್‌ಗಳಲ್ಲಿ 9 ಶತಕ ಮತ್ತು ಪ್ರಥಮ ದರ್ಜೆ ವೃತ್ತಿಜೀವನದ 50 ಇನ್ನಿಂಗ್ಸ್‌ಗಳಲ್ಲಿ 12ನೇ ಶತಕ ಇದಾಗಿದೆ. ಆದರೆ ಇಷ್ಟೆಲ್ಲ ಆದರೂ ಸರ್ಫರಾಜ್‌ಗೆ ಟೀಂ ಇಂಡಿಯಾದ ಟಿಕೆಟ್ ಸಿಕ್ಕಿಲ್ಲ. ಆದರೆ ಸರ್ಫರಾಜ್ ರನ್ ಮತ್ತು ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತಾ ಭಾರತ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಈಗ ಸರ್ಫರಾಜ್ ಅವರನ್ನು ಯಾವಾಗ ತಂಡಕ್ಕೆ ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Wed, 4 January 23