Ranji Trophy: ಮಯಾಂಕ್ ದ್ವಿಶತಕದ ಹೋರಾಟ ವ್ಯರ್ಥ; ಸೆಮಿಫೈನಲ್ನಲ್ಲಿ ಸೋತ ಕರ್ನಾಟಕ..!
Ranji Trophy 2023: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆಯನ್ನು ಮಣಿಸಿದ ಸೌರಾಷ್ಟ್ರ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆದ ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್ (Ranji Trophy) ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ (Mayank Agarwal) ಪಡೆಯನ್ನು ಮಣಿಸಿದ ಸೌರಾಷ್ಟ್ರ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಗೆಲ್ಲಲು ಕೇವಲ 115 ರನ್ಗಳ ಗೆಲುವಿನ ಗುರಿ ಪಡೆದ ಸೌರಾಷ್ಟ್ರ ತಂಡ ನಾಯಕ ಅರ್ಪಿತ್ ವಸವಡ (Arpit Vasavada) ಅವರ ಅಜೇಯ 47 ರನ್ಗಳ ನೆರವಿನಿಂದ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದೀಗ ಬಲಿಷ್ಠ ಕರ್ನಾಟಕ ತಂಡವನ್ನು ಬಗ್ಗು ಬಡಿದಿರುವ ಸೌರಾಷ್ಟ್ರ ತಂಡ ಫೈನಲ್ ಪಂದ್ಯದಲ್ಲಿ ಮನೋಜ್ ತಿವಾರಿ ನಾಯಕತ್ವದ ಬೆಂಗಾಲ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ಫೈನಲ್ ಪಂದ್ಯ ಫೆಬ್ರವರಿ 16 ರಂದು ನಡೆಯಲಿದೆ.
ಮಯಾಂಕ್ ದ್ವಿಶತಕ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಆರ್ ಸಮರ್ಥ್ ಕೇವಲ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ 9 ರನ್ಗಳಿಗೆ ಸುಸ್ತಾದರು. ನಂತರ ಬಂದ ಮನೀಶ್ ಪಾಂಡೆ, ಶ್ರೇಯಾಸ್ ಗೋಪಾಲ್ ಕೂಡ ಬಿಗ್ ಇನ್ನಿಂಗ್ಸ್ ಆಡಲಿಲ್ಲ. ಆದರೆ ಒಂದೆಡೆ ಭದ್ರವಾಗಿ ಬೇರೂರಿದ್ದ ನಾಯಕ ಮಯಾಂಕ್, ಶರತ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ಶರತ್ 66 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಮಯಾಂಕ್ 249 ರನ್ಗಳ ದ್ವಿಶತಕದ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದ ನೆರವಿನಿಂದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 407 ರನ್ ಕಲೆಹಾಕಿತು.
Ranji Trophy 2022: 14 ಬೌಂಡರಿ, 11 ಸಿಕ್ಸರ್; ರಣಜಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಮನೀಶ್ ಪಾಂಡೆ..!
ಸೌರಾಷ್ಟ್ರ ತಕ್ಕ ಹೋರಾಟ
ಈ ಬೃಹತ್ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡದ ಆರಂಭವೂ ಕೂಡ ಉತ್ತಮವಾಗಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಶೆಲ್ಡನ್ ಜಾಕ್ಸನ್ ಹಾಗೂ ಅರ್ಪಿತ್ ವಸವಡ ಶತಕದ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ಜಾಕ್ಸನ್ 160 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಅರ್ಪಿತ್ 202 ರನ್ಗಳ ಬೃಹತ್ ಇನ್ನಿಂಗ್ಸ್ ಕಟ್ಟಿದರು. ಹೀಗಾಗಿ ಸೌರಾಷ್ಟ್ರ ತಂಡ 527 ರನ್ ಗಳಿಸಿತು.
ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಆರಂಭ ಮತ್ತೊಮ್ಮೆ ಲಯ ತಪ್ಪಿತು.ಈ ಬಾರಿ ಸಮರ್ಥ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮೊದಲ ಇನ್ನಿಂಗ್ಸ್ನಂತೆ ನೆಲಕಚ್ಚಿ ನಿಂತ ನಾಯಕ ಮಯಾಂಕ್ 55 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ನಿಖಿತ್ ಜೋಶ್ 109 ರನ್ಗಳ ಶತಕದ ಇನ್ನಿಂಗ್ಸ್ ಆಡಿದರು. ಈ ಇಬ್ಬರನ್ನು ಹೊರತುಪಡಿಸಿ ತಂಡದ ಮತ್ತ್ಯಾವ ಆಟಗಾರನೂ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 234 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 115 ರನ್ಗಳ ಟಾರ್ಗೆಟ್ ಪಡೆದ ಸೌರಾಷ್ಟ್ರ ತಂಡ ಸುಲಭವಾಗಿ ಗುರಿ ಸಾಧಿಸಿತು.
ಐದು ಬಾರಿ ಫೈನಲ್‌ಗೆ ಪ್ರವೇಶಿಸಿದ ಸೌರಾಷ್ಟ್ರ
ಈ ಬಾರಿ ಫೈನಲ್‌ಗೆ ಎಂಟ್ರಿಕೊಡುವುದರೊಂದಿಗೆ ಸೌರಾಷ್ಟ್ರ ಕಳೆದ 10 ರಣಜಿ ಟ್ರೋಫಿ ಸೀಸನ್‌ಗಳಲ್ಲಿ ಐದರಲ್ಲಿ ಫೈನಲ್‌ಗೆ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಒಂದು ದಶಕದಲ್ಲಿ ಹೆಚ್ಚು ಬಾರಿ ಫೈನಲ್‌ಗಳನ್ನು ಆಡಿದ ತಂಡ ಎಂಬ ದಾಖಲೆಯನ್ನೂ ಮಾಡಿದೆ. ಈ ತಂಡದ ನಂತರ ಒಂದು ದಶಕದಲ್ಲಿ ನಾಲ್ಕು ಬಾರಿ ಫೈನಲ್ ಆಡಿದ ಮುಂಬೈ ಸ್ಥಾನ ಪಡೆದಿದೆ. ಸೌರಾಷ್ಟ್ರ ಒಟ್ಟು ಎಂಟನೇ ಬಾರಿ ಫೈನಲ್ ತಲುಪಿದೆ. ಇನ್ನೊಂದೆಡೆ ಬೆಂಗಾಲ್ ಒಟ್ಟು 15ನೇ ಬಾರಿ ಫೈನಲ್ ತಲುಪಿದ್ದು, ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಯತ್ನದಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Sun, 12 February 23