IPL 2022: ಐಪಿಎಲ್‌ನ 67ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli) ಹಾಗೂ ರಶೀದ್ ಖಾನ್ (Rashid Khan) ಅಭ್ಯಾಸದ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರೆ, ರಶೀದ್ ಖಾನ್ ಈ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ಪರ ಆಡುತ್ತಿದ್ದಾರೆ. ಇದೀಗ ಪಂದ್ಯಕ್ಕೂ ಮುನ್ನ ಭೇಟಿಯಾದ ವಿಡಿಯೋವನ್ನು ರಶೀದ್ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ನೀಡಿರುವ ವಿಶೇಷ ಉಡುಗೊರೆಯ ಬಗ್ಗೆಯೂ ರಶೀದ್ ಖಾನ್ ಪ್ರಸ್ತಾಪಿಸಿದ್ದಾರೆ.
ರಶೀದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ರಶೀದ್ ಖಾನ್ ಮತ್ತು ವಿರಾಟ್ ಕೊಹ್ಲಿ ಕೈಯಲ್ಲಿ ಬ್ಯಾಟ್ ಕಾಣಬಹುದು. ‘ನಿಮ್ಮನ್ನು ಭೇಟಿಯಾಗುವುದು ಯಾವಾಗಲೂ ಖುಷಿಯ ವಿಚಾರ ವಿರಾಟ್ ಕೊಹ್ಲಿ, ಈ ಉಡುಗೊರೆಗೆ ಧನ್ಯವಾದಗಳು’ ಎಂದು ರಶೀದ್ ಖಾನ್ ಬರೆದಿದ್ದಾರೆ. ಇಲ್ಲಿ ಕೊಹ್ಲಿ ಏನು ಉಡುಗೊರೆ ನೀಡಿದ್ದಾರೆ ಎಂದು ರಶೀದ್ ಹೇಳದಿದ್ದರೂ, ಅವರ ಕೈಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಇದೆ. ಅದನ್ನು ರಶೀದ್ ಖಾನ್ ಪರಿಶೀಲಿಸುತ್ತಿರುವುದು ಕಾಣಬಹುದು. ಹೀಗಾಗಿ ಕೊಹ್ಲಿ ಕಡೆಯಿಂದ ರಶೀದ್ ಖಾನ್ ಬ್ಯಾಟ್ವೊಂದು ಸಿಕ್ಕಿರುವುದು ಮೇಲ್ನೋಟಕ್ಕೆ ಊಹಿಸಬಹುದು.
ವಿಶೇಷ ಎಂದರೆ ಈ ವಿಡಿಯೋಗೆ ಎಸ್ಆರ್ಹೆಚ್ ಪರ ಆಡುತ್ತಿರುವ ಅಫ್ಘಾನಿಸ್ತಾನ್ ಆಟಗಾರ ಫಝಲ್ಹಕ್ ಫಾರೂಕಿ ಕೂಡ ಕಮೆಂಟ್ ಮಾಡಿದ್ದಾರೆ. ಕ್ರಿಕೆಟ್ನ ಇಬ್ಬರು ರಾಜರು ಎಂದು ಫಾರೂಕಿ ಕಮೆಂಟಿಸಿದ್ದಾರೆ. ಮತ್ತೊಂದು ಕಮೆಂಟ್ ಬಂದಿರುವುದು ದಕ್ಷಿಣ ಆಫ್ರಿಕಾ ಆಟಗಾರ ತಬ್ರೇಜ್ ಶಂಸಿ ಕಡೆಯಿಂದ ಎಂಬುದು ವಿಶೇಷ. ಈ ಹಿಂದೆ ಆರ್ಸಿಬಿ ಪರ ಆಡಿದ್ದ ಶಂಸಿ, ಬ್ಯಾಟ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಸಹೋದರ… ಶೀಘ್ರದಲ್ಲೇ ನಿಮ್ಮಿಂದ ಸಿಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
ತಬ್ರೇಜ್ ಶಂಸಿ ಹೀಗೆ ಕಮೆಂಟ್ ಮಾಡಲು ಮುಖ್ಯ ಕಾರಣ, ಐಪಿಎಲ್ ಬಳಿಕ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿ ಆಡಲಿದೆ. ಈ ವೇಳೆ ವಿರಾಟ್ ಕೊಹ್ಲಿಯ ಕಡೆಯಿಂದ ಬ್ಯಾಟ್ವೊಂದನ್ನು ಪಡೆಯುವ ಇರಾದೆಯಲ್ಲಿದ್ದಾರೆ ಸೌತ್ ಆಫ್ರಿಕಾ ಆಟಗಾರ. ಒಟ್ಟಿನಲ್ಲಿ ರಶೀದ್ ಖಾನ್ ಹಂಚಿಕೊಂಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೊಹ್ಲಿಯ ಗಿಫ್ಟ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?
ಕಳಪೆ ಫಾರ್ಮ್ನಲ್ಲಿರುವ ಕೊಹ್ಲಿ:
ಗುರುವಾರ (ಮೇ 19) ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರಶೀದ್ ಖಾನ್ ಮುಖಾಮುಖಿಯಾಗಲಿದ್ದಾರೆ. ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಕೊಹ್ಲಿಯ ಕಡೆಯಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿ ಎಂದು RCB ಅಭಿಮಾನಿಗಳು ಆಶಿಸುತ್ತಿಸದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ಕಳೆದ 13 ಪಂದ್ಯಗಳಲ್ಲಿ ಒಂದು ಅರ್ಧಶತಕದ ನೆರವಿನಿಂದ ಒಟ್ಟು 236 ರನ್ ಮಾತ್ರ ಕಲೆಹಾಕಿದ್ದಾರೆ.
ಮತ್ತೊಂದೆಡೆ, ಪ್ರಸ್ತುತ ಐಪಿಎಲ್ ರಶೀದ್ ಖಾನ್ ಅವರಿಗೆ ಇಲ್ಲಿಯವರೆಗೆ ಅತ್ಯುತ್ತಮವಾಗಿದೆ. ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ಗುಜರಾತ್ ಟೈಟನ್ಸ್ ಪರ ಒಟ್ಟು 16 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಂಡಕ್ಕೆ ಬ್ಯಾಟ್‌ನಿಂದ ಕೂಡ ಕೊಡುಗೆ ನೀಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 11 ಎಸೆತಗಳಲ್ಲಿ 31 ರನ್ ಬಾರಿಸಿದ್ದರು. ವೇಗಿ ಮಾರ್ಕೊ ಯಾನ್ಸೆನ್ ಅವರ ಕೊನೆಯ ಓವರ್‌ನಲ್ಲಿ ರಶೀದ್ ಮೂರು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.