ವಿರಾಟ್ ಕೊಹ್ಲಿ (Virat Kohli) ಕಳಪೆ ಫಾರ್ಮ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎಂಬ ವರ್ಗ ಒಂದುಕಡೆಯಾದರೆ, ಇಂಥಹ ಅದ್ಭುತ ಪ್ರತಿಭೆಯನ್ನು ಹೊರಗಿಟ್ಟರೆ ಭಾರತ (India) ತಂಡಕ್ಕೆ ಲಾಸ್ ಎಂಬ ವರ್ಗ ಮತ್ತೊಂದೆಡೆ. ಇದರ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶ್ರಾಂತಿ ನೆಪ ಹೇಳಿ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ಸರಣಿಯಿಂದ ಕೈಬಿಟ್ಟಿದೆ. ಸದ್ಯ ಸಾಗುತ್ತರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದು ಇದಕ್ಕೆಲ್ಲ ಮುಖ್ಯ ಕಾರಣ. ಟೆಸ್ಟ್ನ ಎರಡು ಇನ್ನಿಂಗ್ಸ್ನಲ್ಲಿ 11 ಮತ್ತು 10 ರನ್ ಗಳಿಸಿ ಔಟಾಗಿದ್ದ ಕೊಹ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲೂ 1 ಮತ್ತು 11 ರನ್ಗೆ ನಿರ್ಗಮಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ 25 ಎಸೆತಗಳಲ್ಲಿ 16 ರನ್ಗೆ ಔಟಾದರು. ಇದರ ಬೆನ್ನಲ್ಲೇ ಕೊಹ್ಲಿ ವಿಚಾರವಾಗಿ ಅನೇಕರು ಹೇಳಿಕೆ ನೀಡುತ್ತಿದ್ದಾರೆ.
ಹೀಗಿರುವಾಗ ಪಾಕಿಸ್ತಾನ ಕ್ರಿಕೆಟಿಗರು ಕೊಹ್ಲಿ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಒಂದು ದಿನದ ಹಿಂದೆಯಷ್ಟೆ ಕೊಹ್ಲಿ ಅವರು ಕಳಪೆ ಫಾರ್ಮ್ ಕುರಿತಾಗಿ ಇರುವ ನೋವಿನಿಂದ ಹೊರಬರಲು ಪಾಕಿಸ್ಥಾನದ ನಾಯಕ ಬಾಬರ್ ಅಜಂ ಎಲ್ಲರೂ ಈಗ ಅವರನ್ನು ಬೆಂಬಲಿಸಬೇಕಾಗಿದೆ ಎಂದು ಹೇಳಿದ್ದರು. “ಸದ್ಯದ ಪರಿಸ್ಥಿತಿಯಲ್ಲಿ ಕೊಹ್ಲಿಗೆ ಬೆಂಬಲದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾನು ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದೇನೆ. ಏಕೆಂದರೆ ಈ ಅವಧಿಯಲ್ಲಿ ಒಬ್ಬ ಆಟಗಾರನು ಹೇಗೆ ಭಾವಿಸುತ್ತಾನೆ ಎಂದು ನನಗೆ ತಿಳಿದಿದೆ ಮತ್ತು ಅವರಿಗೆ ಪ್ರತಿಯೊಬ್ಬರ ಬೆಂಬಲ ಬೇಕು,” ಎಂದು ಬಾಬರ್ ಹೇಳಿದ್ದರು.
ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ರಶೀದ್ ಲತೀಫ್ ಕೂಡ ಮಾತನಾಡಿದ್ದು, “ಟೀಮ್ ಇಂಡಿಯಾದಿಂದ ವಿರಾಟ್ ಕೊಹ್ಲಿ ಅವರನ್ನ ಕೈಬಿಡುವ ಯಾವುದೇ ಸೆಲೆಕ್ಟರ್ ಭಾರತದಲ್ಲಿ ಹುಟ್ಟಿಲ್ಲ,” ಎಂಬ ಹೇಳಿಕೆ ನೀಡಿದ್ದಾರೆ. ಯೂಟ್ಯೂಬ್ ಚಾನಲ್ವೊಂದರಲ್ಲಿ ಮಾತನಾಡಿದ ಇವರು, “ಪ್ರತಿಯೊಂದು ಪಂದ್ಯದಲ್ಲೂ ಕೊಹ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ತಂಡದಿಂದ ಅವರನ್ನ ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳಪೆ ಫಾರ್ಮ್ ನಡುವೆ ಸಹ ಕೊಹ್ಲಿಯನ್ನ ಕೈಬಿಡುವ ಬಗ್ಗೆ ಯಾವುದೇ ಆಯ್ಕೆಗಾರರು ಮುಂದಾಗುತ್ತಿಲ್ಲ,” ಎಂದು ಅವರು ಹೇಳಿಕೆ ನೀಡಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್, ಪಾಕ್ ಕ್ಯಾಪ್ಟನ್ ಬಾಬರ್ ಆಜಂ ಸೇರಿದಂತೆ ಅನೇಕರು ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಟ್ವೀಟ್ ಮಾಡಿದ್ದ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಮ್, “ದೃಢವಾಗಿರಿ, ಈ ಸಮಯ ಕಳೆದು ಹೋಗುತ್ತದೆ” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ಜೊತೆಗಿನ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ.
ಬಟ್ಲರ್ ಮಾತನಾಡಿ, “ಕೊಹ್ಲಿ ಪ್ರತಿಯೊಬ್ಬ ಕ್ರಿಕೆಟಿಗನಂತೆ ಮಾನವ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ ಮತ್ತು ಮತ್ತೊಮ್ಮೆ ಫಾರ್ಮ್‌ಗೆ ಮರಳುವ ಮೊದಲು ಒಂದೆರಡು ಕಡಿಮೆ ಸ್ಕೋರ್‌ಗಳನ್ನು ಹೊಂದಬಹುದು,” ಎಂದು ಹೇಳಿದ್ದಾರೆ. ಈ ವರ್ಷ ಇದುವರೆಗೆ ಏಳು ಏಕದಿನ ಪಂದ್ಯಗಳಿಂದ ಕೊಹ್ಲಿ ಕೇವಲ 158 ರನ್ ಗಳಿಸಿದ್ದು, ಎರಡು ಅರ್ಧಶತಕ ಬಂದಿದೆಯಷ್ಟೆ.