R Ashwin: ಮುರಳೀಧರನ್ 800 ವಿಕೆಟ್ ವಿಶ್ವ ದಾಖಲೆ ಉಡೀಸ್ ಮಾಡ್ತೀರಾ? ಪ್ರಶ್ನೆಗೆ ಅಶ್ವಿನ್ ಕೊಟ್ಟ ಉತ್ತರವೇನು ಗೊತ್ತಾ?
Ravichandran Ashwin Record: ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು, ನೀವು ಮುತ್ತಯ್ಯ ಮುರಳೀಧರ್ ಅವರ 800 ವಿಕೆಟ್ಗಳ ದಾಖಲೆ ಮುರಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ, ಅವರು ಈ ಪ್ರಶ್ನೆಗೆ ಏನು ಹೇಳಿದ್ದಾರೆ ಕೇಳಿ.
ಭಾರತ ಕ್ರಿಕೆಟ್ ತಂಡದ (Indian Cricket Team) ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಇತ್ತೀಚೆಗಷ್ಟೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ವಿಶೇಷ ಸಾಧನೆ ಮಾಡಿದರು. ಅಶ್ವಿನ್ ಸದ್ಯ 81 ಟೆಸ್ಟ್ ಪಂದ್ಯಗಳಿಂದ 427 ವಿಕೆಟ್ ಕಬಳಿಸಿದ್ದಾರೆ. ಇನ್ನು 8 ವಿಕೆಟ್ ಕಿತ್ತರೆ ಕಪಿಲ್ ದೇವ್ (Kapil Dev) ದಾಖಲೆ ಕೂಡ ಮುರಿಯಲಿದ್ದಾರೆ. ಅನಿಲ್ ಕುಂಬ್ಳೆ (Anil Kumble) 619 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಕಿತ್ತ ದಾಖಲೆ ದಿಗ್ಗಜ ಸ್ಪಿನ್ನರ್ ಶ್ರೀಲಂಕಾದ ಮುತ್ತಯ್ಯ ಮುರಳಿಧರನ್ (Muttiah Muralitharan) ಹೆಸರಲ್ಲಿದೆ, ಇವರು ಬರೋಬ್ಬರಿ 800 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಅಭಿಮಾನಿಯೊಬ್ಬರು ಅಶ್ವಿನ್ ಬಳಿ ನೀವು ಮುತ್ತಯ್ಯ ಮುರಳೀಧರನ್ ಅವರ 800 ವಿಕೆಟ್ ಸಾಧನೆ ಮುರಿಯುತ್ತೀರಾ? ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಇವರು ಏನು ಹೇಳಿದ್ರು ಕೇಳಿ.
ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ಮುರಳೀಧರನ್ ಅವರೇ ತಮ್ಮ 800 ಟೆಸ್ಟ್ ವಿಕೆಟ್‌ಗಳನ್ನು ಸರಿಗಟ್ಟಲು ಕೇವಲ ಭಾರತದ ಆರ್. ಅಶ್ವಿನ್‌ರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದರು. “ಅಶ್ವಿನ್‌ಗೆ 800 ವಿಕೆಟ್ ಗಳಿಸುವ ಅವಕಾಶವಿದೆ, ಏಕೆಂದರೆ ಅವರು ಅದ್ಭುತ ಬೌಲರ್. ಬೇರೆ ಯಾವ ಯುವ ಬೌಲರ್‌ಗಳಿಂದಲೂ 800 ವಿಕೆಟ್ ಸಾಧನೆ ಸಾಧ್ಯವಿಲ್ಲ ಎನಿಸುತ್ತದೆ. ನೇಥನ್ ಲಯನ್ ಕೂಡ ಆ ಮೈಲಿಗಲ್ಲು ತಲುಪುವಷ್ಟು ಉತ್ತಮ ಬೌಲರ್ ಅಲ್ಲ” ಎಂದು ಹೇಳಿದ್ದರು.
ಸದ್ಯ ಈ 800 ವಿಕೆಟ್ಗಳ ದಾಖಲೆ ಮುರಿಯುವ ಬಗ್ಗೆ ಅಶ್ವಿನ್ ಮಾತನಾಡಿದ್ದು, “ಮೊದಲಿಗೆ ನಾನು ಮುರಳೀಧರನ್ ದಾಖಲೆ ಮುರಿಯುವ ಬೌಲರ್ ಎಂದು ಸ್ವತಃ ಅವರೇ ಹೇಳಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ಹಿಂದೆ ನಾನೊಮ್ಮೆ ಇಂಜುರಿಗೆ ತುತ್ತಾದಾಗ ಅವರು ನನ್ನನ್ನು ಕರೆದು ‘ನಾನು ಕೂಡ ಇದೇರೀತಿ ಗಾಯಕ್ಕೆ ಒಳಗಾಗಿದ್ದೆ. ಹೀಗಾಗಿ ಗಾಯದ ಬಗ್ಗೆ ಎಚ್ಚರವಹಿಸು. ನೀನು ಇದನ್ನು ಹಗುರವಾಗಿ ಪರಿಗಣಿಸಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದಿದ್ದರು. ಅವರೊಬ್ಬ ಉತ್ತಮ ನಡತೆಯುಳ್ಳ ವ್ಯಕ್ತಿ”, ಎಂದು ಅಶ್ವಿನ್ ಹೇಳಿದ್ದಾರೆ.
“800 ವಿಕೆಟ್ಗಳ ಗುರಿ ತಲುಪುವುದು ಸುಲಭವಲ್ಲ, ಅದು ಇನ್ನೂ ಸಾಕಷ್ಟು ದೂರವಿದೆ. ನೀವೆಲ್ಲರೂ ನಾನು ಆ ಸಾಧನೆ ಮಾಡುತ್ತೇನೆ ಎಂದು ನಂಬದ್ದೀರಿ ಎಂಬುದು ನನಗೆ ತಿಳಿದಿದೆ. ಆದರೆ, ಆ ಹಾದಿ ತುಂಬಾ ದೂರದಲ್ಲಿದೆ. ಒಂದು ಸಮಯದಲ್ಲಿ ಒಂದೇ ಹೆಜ್ಜೆಯನ್ನು ಇಡೋಣ, ಒಂದೇ ಸಮಯದಲ್ಲಿ ಒಂದೇ ವಿಕೆಟ್ ಪಡೆಯೋಣ, ನಾನು ಇದರ ಬಗ್ಗೆ ಮಾತ್ರ ಯೋಚಿಸುತ್ತೇನೆ”, ಎಂಬುದು ಅಶ್ವಿನ್ ಮಾತು.
IND vs SA: ಹರಿಣಗಳ ನಾಡಿನಲ್ಲಿ ಮೊದಲ ಅಭ್ಯಾಸ ಸೆಷನ್ ಮುಗಿಸಿದ ಟೀಮ್ ಇಂಡಿಯಾ: ಫೋಟೋ ಹಂಚಿಕೊಂಡ ಕೊಹ್ಲಿ
India Tour of SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಯಾವಾಗ ಪ್ರಕಟ?: ಯಾರಿಗೆ ಚಾನ್ಸ್?
(Ravichandran Ashwin said that the Muttiah Muralitharan 800-wicket mark is so far from reach)