ಜಡೇಜಾ ಮಾತು ಕೇಳಿ ಸತತ 22 ಬಾರಿ ಯಾಮಾರಿರುವ ನಾಯಕ

Ravindra Jadeja DRS: ರವೀಂದ್ರ ಜಡೇಜಾ ಅವರ ಡಿಆರ್​ಎಸ್ ನಿರ್ಧಾರಗಳು ಟೀಮ್ ಇಂಡಿಯಾಗೆ ಹೊರೆಯಾಗುತ್ತಿವೆ. ವಿಶೇಷವಾಗಿ ಶುಭ್​ಮನ್ ಗಿಲ್ ಮೇಲೆ ಒತ್ತಡ ಹೇರಿ ಅನಗತ್ಯ ರಿವ್ಯೂಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಡೇಜಾ ಡಿಆರ್​ಎಸ್ ಯಶಸ್ಸು ಕಡಿಮೆಯಾಗಿದೆ. ನಾಯಕ ಜಡೇಜಾ ಮಾತಿಗಿಂತ ವಿಕೆಟ್ ಕೀಪರ್ ಮತ್ತು ಇತರ ಆಟಗಾರರ ಸಲಹೆಯನ್ನು ಪರಿಗಣಿಸುವುದು ಅತ್ಯಗತ್ಯ. ಇದು ತಂಡದ ವಿಮರ್ಶೆಗಳನ್ನು ಉಳಿಸಲು ಸಹಾಯಕ.

ಜಡೇಜಾ ಮಾತು ಕೇಳಿ ಸತತ 22 ಬಾರಿ ಯಾಮಾರಿರುವ ನಾಯಕ
Ravindra Jadeja

Updated on: Aug 25, 2026 | 9:22 PM

ಶುಭ್​ಮನ್ ಗಿಲ್ (Shubman Gill) ಟೀಂ ಇಂಡಿಯಾದ ನಾಯಕನಾದ ಬಳಿಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಡಿಆರ್​ಎಸ್ ತೆಗೆದುಕೊಳ್ಳುವಲ್ಲಿ ಗಿಲ್ ಪದೇ ಪದೇ ಎಡವುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಿಲ್ ತೆಗೆದುಕೊಂಡಿರುವ ಭಾಗಶಃ ಡಿಎರ್​ಎಸ್​ಗಳು ಎದುರಾಳಿ ತಂಡದ ಪರವಾಗಿ ಹೋಗಿವೆ. ಇದು ತಂಡವನ್ನು ಸಾಕಷ್ಟು ಒತ್ತಡಕ್ಕೆ ಸಿಲುಕಿಸುತ್ತಿದೆ. ತಂಡ ಮಾತ್ರವಲ್ಲದೆ ಸ್ವತಃ ನಾಯಕ ಗಿಲ್ ಕೂಡ ಯಾವುದಕ್ಕೆ ಡಿಆರ್​ಎಸ್ (DRS) ತೆಗೆದುಕೊಳ್ಳಬೇಕು ಯಾವುದಕ್ಕೆ ತೆಗೆದುಕೊಳ್ಳಬಾರದು ಎಂಬ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಇದರ ಜೊತೆಗೆ ತಂಡದಲ್ಲಿರುವ ಹಿರಿಯ ಆಟಗಾರರ ಒತ್ತಾಯ ಗಿಲ್​ಗೆ ಒತ್ತಡವನ್ನುಂಟು ಮಾಡುತ್ತಿದೆ ಎಂಬುದು ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ.

ಡಿಆರ್​ಎಸ್​ನಲ್ಲಿ ಅಷ್ಟು ಯಶಸ್ವಿಯಾಗಿಲ್ಲ

ಅದರಲ್ಲೂ ತಂಡದಲ್ಲಿರುವ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಡಿಆರ್​ಎಸ್ ತೆಗೆದುಕೊಳ್ಳಲು ಶುಭ್​ಮನ್ ಗಿಲ್ ಮೇಲೆ ಹೇರುತ್ತಿರುವ ಒತ್ತಡ ತಂಡಕ್ಕೆ ಹೊರೆಯಾಗುತ್ತಿದೆ. ರವೀಂದ್ರ ಜಡೇಜಾ ಮಾತುಗಳನ್ನು ಕೇಳಿ ಡಿಆರ್​ಎಸ್ ತೆಗೆದುಕೊಳ್ಳುವ ಗಿಲ್​ಗೆ ಯಶಸ್ಸು ಗಗನ ಕುಸುಮವಾಗಿದೆ. ಶ್ರೀಲಂಕಾ ಪ್ರವಾಸದಲ್ಲೂ ಇದೇ ಮುಂದುವರೆದಿದೆ. ಅಂಕಿ ಅಂಶಗಳನ್ನೇ ನೋಡುವುದಾದರೆ.. ಜಡೇಜಾ ಕಳೆದ ಮೂರು ವರ್ಷಗಳಿಂದಲೂ ಜಡೇಜಾ ಡಿಆರ್​ಎಸ್​ನಲ್ಲಿ ಅಷ್ಟು ಯಶಸ್ವಿಯಾಗಿಲ್ಲ.

ಶ್ರೀಲಂಕಾ ವಿರುದ್ಧದ ಕೊಲಂಬೊ ಟೆಸ್ಟ್‌ನ ಮೂರನೇ ದಿನದಂದು ಜಡೇಜಾ, ಕೇಶರ ನುವಂತ ವಿರುದ್ಧ ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದರು. ಆದರೆ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದರು, ಆದರೆ ಜಡೇಜಾ ಗಿಲ್ ಅವರನ್ನು ರಿವ್ಯೂ ತೆಗೆದುಕೊಳ್ಳಲು ಕೇಳಿದರು. ಅದರಂತೆ ಗಿಲ್‌ ರಿವ್ಯೂ ಕೂಡ ತೆಗೆದುಕೊಂಡರು. ಆದರೆ ರಿವ್ಯೂವ್​ನಲ್ಲಿ ಚೆಂಡು ಕೇಶರ ನುವಂತ ಅವರ ಬ್ಯಾಟ್‌ನ ಅಂಚಿಗೆ ತಗುಲಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಹೀಗಾಗಿ ಟೀಂ ಇಂಡಿಯಾದ ರಿವ್ಯೂ ಕಳೆದುಕೊಂಡಿತು.

ಜಡೇಜಾ ಆತುರದ ನಿರ್ಧಾರ ತಂಡಕ್ಕೆ ಹೊರೆ

ಟೆಸ್ಟ್ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಸಲ್ಲಿಸಿರುವ ಕೊನೆಯ 22 ಡಿಆರ್‌ಎಸ್ ಮೇಲ್ಮನವಿಗಳು ಎದುರಾಳಿ ತಂಡದ ಪರ ಹೋಗಿವೆ. ಇದರಲ್ಲಿ ಕೇವಲ ನಾಲ್ಕು ಡಿಆರ್​ಎಸ್​ಗಳು ಮಾತ್ರ ‘ಅಂಪೈರ್ ಕಾಲ್ಸ್​ ಆಗಿದ್ದರೆ, ಉಳಿದವು ಜಡೇಜಾರ ಆತುರದ ನಿರ್ಧಾರಗಳಿಂದ ತಂಡಕ್ಕೆ ಹೊರೆಯಾಗಿವೆ. ಜಡೇಜಾ ಅವರ ಕೊನೆಯ ಯಶಸ್ವಿ ಡಿಆರ್‌ಎಸ್ ಮೇಲ್ಮನವಿ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಡೊಮಿನಿಕಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬಂದಿತ್ತು. ಆ ಡಿಆರ್​ಎಸ್​ನಲ್ಲಿ ಕೇಮರ್ ರೋಚ್ ವಿಕೆಟ್ ಪತನವಾಗಿತ್ತು.

ಅತಿ ಹೆಚ್ಚು ಟೆಸ್ಟ್ ಗೆಲುವು; ರೋಹಿತ್-ಕೊಹ್ಲಿ ದಾಖಲೆ ಮುರಿದ ಶುಭ್​ಮನ್ ಗಿಲ್

ಅಂದಿನಿಂದ ಜಡೇಜಾ ಬೌಲರ್ ಆಗಿ ಒಂದೇ ಒಂದು ಯಶಸ್ವಿ ಡಿಆರ್‌ಎಸ್ ಅನ್ನು ಹೊಂದಿಲ್ಲ. ಇತ್ತ ಜಡೇಜಾ ಅವರ ಸಲಹೆಯನ್ನು ಪಾಲಿಸುವ ಮೂಲಕ ಟೀಂ ಇಂಡಿಯಾ ವಿಮರ್ಶೆಗಳನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಜಡೇಜಾ ಇನ್ನಾದರೂ ಡಿಆರ್​ಎಸ್ ತೆಗೆದುಕೊಳ್ಳಲು ಆತುರ ಮಾಡದಿರಲಿ. ಇತ್ತ ನಾಯಕನೂ ಕೂಡ ಜಡೇಜಾ ಮಾತಿಗಿಂತ ಹೆಚ್ಚಾಗಿ ವಿಕೆಟ್ ಕೀಪರ್ ಹಾಗೂ ಇತರ ಆಟಗಾರರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 pm, Tue, 25 August 26

Loading...
Unable to load recommendations.
Follow Us