‘2027 ರ ವಿಶ್ವಕಪ್ ಆಡುವ ಬಯಕೆ ಇದೆ’; ಏಕದಿನ ತಂಡದಿಂದ ಕೈಬಿಟ್ಟ ಬಗ್ಗೆ ಮೌನ ಮುರಿದ ಜಡೇಜಾ

Ravindra Jadeja: 2025ರ ಚಾಂಪಿಯನ್ಸ್ ಟ್ರೋಫಿ ವಿಜೇತ ರವೀಂದ್ರ ಜಡೇಜಾ ಅವರನ್ನು ಆಸ್ಟ್ರೇಲಿಯಾ ಪ್ರವಾಸದ ಏಕದಿನ ತಂಡದಿಂದ ಕೈಬಿಡಲಾಗಿದೆ. ಈ ನಿರ್ಧಾರ ತನಗೆ ಅಚ್ಚರಿ ತಂದಿಲ್ಲ ಎಂದು ಜಡೇಜಾ ಹೇಳಿದ್ದಾರೆ. ಆಯ್ಕೆ ಮಂಡಳಿಯ ಮುಖ್ಯಸ್ಥ ಅಜಿತ್ ಅಗರ್ಕರ್, ತಂಡದ ಸಮತೋಲನಕ್ಕಾಗಿ ಇಬ್ಬರು ಎಡಗೈ ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಸಮರ್ಥಿಸಿದ್ದಾರೆ. ವಿಶ್ವಕಪ್ ಗೆಲ್ಲುವ ತನ್ನ ಕನಸು ಮುಂದುವರೆದಿದೆ ಎಂದು ಜಡೇಜಾ ತಿಳಿಸಿದ್ದಾರೆ.

‘2027 ರ ವಿಶ್ವಕಪ್ ಆಡುವ ಬಯಕೆ ಇದೆ’; ಏಕದಿನ ತಂಡದಿಂದ ಕೈಬಿಟ್ಟ ಬಗ್ಗೆ ಮೌನ ಮುರಿದ ಜಡೇಜಾ
Ravindra Jadeja

Updated on: Oct 11, 2025 | 10:40 PM

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ಕೈಬಿಡಲಾಗಿದೆ. ಆಯ್ಕೆ ಮಂಡಳಿಯ ಈ ನಿರ್ಧಾರ ಆಶ್ಚರ್ಯಕರವಾಗಿದೆ. ಕೆಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ಜಡೇಜಾರನ್ನು ಏಕೆ ಏಕದಿನ ತಂಡದಿಂದ ಕೈಬಿಡಲಾಗಿದೆ ಎಂಬುದಕ್ಕೆ ಇದುವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಆದಾಗ್ಯೂ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ರವೀಂದ್ರ ಜಡೇಜಾ ಬಳಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ತಂಡದಿಂದ ನನ್ನನ್ನು ಕೈಬಿಟ್ಟಿರುವುದು ಅಚ್ಚರಿಯೇನಲ್ಲ ಎಂದಿದ್ದಾರೆ.

ಆಯ್ಕೆ ನನ್ನ ಕೈಯಲ್ಲಿಲ್ಲ

ಪತ್ರಿಕಾಗೋಷ್ಠಿಯಲ್ಲಿ ತಾನು ಆಯ್ಕೆಯಾಗದಿರುವ ಬಗ್ಗೆ ಮಾತನಾಡಿದ ಜಡೇಜಾ, ‘ಆಯ್ಕೆ ನನ್ನ ಕೈಯಲ್ಲಿಲ್ಲ. ನಾನು ಖಂಡಿತವಾಗಿಯೂ 2027 ರ ಏಕದಿನ ವಿಶ್ವಕಪ್ ಆಡಲು ಬಯಸುತ್ತೇನೆ. ಆದರೆ ತಂಡದ ನಿರ್ವಹಣೆ, ಆಯ್ಕೆದಾರರು, ತರಬೇತುದಾರ ಮತ್ತು ನಾಯಕನಿಗೆ ಅವರದೇ ಆದ ದೃಷ್ಟಿಕೋನಗಳಿವೆ. ಅವರು ನನ್ನೊಂದಿಗೆ ಮಾತನಾಡಿದರು, ಆದ್ದರಿಂದ ತಂಡವನ್ನು ಘೋಷಿಸಿದಾಗ ನನಗೆ ಆಶ್ಚರ್ಯವಾಗಲಿಲ್ಲ.

ನನಗೆ ಅವಕಾಶ ಸಿಕ್ಕಾಗಲೆಲ್ಲಾ, ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ಮುಂಬರುವ ಏಕದಿನ ಮತ್ತು ವಿಶ್ವಕಪ್‌ನಲ್ಲಿ ಆಡಲು ಮತ್ತು ಉತ್ತಮ ಪ್ರದರ್ಶನ ನೀಡಲು ಅವಕಾಶ ಸಿಕ್ಕರೆ, ಅದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು. ವಿಶ್ವಕಪ್ ಗೆಲ್ಲುವುದು ಪ್ರತಿಯೊಬ್ಬ ಆಟಗಾರನ ಕನಸು. ನಾವು ಕಳೆದ ಬಾರಿ ತುಂಬಾ ಹತ್ತಿರ ಬಂದು ವಿಫಲರಾಗಿದ್ದೇವು. ಆದರೆ ಮುಂದಿನ ಬಾರಿ ಅದನ್ನು ಸಾಧಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಅಗರ್ಕರ್ ಹೇಳಿದ್ದೇನು?

ಇನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವಾಗ ಜಡೇಜಾ ಬಗ್ಗೆ ಮಾತನಾಡಿದ್ದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ‘ಜಡೇಜಾ ಏಕದಿನ ತಂಡದ ಯೋಜನೆಗಳ ಭಾಗವಾಗಿದ್ದಾರೆ. ಜಡೇಜಾ ಒಬ್ಬ ಅದ್ಭುತ ಆಟಗಾರ, ಆದರೆ ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಇಬ್ಬರು ಎಡಗೈ ಸ್ಪಿನ್ನರ್‌ಗಳನ್ನು ಹೊಂದಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾವು ಈ ಬಾರಿ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ್ದೇವೆ. ಇದು ತಂಡದ ಸಮತೋಲನದ ವಿಷಯ, ಅದನ್ನು ಬಿಟ್ಟು ಇನ್ನೇನೂ ಇಲ್ಲ’ ಎಂದಿದ್ದರು.

IND vs WI: ಜಡೇಜಾ ಸ್ಪಿನ್ ಜಾದೂ.. ಎರಡನೇ ಟೆಸ್ಟ್​​ನಲ್ಲೂ ಮುಗ್ಗರಿಸಿದ ವೆಸ್ಟ್ ಇಂಡೀಸ್

ಜಡೇಜಾ ಏಕದಿನ ಪ್ರದರ್ಶನ

ಇಲ್ಲಿಯವರೆಗೆ 204 ಏಕದಿನ ಪಂದ್ಯಗಳನ್ನು ಆಡಿರುವ ಜಡೇಜಾ 231 ವಿಕೆಟ್‌ಗಳನ್ನು ಉರುಳಿಸಿದ್ದು, 2,806 ರನ್‌ಗಳನ್ನು ಕಲೆಹಾಕಿದ್ದಾರೆ. ಕೊನೆಯದಾಗಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿಯಲ್ಲಿ ಭಾರತದ ಪರ ಏಕದಿನ ಪಂದ್ಯವನ್ನು ಆಡಿರುವ ಜಡೇಜಾಗೆ ಮುಂದಿನ ತವರು ಸರಣಿಯಲ್ಲಿ ಅವಕಾಶ ಸಿಗುತ್ತದ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:37 pm, Sat, 11 October 25